Advertisement

ಗೊಂದಲಮಯವಾಗಿದೆ ಬೆಳೆ ಖರೀದಿ ತಂತ್ರಾಂಶ

09:29 PM Jan 21, 2020 | Team Udayavani |

ಹುಳಿಯಾರು: ಕೇಂದ್ರ ಸರ್ಕಾರ ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ಖರೀದಿಸುತ್ತಿರುವುದು ರೈತರಲ್ಲಿ ಮಂದಹಾಸ ಮೂಡಿಸಿದ್ದರೆ, ಅದಕ್ಕಾಗಿ ಸಿದ್ಧಪಡಿಸಿರುವ ಫ್ರೂಟ್‌ ತಂತ್ರಾಂಶದಲ್ಲಿರುವ ಹಲವು ತಾಂತ್ರಿಕ ಸಮಸ್ಯೆಗಳಿಂದಾಗಿ ರೈತರು ಮತ್ತೂಂದು ಸಮಸ್ಯೆಗೆ ಸಿಲುಕಿದ್ದಾರೆ. ಬೆಂಬಲ ಬೆಲೆಗೆ ರಾಗಿ ಮಾರಾಟ ಮಾಡುವುದಿರಲಿ, ತಂತ್ರಾಂಶದಲ್ಲಿ ನೋಂದಣಿಯನ್ನೇ ಮಾಡಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಉಂಟಾಗಿದ್ದು, ಹೀಗಾಗಿ ಸಾವಿರಾರು ರೈತರು ಬೆಂಬಲ ಬೆಲೆ ಯೋಜನೆಯಿಂದ ವಂಚಿತರಾಗುವ ಪರಿಸ್ಥಿತಿ ಉಂಟಾಗಿದೆ.

Advertisement

ರಾಗಿಗೆ ಉತ್ತಮ ಬೆಲೆ: ಬೆಂಬಲ ಬೆಲೆ ಯೋಜನೆಯಲ್ಲಿ ರಾಗಿಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದ ರೈತರು, ತಮ್ಮ ಹೆಸರು ನೋಂದಣಿಗಾಗಿ ಖರೀದಿ ಕೇಂದ್ರಗಳಿಗೆ ಮುಗಿಬಿದ್ದಿದ್ದಾರೆ. ಆದರೆ ಸರ್ಕಾರದ ನಿಯಮಗಳು ರೈತರಿಗೆ ಸಂಕಷ್ಟ ತಂದೊಡ್ಡಿವೆ. ಉತ್ಸಾಹದಿಂದ ನೋಂದಣಿಗೆಂದು ಹೋದವರು ನಿಯಮಗಳ ಕ್ಲಿಷ್ಟತೆಯಿಂದಾಗಿ ನಿರಾಸೆಯಿಂದ ಮರಳುವಂತಾಗಿದೆ.

ರಾಗಿ ಖರೀದಿ ನೋಂದಣಿಗೆ ಪಹಣಿ, ಬೆಳೆ ದೃಢೀಕರಣಪತ್ರ, ಬ್ಯಾಂಕ್‌ ಪಾಸ್‌ ಬುಕ್‌ ನಕಲು ಪ್ರತಿ ನೀಡಬೇಕಿತ್ತು. ಆದರೆ ಈಗ ಯಾವ ದಾಖಲೆಯೂ ಇಲ್ಲದೇ ಕೃಷಿ ಇಲಾಖೆಯಿಂದ ನೀಡುವ ಫ್ರೂಟ್ಸ್‌ ಗುರುತಿನ ಸಂಖ್ಯೆ ಮಾತ್ರ ನೀಡಿ ಹೆಸರು ನೋಂದಾಯಿಸಬೇಕಿದೆ. ಇದಕ್ಕಾಗಿ ರೈತರು ಕಚೇರಿಗೆ ನಿತ್ಯ ಅಲೆದಾಡಬೇಕಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಂತ್ರಾಂಶದಲ್ಲಿನ ಸಮಸ್ಯೆಗಳು: ಬೆಂಬಲ ಬೆಲೆ ನೀಡಿ ರೈತರ ಬೆಳೆಗಳ ಖರೀದಿಗಾಗಿಯೇ ಸಿದ್ಧ ಪಡಿಸಿರುವ ತಂತ್ರಾಂಶ ಫ್ರೂಟ್‌, ಗೊಂದಲಮಯವಾಗಿದೆ. ರೈತರು ತಮ್ಮ ಗದ್ದೆಯಲ್ಲಿ ರಾಗಿ ಬೆಳೆದಿದ್ದರೆ ಬೇರೆ ಬೆಳೆ ತೋರಿಸುತ್ತದೆ. ಕೆಲವರಿಗೆ ಬೆಳೆಯನ್ನೇ ಬೆಳೆದಿಲ್ಲ ಎಂದು ತೋರಿಸಿದರೆ, ಇನ್ನು ಕೆಲವರು ಬೆಳೆಯದಿದ್ದರೂ ಬೆಳೆ ತೋರಿಸುತ್ತಿದೆ. ಹೀಗಾಗಿ ನೋ ಕ್ರಾಪ್‌ ಎಂದು ಹೇಳಿ ನೋಂದಣಿಯನ್ನು ತಿರಸ್ಕರಿಸುತ್ತಿದೆ.

ಅಲ್ಲದೆ ತಂತ್ರಾಂಶದಲ್ಲಿ ಬೆಳೆ ಬದಲಿಸಿ ರಾಗಿ ಸೇರಿಸುವುದು ಹೇಗೆ ಎಂಬುದಕ್ಕೂ ಪರಿಹಾರವೂ ಇಲ್ಲ. ಅಧಿಕಾರಿಗಳನ್ನು ಕೇಳಿದರೆ ನಮಗೆ ಗೊತ್ತಿಲ್ಲ ಎನ್ನುತ್ತಿದ್ದಾರೆ. ಜತೆಗೆ ಕಚೇರಿಗೆ ಅಲೆದಾಡುವುದು, ಸರ್ವರ್‌ ಸಮಸ್ಯೆ ಸೇರಿದಂತೆ ಹಲವು ತೊಂದರೆಗಳಿಂದಾಗಿ, ರೈತರು ರೋಸಿ, ಖರೀಧಿ ಕೇಂದ್ರದಲ್ಲಿ ತಮ್ಮ ಧಾನ್ಯ ಮಾರಾಟವೇ ಬೇಡ ಎಂದು ಕೈಚೆಲ್ಲುತ್ತಿದ್ದಾರೆ. ಸರ್ಕಾರ ಸಣ್ಣ ಮತ್ತು ದೊಡ್ಡ ಹಿಡುವಳಿದಾರರು ಎಂಬ ವಿಂಗಡಣೆ ಮಾಡಿದೆ.

Advertisement

5 ಎಕರೆಗಿಂತ ಹೆಚ್ಚು ಜಮೀನಿದ್ದು ರಾಗಿ ಬೆಳೆದಿದ್ದರೂ ಆತನ ನೋಂದಣಿ ಮಾಡಿಕೊಳ್ಳದೆ ಹಿಂದಿರುಗಿಸುತ್ತಿದ್ದಾರೆ. ಇದರಿಂದ ಸರ್ಕಾರದ ಬೆಂಬಲ ಬೆಲೆ ಎಲ್ಲಾ ರೈತರಿಗೂ ಸಿಗದಂತಾಗಿದೆ. ರೈತರಲ್ಲಿ ತಾರತಮ್ಯ ಮಾಡುತ್ತಿರುವ ಈ ಧೋರಣೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಹೀಗಾಗಿ ರೈತರು, ಖರೀದಿ ಕೇಂದ್ರಗಳ ಹೋಗುವುದು ಕಡಿಮೆಯಾಗುತ್ತಿದೆ. ತಂತ್ರಾಂಶದ ಎಡವಟ್ಟಿನಿಂದ ರೈತರು ತೊಂದರೆ ಅನುಭವಿಸುವಂತಾಗಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು, ತಂತ್ರಾಂಶ ಹಾಗೂ ಖರೀದಿ ವ್ಯವಸ್ಥೆಯನ್ನು ಸುಗಮಗೊಳಿಸಬೇಕಿದೆ.

ಫ್ರೂಟ್‌ ತಂತ್ರಾಂಶದಿಂದ ರೈತರಿಗೆ ಅನಾನುಕೂಲವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ರೈತರ ಅನುಕೂಲಕ್ಕಾಗಿ ಸರ್ಕಾರ “ಬೆಳೆ ದರ್ಶಕ’ ಆಪ್‌ ಸಿದ್ಧಪಡಿಸಿದೆ. ರೈತರು ನೇರವಾಗಿ ಆಪ್‌ನಿಂದ ತಮ್ಮ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಗೂಗಲ್‌ ಪ್ಲೇ ಸ್ಟೋರ್‌ನಿಂದ ಆಪ್‌ ಹಾಕಿಕೊಂಡು, ಸರ್ವೇ ನಂಬರ್‌ ದಾಖಲಿಸಿ, ಬೆಳೆ ಮಾಹಿತಿ ನೋಡಬಹುದು. ಬೆಳೆ ಬದಲಾಗಿದ್ದರೆ ಆಕ್ಷೇಪಣೆ ಸಲ್ಲಿಸಿ, ರೈತ ಸಂಪರ್ಕ ಕೇಂದ್ರಗಳಿಗೆ ದೂರು ನೀಡಬಹುದು. ದೂರು ಸಲ್ಲಿಸಲು ಜ.30 ಕೊನೆ ದಿನ.
-ಡಿ.ಆರ್‌.ಹನುಮಂತರಾಜು, ಸಹಾಯಕ ಕೃಷಿ ನಿರ್ದೇಶಕ

ನನ್ನ ಪಹಣಿಯಲ್ಲಿ ರಾಗಿ ಬೆಳೆ ಎಂದು ನಮೂದಾಗಿದೆ. ಆದರೆ ಫ್ರೂಟ್ಸ್‌ ತಂತ್ರಾಂಶದಲ್ಲಿ ಜೋಳ ಎಂದು ಬರುತ್ತಿದೆ. ಹೀಗಾಗಿ ರಾಗಿ ಖರೀದಿಸುತ್ತಿಲ್ಲ. ಜತೆಗೆ ಅದನ್ನು ಸರಿಪಡಿಸುವುದು ಹೇಗೆ ಎಂಬ ಮಾಹಿತಿಯನ್ನೂ ನೀಡುತ್ತಿಲ್ಲ. ಬೆಳೆ ಸಮೀಕ್ಷೆದಾರರ ಎಡವಟ್ಟಿನಿಂದ ತೊಂದರೆ ಅನುಭವಿಸುವಂತಾಗಿದೆ. ಇಲ್ಲವಾದಲ್ಲಿ ಜಮೀನಿಗೆ ಭೇಟಿ ನೀಡಿ, ರಾಗಿ ಖರೀದಿಸಲಿ.
-ನಿಂಗಪ್ಪ, ರಾಗಿ ಬೆಳೆಗಾರ, ಕೆಂಕೆರೆ

ನನ್ನ ಹೆಸರಿನಲ್ಲಿ ಹತ್ತದಿನೈದು ಎಕರೆ ಜಮೀನಿದ್ದು ಐವತ್ತರವತ್ತು ಚೀಲ ರಾಗಿ ಬೆಳೆದಿದ್ದೇನೆ. ಈಗ ಬೆಂಬಲ ಬೆಲೆಯಲ್ಲಿ ರಾಗಿ ಮಾರಲು ನೋಂದಣಿ ಮಾಡಿಸಲು ಹೋದರೆ ನೀವು ದೊಡ್ಡ ಹಿಡುವಳಿದಾರರು ಎಂದೇಳಿ ಅಧಿಕಾರಿಗಳು ಹೆಸರು ನೋಂದಾಯಿಸಿಕೊಳ್ಳದೆ ವಾಪಸ್‌ ಕಳುಹಿಸಿದರು. ನನ್ನಂತೆಯೇ ಅನೇಕ ರೈತರು ಹೆಸರು ನೋಂದಾಯಿಸಲಾಗದೆ ವಾಪಸ್‌ ಹೋಗಿದ್ದಾರೆ. ಸರ್ಕಾರಕ್ಕೆ ರೈತರ ಮೇಲೆ ನೈಜ ಕಾಳಜಿಯಿದ್ದರೆ ಮೊದಲು ಈ ವಿಂಗಡಣೆ ರದ್ದುಪಡಿಸಬೇಕು.
-ನಿಜಗುಣಮೂರ್ತಿ, ರಾಗಿಬೆಳೆಗಾರ, ಕೆಂಗಲಾಪುರ

ಅಧಿಕಾರಿಗಳು ಜಮೀನಿಗೆ ಬರದೆ ಕಚೇರಿಯಲ್ಲೇ ಕುಳಿದು ಬೇಜವಾಬ್ದಾರಿ ತೋರಿದ್ದಾರೆ. ಹೀಗಾಗಿಯೇ ತಂತ್ರಾಂಶದಲ್ಲಿ ಕೆಲ ರೈತರ ಪಹಣಿಗಳಲ್ಲಿ “ನೋ ಕ್ರಾಪ್‌’ ಎಂದು ತೋರಿಸುತ್ತಿದೆ. ಹೀಗಾಗಿ ಫ್ರೂಟ್‌ ತಂತ್ರಾಶ ಕೈಬಿಟ್ಟು, ಹಿಂದಿನಂತೆ ಬೆಳೆ ದೃಢೀಕರಣ ಪತ್ರ ಪಡೆದು ನೋಂದಣಿ ಮಾಡಿಕೊಂಡು ರಾಗಿ ಖರೀದಿಸಬೇಕು.
-ಕೆಂಕೆರೆ ಸತೀಶ್‌, ರಾಜ್ಯ ಉಪಾಧ್ಯಕ್ಷ ರೈತ ಸಂಘ

* ಎಚ್‌.ಬಿ.ಕಿರಣ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next