Advertisement

ನೇಪಾಲದಲ್ಲಿ ಚೀನಕ್ಕೆ ಮುಖಭಂಗ; ಆಡಳಿತ ಪಕ್ಷದಲ್ಲಿ ಚೀನ ರಾಯಭಾರಿ ಹಸ್ತಕ್ಷೇಪ; ವ್ಯಾಪಕ ಖಂಡನೆ

08:58 AM Jul 08, 2020 | mahesh |

ಕಠ್ಮಂಡು: ನೇಪಾಲ ಸರಕಾರದ ಜುಟ್ಟನ್ನು ಕೈಯಲ್ಲಿ ಹಿಡಿಯಲೆತ್ನಿಸುತ್ತಿರುವ ಚೀನಕ್ಕೆ ತೀವ್ರ ಮುಖಭಂಗವಾಗಿದೆ. ನೇಪಾಲ ಕಮ್ಯುನಿಸ್ಟ್‌ ಪಕ್ಷದಲ್ಲಿ ಚೀನ ರಾಯಭಾರಿ ಹೌ ಯಾಂಖೀಯ ಹಸ್ತಕ್ಷೇಪದ ಬಗ್ಗೆ ವಿಪಕ್ಷಗಳಲ್ಲದೆ, ಸ್ವಪಕ್ಷೀಯರಿಂದಲೂ ಅಸಮಾಧಾನ ಸ್ಫೋಟಗೊಂಡಿದೆ.  ಹೌ ಯಾಂಖೀ ಚೀನದ ಚಾಲಾಕಿ ಮಹಿಳೆ. ನೇಪಾಲದ ಅತ್ಯಂತ ಪ್ರಭಾವಿ ರಾಜತಾಂತ್ರಿಕ ಅಧಿಕಾರಿ­ಯಾ­­ಗಿರುವ ಹೌ, ಭಾರತ ವಿರುದ್ಧ ನಕ್ಷೆಯ ಜಗಳ ತೆಗೆಯಲು ಕಿಡಿಹಚ್ಚಿ­ದ್ದರು. ಈಗ ಇವತ್ತೋ, ನಾಳೆಯೋ ಬೀಳುವ ಸ್ಥಿತಿಯಲ್ಲಿರುವ ಕೆ.ಪಿ. ಶರ್ಮಾ ಓಲಿ ಸರಕಾರವನ್ನು ರಕ್ಷಿಸಲು ಹೌ ಶತಾಯ­ಗತಾಯ ಯತ್ನಿಸುತ್ತಿದ್ದಾರೆ.

Advertisement

ಪ್ರಚಂಡ ನಕಾರ: ಓಲಿಯನ್ನು ಹೇಗಾದರೂ ಪ್ರಧಾನಿ ಕುರ್ಚಿಯಿಂದ ಇಳಿಸಬೇಕೆಂದು ಪಟ್ಟುಹಿಡಿದಿರುವ ಮಾಜಿ ಪ್ರಧಾನಿ ಪ್ರಚಂಡರನ್ನು ಹೌ ಇತ್ತೀಚೆಗಷ್ಟೇ ಭೇಟಿಯಾಗಿದ್ದರು. ಆದರೆ, ಪ್ರಚಂಡ ಅರೆಮನಸ್ಕರಾಗಿ ಹೌ ಜತೆ ಮಾತುಕತೆ ನಡೆಸಿದ್ದರು. ಈಗ ಮತ್ತೂಂದು ಭೇಟಿಗೆ ಹೌ ಯತ್ನಿಸು­ತ್ತಿದ್ದರೂ ಪ್ರಚಂಡ ಕೈಗೆ ಸಿಗುತ್ತಿಲ್ಲ ಎನ್ನುತ್ತಿವೆ ನೇಪಾಲ ಮಾಧ್ಯಮಗಳು. ಹೌ ಇತ್ತೀಚೆಗೆ ರಾಷ್ಟ್ರಾಧ್ಯಕ್ಷೆ ಬಿದ್ಯಾ ಭಂಡಾರಿಯನ್ನೂ ಭೇಟಿ ಮಾಡಿದ್ದರು.

ಹೌ ಹರಸಾಹಸ: ಇನ್ನೊಂದೆಡೆ ಆಡಳಿತ ಪಕ್ಷದ ಭಿನ್ನಮತ ಶಮನಗೊಳಿಸಲು ಚೀನ ನೇರವಾಗಿ ಹಸ್ತಕ್ಷೇಪ ಮಾಡುತ್ತಿ­ರುವುದನ್ನು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿವೆ. ಇಷ್ಟೆಲ್ಲದರ ನಡುವೆಯೂ ಹೌ, ನೇಪಾಲ ಕಮ್ಯುನಿಸ್ಟ್‌ ಪಕ್ಷದ ಹಿರಿಯ ನಾಯಕ ಮಾಧವ್‌ ಕುಮಾರ್‌ ಜತೆ ಮಂಗಳವಾರ ಸುದೀರ್ಘ‌ ಚರ್ಚೆ ನಡೆಸಿದ್ದಾರೆ. ಬುಧವಾರ ನಡೆಯುವ ಎನ್‌ಸಿಪಿಯ ಸ್ಥಾಯಿ ಸಮಿತಿ ಸಭೆಯಲ್ಲಿ ಓಲಿ ವಿರುದ್ಧ ಭಿನ್ನಮತ ಸ್ಫೋಟಗೊಳ್ಳುವ ಸಂಭವವಿದ್ದು, ಅದನ್ನು ಮುಂಚಿತವಾಗಿ ತಣಿಸಲು ಹೌ ಇನ್ನಿಲ್ಲದ ಸರ್ಕಸ್‌ ನಡೆಸುತ್ತಿದ್ದಾರೆ.

ಚೀನ ಸಮರ್ಥನೆ: ಚೀನ ಹಸ್ತಕ್ಷೇಪವನ್ನು ಸ್ವತಃ  ನೇಪಾಲದ ಆಡಳಿತ ಪಕ್ಷದ ಪ್ರಮುಖರೇ ವಿರೋಧಿ­ಸುತ್ತಿದ್ದಾರೆ. ಆದರೂ ಚೀನ ಮಾತ್ರ ಹೌ ಅವರ ಸಭೆಗಳನ್ನು ಸಮರ್ಥಿಸಿ­ಕೊಳ್ಳುತ್ತಿದೆ. “ರಾಯಭಾರ ಕಚೇರಿಯು ಎನ್‌ಸಿಪಿಯೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುತ್ತದೆ. ನೇಪಾಲ ಕಮ್ಯುನಿಸ್ಟ್‌ ಪಕ್ಷದ ಭಿನ್ನಮತ ಪರಿಹರಿಸುವ ವಿಚಾರದಲ್ಲಿ ಚೀನ ಮಧ್ಯಸ್ಥಿಕೆ ವಹಿಸಲು ಸಿದ್ಧವಾಗಿದೆ’ ಎಂದು ಹೇಳಿದೆ.

ಅಮೆರಿಕ, ಆಸ್ಟ್ರೇಲಿಯಾದಲ್ಲೂ ಚೀನೀ ಆ್ಯಪ್‌ಗ್ಳ ನಿಷೇಧ?
ಗಾಲ್ವಾನ್‌ ಘರ್ಷಣೆಯ ಅನಂತರ ಭಾರತ ಟಿಕ್‌ಟಾಕ್‌ ಸೇರಿದಂತೆ ಚೀನದ 59 ಆ್ಯಪ್‌ಗ್ಳನ್ನು ನಿಷೇಧಿಸಿತ್ತು. ಈಗ ಅಮೆರಿಕ ಮತ್ತು ಆಸ್ಟ್ರೇಲಿಯಾ ಕೂಡ ಚೀನೀ ಆ್ಯಪ್‌ಗ್ಳಿಗೆ ಗೇಟ್‌ಪಾಸ್‌ ನೀಡಲು ಗಂಭೀರವಾಗಿ ಚಿಂತಿಸು­ತ್ತಿವೆ. “ನಾನು ಅಮೆರಿಕ ಅಧ್ಯಕ್ಷರಿಗಿಂತ ದೊಡ್ಡವನೇನಲ್ಲ. ಆದರೂ ಅಧ್ಯಕ್ಷ ಟ್ರಂಪ್‌ ಟಿಕ್‌ಟಾಕ್‌ ಮುಂತಾದ ಚೀನೀ ಆ್ಯಪ್‌ಗ್ಳನ್ನು ನಿಷೇಧಿಸಲು ಗಂಭೀರವಾಗಿ ಚಿಂತಿಸು­ತ್ತಿದ್ದಾರೆ ಎಂಬುದನ್ನು ನಿಮ್ಮ ಮುಂದೆ ತಿಳಿಸುತ್ತಿ­ದ್ದೇನೆ’ ಎಂದು ಅಮೆರಿಕ ಗೃಹ ಕಾರ್ಯದರ್ಶಿ ಮೈಕ್‌ ಪೊಂಪೊ ಮಾಧ್ಯಮ­ದವರಿಗೆ ಸುಳಿವು ನೀಡಿದ್ದಾರೆ.

Advertisement

ಟಿಕ್‌ಟಾಕ್‌ನ ಮಾತೃಸಂಸ್ಥೆ ಬೈಟ್‌ಡ್ಯಾನ್ಸ್‌ ಬಗ್ಗೆ ಅಮೆರಿಕದ ಹಲವು ರಾಜಕಾರಣಿಗಳು “ಬಳಕೆ­ದಾರರ ಡೇಟಾವನ್ನು ಬೈಟ್‌ಡ್ಯಾನ್ಸ್‌, ಚೀನ ಸರಕಾರಕ್ಕೆ ರವಾನಿ­ಸುತ್ತಿದೆ. ಟಿಕ್‌ಟಾಕ್‌ನ ಎಲ್ಲ ಸರ್ವರ್‌ಗಳೂ ಚೀನದಲ್ಲಿವೆ’ ಎಂದು ಆರೋಪಿ­ಸುತ್ತಲೇ ಬಂದಿದ್ದಾರೆ. ಆಸ್ಟ್ರೇಲಿಯಾದಲ್ಲೂ ಹಲವು ಸಂಸದರು ಚೀನೀ ಆ್ಯಪ್‌ಗ್ಳ ನಿಷೇಧಕ್ಕೆ ಸರಕಾರದ ಮೇಲೆ ಒತ್ತಡ ತಂದಿದ್ದಾರೆ.

ಚೀನಕ್ಕೆ ಅಲ್ಟ್ರಾ ಟೆಕ್‌ ಸಿಮೆಂಟ್‌ ಶಾಕ್‌
ಭಾರತದ ಅತಿದೊಡ್ಡ ಕಟ್ಟಡ ಸಾಮಗ್ರಿ ತಯಾರಕ ಅಲ್ಟ್ರಾ ಟೆಕ್‌ ಸಿಮೆಂಟ್‌ ಲಿಮಿಟೆಡ್‌ ಕೂಡ ಈಗ ಚೀನಕ್ಕೆ ಭರ್ಜರಿ ಶಾಕ್‌ ಕೊಟ್ಟಿದೆ. ಚೀನ ಘಟಕದಲ್ಲಿನ ತನ್ನ ಸಂಪೂರ್ಣ ಷೇರುಗಳನ್ನು 900 ಕೋಟಿ ರೂ.ಗಳಿಗೆ ಮಾರಾಟ ಮಾಡಲು ಅಲ್ಟ್ರಾ ಟೆಕ್‌ ಮುಂದಾಗಿದೆ. ಮಾರಾಟದ ಹಿಂದಿನ ಸ್ಪಷ್ಟ ಕಾರಣ ಸಂಸ್ಥೆ ಬಹಿರಂಗಪಡಿಸಿಲ್ಲ. ಮುಂಬಯಿ ಮೂಲದ ಅಲ್ಟ್ರಾ ಟೆಕ್‌, ಚೀನದ ಶಾನ್‌ಡೊಂಗ್‌ನಲ್ಲಿರುವ ಬಿನಾನಿ ರೊಂಗನ್‌ ಸಿಮೆಂಟ್‌ ಕೊ.ಲಿ.ನಲ್ಲಿ ಶೇ.92.5 ಪಾಲುದಾರಿಕೆ ಹೊಂದಿದೆ. ಈಗ ಅಷ್ಟೂ ಷೇರುಗಳನ್ನೂ ಮಾರಲು ಅಲ್ಟ್ರಾ ಟೆಕ್‌ ತೀರ್ಮಾನಿಸಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಕುಮಾರ್‌ ಮಂಗಲಂ ಬಿರ್ಲಾ ನೇತೃತ್ವದ ಅಲ್ಟ್ರಾ ಟೆಕ್‌, ವಿಶ್ವದಾದ್ಯಂತವಿರುವ 20 ಪ್ಲಾಂಟ್‌ಗಳಿಂದ 102.5 ಮಿಲಿಟನ್‌ ಟನ್‌ ಸಿಮೆಂಟನ್ನು ವಾರ್ಷಿಕವಾಗಿ ಉತ್ಪಾದಿಸುತ್ತದೆ.

ಭಾರತದಲ್ಲಿ ಚೀನ ಬ್ಯಾಂಕ್‌ ಹೂಡಿಕೆ
ಚೀನದ ಕೇಂದ್ರ ಬ್ಯಾಂಕ್‌ ಪಿಬಿಒಸಿ, ಎಚ್‌ಡಿಎಫ್ಸಿಯಲ್ಲಿ ಶೇ.1ಕ್ಕಿಂತ ಹೆಚ್ಚು ಷೇರುಗಳನ್ನು ಹೊಂದಿದೆ ಎಂಬುದು ಈಗಾಗಲೇ ಬಹಿರಂಗವಾಗಿದೆ. ಪೀಪಲ್ಸ್‌ ಬ್ಯಾಂಕ್‌ ಆಫ್ ಚೀನ (ಪಿಬಿಒಸಿ) ಅಂಬುಜಾ ಸಿಮೆಂಟ್‌ನಲ್ಲಿ ಶೇ.0.32 (122 ಕೋಟಿ ರೂ.), ಪಿರಮಾಳ್‌ ಎಂಟರ್‌ಪ್ರೈಸಸ್‌ನಲ್ಲಿ ಶೇ.0.43 (127 ಕೋಟಿ ರೂ.) ಹೂಡಿಕೆ ಹೊಂದಿದೆ ಎಂದು ಸ್ಟಾಕ್‌ ಎಕ್ಸ್‌ಚೇಂಜ್‌ ಮಾಹಿತಿ ನೀಡಿದೆ. ಇನ್ನೊಂದು ವರದಿ ಪ್ರಕಾರ, ಚೀನ ಕಂಪನಿಗಳು ಭಾರತದಲ್ಲಿನ ಪೇಟಿಎಂ ಗ್ರೂಪ್‌, ಝೊಮೇಟೊ, ಟೆನ್ಸೆಂಟ್‌ನ ಬೈಜು, ಓಲಾ, ಫ್ಲಿಪ್‌ಕಾರ್ಟ್‌ನಲ್ಲೂ ಪಾಲುದಾರಿಕೆ ಹೊಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next