Advertisement

PM Modi in Poland; ಯಾವುದೇ ಸಮಸ್ಯೆ ಯುದ್ಧ ಭೂಮಿಯಯಲ್ಲಿ ಪರಿಹರಿಸುವುದು ಅಸಾಧ್ಯ

05:12 PM Aug 22, 2024 | Team Udayavani |

ವಾರ್ಸಾ : “ಉಕ್ರೇನ್, ಪಶ್ಚಿಮ ಏಷ್ಯಾದಲ್ಲಿನ ಘರ್ಷಣೆಗಳು ಆಳವಾದ ಕಾಳಜಿಯ ವಿಷಯವಾಗಿದ್ದು, ಯುದ್ಧಭೂಮಿಯಲ್ಲಿ ಯಾವುದೇ ಸಮಸ್ಯೆಯನ್ನು ಪರಿಹರಿಸಲಾಗುವುದಿಲ್ಲ ಎಂದು ಭಾರತ ನಂಬುತ್ತದೆ” ಎಂದು ಪೋಲೆಂಡ್‌ನಲ್ಲಿ( Poland) ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿಕೆ ನೀಡಿದ್ದಾರೆ.

Advertisement

ಪೋಲೆಂಡ್‌ನ ಪ್ರಧಾನಿ ಡೊನಾಲ್ಡ್ ಟಸ್ಕ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ,’ಯಾವುದೇ ಬಿಕ್ಕಟ್ಟಿನಲ್ಲಿ ಮುಗ್ಧ ಜೀವಗಳನ್ನು ಕಳೆದುಕೊಳ್ಳುವುದು ಇಡೀ ಮಾನವಕುಲಕ್ಕೆ ದೊಡ್ಡ ಸವಾಲಾಗಿದೆ.ಶಾಂತಿ ಮತ್ತು ಸ್ಥಿರತೆಯ ಮರುಸ್ಥಾಪನೆಗಾಗಿ ಭಾರತವು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತದೆ. ತನ್ನ ಮಿತ್ರ ದೇಶಗಳೊಂದಿಗೆ ಸಾಧ್ಯವಿರುವ ಎಲ್ಲ ಸಹಕಾರವನ್ನು ನೀಡಲು ಸಿದ್ಧವಾಗಿದೆ’ ಎಂದರು.

”2025 ರ ಜನವರಿಯಲ್ಲಿ ಪೋಲೆಂಡ್ ಯುರೋಪಿಯನ್ ಒಕ್ಕೂಟದ(EU) ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ” ಎಂದು ಪ್ರಧಾನಿ ಹೇಳಿದರು. “ನಿಮ್ಮ ಬೆಂಬಲ ಭಾರತ ಮತ್ತು ಇಯು( European Union) ನಡುವಿನ ಸಂಬಂಧವನ್ನು ಬಲಪಡಿಸುತ್ತದೆ ಎಂದು ನನಗೆ ವಿಶ್ವಾಸವಿದೆ” ಎಂದು ಅವರು ಹೇಳಿದರು.

ಪೋಲೆಂಡ್ ಇಂಡಾಲಜಿ ಮತ್ತು ಸಂಸ್ಕೃತದ ಅತ್ಯಂತ ಹಳೆಯ ಮತ್ತು ಶ್ರೀಮಂತ ಸಂಪ್ರದಾಯವನ್ನು ಹೊಂದಿದೆ. ಭಾರತೀಯ ನಾಗರಿಕತೆ ಮತ್ತು ಭಾಷೆಗಳಲ್ಲಿ ಆಳವಾದ ಆಸಕ್ತಿಯಿಂದ ಬಲವಾದ ದ್ವಿಪಕ್ಷೀಯ ಸಂಬಂಧಗಳ ಬಲವಾದ ಅಡಿಪಾಯವನ್ನು ಹಾಕಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

Advertisement

ರಕ್ಷಣ ಕ್ಷೇತ್ರದಲ್ಲಿನ ಸಹಕಾರವು ಉಭಯ ದೇಶಗಳ ನಡುವಿನ ಪರಸ್ಪರ ಆಳವಾದ ನಂಬಿಕೆಯ ಸಂಕೇತ. ಪರಸ್ಪರ ಸಹಕಾರಕ್ಕೆ ಆದ್ಯತೆ ನೀಡಿರುವುದು ನಾವೀನ್ಯತೆ ಮತ್ತು ಪ್ರತಿಭೆಗಳು ಎರಡೂ ದೇಶಗಳ ಯುವ ಶಕ್ತಿಯ ಗುರುತಾಗಿದೆ.ನುರಿತ ಉದ್ಯೋಗಿಗಳ ಕಲ್ಯಾಣಕ್ಕಾಗಿ ಮತ್ತು ಚಲನಶೀಲತೆಯನ್ನು ಉತ್ತೇಜಿಸಲು ಸಾಮಾಜಿಕ ಭದ್ರತಾ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಎಂದರು.

ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಎರಡೂ ದೇಶಗಳು ನಿಕಟ ಸಮನ್ವಯದಲ್ಲಿ ಮುನ್ನಡೆಯುತ್ತಿವೆ. ಜಾಗತಿಕ ಸವಾಲುಗಳನ್ನು ಎದುರಿಸಲು ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿನ ಸುಧಾರಣೆಗಳು ಸಮಯದ ಅಗತ್ಯ ಎಂದು ನಾವು ಒಪ್ಪುತ್ತೇವೆ.ಉಗ್ರವಾದದ ಸವಾಲು, ಹವಾಮಾನ ಬದಲಾವಣೆಯು ಉಭಯ ದೇಶಗಳಿಗೆ ಸಾಮಾನ್ಯ ಆದ್ಯತೆಯ ವಿಷಯವಾಗಿದೆ.ನಾವು ನಮ್ಮ ಸಾಮರ್ಥ್ಯಗಳನ್ನು ಸಂಯೋಜಿಸುವ ಮೂಲಕ ಹಸುರು ಭವಿಷ್ಯಕ್ಕಾಗಿ ಕೆಲಸ ಮಾಡುತ್ತೇವೆ” ಎಂದರು.

”ಉಭಯ ರಾಷ್ಟ್ರಗಳು ರಾಜತಾಂತ್ರಿಕ ಸಂಬಂಧಗಳ 70 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು ಸಂಬಂಧವನ್ನು ಕಾರ್ಯತಂತ್ರದ ಪಾಲುದಾರಿಕೆಯಾಗಿ ಪರಿವರ್ತಿಸಲು ನಿರ್ಧರಿಸಿವೆ. ಪ್ರಜಾಪ್ರಭುತ್ವ ಮತ್ತು ಕಾನೂನಿನ ಆಳ್ವಿಕೆಯಂತಹ ಹಂಚಿಕೆಯ ಮೌಲ್ಯಗಳನ್ನು ಆಧರಿಸಿವೆ” ಎಂದು ಪ್ರಧಾನಿ ಮೋದಿ ಹೇಳಿದರು.

ಪೋಲೆಂಡ್ ಪ್ರವಾಸ ಮುಗಿಸಿದ ಬಳಿಕ ಪ್ರಧಾನಿ ನೆರೆ ರಾಷ್ಟ್ರ ಯುದ್ಧ ಪೀಡಿತ ಉಕ್ರೇನ್ ಗೆ ಪ್ರಯಾಣಿಸಲಿದ್ದಾರೆ. ಈ ಭೇಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಕುತೂಹಲ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next