Advertisement

ಘರ್ಷಣೆಗೆ ತಿರುಗಿದ ಧ್ವಜ ವಿವಾದ

06:18 AM Nov 09, 2018 | Team Udayavani |

ಬೆಳಗಾವಿ: ದೀಪಾವಳಿ ಹಬ್ಬದ ಅಂಗವಾಗಿ ಎಮ್ಮೆಗಳ ಓಟ ಹಾಗೂ ಪ್ರದರ್ಶನದ ಸಂದರ್ಭದಲ್ಲಿ ಕನ್ನಡ ಧ್ವಜ ಹಾಗೂ ಭಗವಾ ಧ್ವಜ ಹಾರಿಸುವ ವಿಷಯದಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ಸಂಭವಿಸಿ ಕಲ್ಲುತೂರಾಟ ನಡೆದು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ಸರ್ದಾರ್‌ ಹೈಸ್ಕೂಲ್‌ ಮೈದಾನದಲ್ಲಿ ಗುರುವಾರ ನಡೆಯಿತು.

Advertisement

ಎರಡು ಗುಂಪುಗಳ ಘರ್ಷಣೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಇದರಿಂದ ಅಕ್ರೋಶಗೊಂಡ ಉದ್ರಿಕ್ತ ಯುವಕರು ಪರಸ್ಪರ ಕಲ್ಲು ತೂರಾಟದಲ್ಲಿ ತೊಡಗಿದರು. ಘಟನೆ ನಡೆದಾಗ ಕೆಲವೇ ಪೊಲೀಸರು ಅಲ್ಲಿದ್ದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಹೆಚ್ಚಿನ ಪೊಲೀಸ್‌ ಪಡೆ ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿ ಎಮ್ಮೆಗಳ ಓಟದ ಸ್ಪರ್ಧೆ ಹಾಗೂ ಮೆರವಣಿಗೆಯನ್ನು ಮೊಟಕುಗೊಳಿಸಿದರು. ಎಮ್ಮೆಗಳ ಪ್ರದರ್ಶನ ಹಾಗೂ ಓಟಕ್ಕೆ ಚಾಲನೆ ನೀಡಲು ಬಂದಿದ್ದ ಬೆಳಗಾವಿ ಶಾಸಕ ಅನಿಲ ಬೆನಕೆ ಅಲ್ಲಿಂದ ತೆರಳುತ್ತಿದ್ದಂತೆ ಈ ಘಟನೆ ನಡೆದಿದೆ. ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದರಿಂದ ಹೆಚ್ಚಿನ
ಅನಾಹುತ ನಡೆಯಲಿಲ್ಲ. 

ಘಟನೆಯ ವಿವರ: ದೀಪಾವಳಿಯ ಬಲಿಪಾಡ್ಯ ದಿನವಾದ ಗುರುವಾರ ಸಂಜೆ ಎಮ್ಮೆಗಳ ಓಟ ಹಾಗೂ ಪ್ರದರ್ಶನ
ಕಾರ್ಯಕ್ರಮ ನಡೆದಿತ್ತು. ಈ ಸಮಯದಲ್ಲಿ ಕೆಲವರು ಎಮ್ಮೆಗಳ ಜೊತೆಗೆ ಭಗವಾಧ್ವಜವನ್ನೂ ತಂದು ಅದರ ಜೊತೆಗೆ ಕುಣಿಯುತ್ತಿದ್ದರು. ಆಗ ಇನ್ನೊಂದು ಗುಂಪು ಕನ್ನಡ ಧ್ವಜವನ್ನು ತಂದು ಕುಣಿಯಲಾರಂಭಿಸಿತು. ಎರಡೂ ಗುಂಪುಗಳು ಒಂದು ಕಡೆ
ಸೇರಿದ್ದರಿಂದ ಪರಸ್ಪರ ಮಾತಿಗೆ ಮಾತು ಬೆಳೆದು ಹೊಡೆದಾಟಕ್ಕೆ ತಿರುಗಿತು. ಇದರಿಂದ ಕೆಲವರು ಗಾಯಗೊಂಡರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಇದರಿಂದ ಆಕ್ರೋಶಗೊಂಡ ಯುವಕರು ಕಲ್ಲುತೂರಾಟ
ನಡೆಸಿದರು. ಕೆಲಕಾಲ ಸರ್ದಾರ ಹೈಸ್ಕೂಲ್‌ ಮೈದಾನದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ದರ್ಗಾಗಳಲ್ಲಿ ದೀಪೋತ್ಸವ ಸಂಭ್ರಮ
ತಾವರಗೇರಾ: ಇಲ್ಲಿಯ ಶಾಮೀದಲಿ ಹಾಗೂ ಖಾಜಾ ಬಂದೇನವಾಜ್‌ ದರ್ಗಾಗಳಲ್ಲಿ ದೀಪಾವಳಿ ಪ್ರಯುಕ್ತ ಬುಧವಾರ ರಾತ್ರಿ ಸಾವಿರ ದೀಪೋತ್ಸವ ಕಾರ್ಯಕ್ರಮ ನಡೆಯಿತು. ಮುದಗಲ್ಲಿನ ಪಶು ವೈದ್ಯಾಧಿಕಾರಿ ಶರಣಪ್ಪ ಸೋನಾ ಕಾಂಬ್ಳೆ ಮತ್ತು ಕುಟುಂಬದವರು ಭಾವೈಕ್ಯತೆ ಸಂಕೇತ ಸಾರಲು ಪಟ್ಟಣದ ಶಾಮೀದಲಿ ದರ್ಗಾದಲ್ಲಿ 3311 ದೀಪ ಮತ್ತು ಖಾಜಾ ಬಂದೇನವಾಜ್‌ ದರ್ಗಾದಲ್ಲಿ 501 ದೀಪಗಳನ್ನು ಬೆಳಗಿಸುವ ಮೂಲಕ ಹಬ್ಬ ಆಚರಿಸಿದರು. ಅನಾದಿ ಕಾಲದಿಂದಲೂ ಪಟ್ಟಣವು ಕೋಮು ಸೌಹಾರ್ದತೆಗೆ ಹೆಸರು ವಾಸಿಯಾಗಿದೆ. ಹಿಂದೊಮ್ಮೆ ಅಪಘಾತವಾಗಿ ಸಾವು ಬದುಕಿನ ಮಧ್ಯೆ ಹೋರಾಡುವಾಗ ಶಾಮೀದಲಿ ದರ್ಗಾಗೆ ಹರಕೆ ಹೊತ್ತಿದ್ದೆ. ಅದರಂತೆ ಹರಕೆ ತೀರಿಸಲು ಈಗ ಸಮಯ ಕೂಡಿ ಬಂದಿದೆ ಎಂದು ಶರಣಪ್ಪ ತಿಳಿಸಿದರು. ಲಕ್ಷ್ಮೀಕಾಂತ್‌, ಅಭಿಷೇಕ್‌, ಗಣೇಶ, ಲಕ್ಷ್ಮೀಬಾಯಿ,  ಕಾಂತಾ, ಮುರ್ತೂಜಾ, ಸಾನಿಯಾ, ವೀರೇಶ ಗುಡದೂರ, ಭೀಮಣ್ಣ ಬಡಿಗೇರ, ಅಮರೇಶ ಬಸರಿಗಿಡ, ಮುತವಲ್ಲಿಗಳಾದ ಸೈಯದ್‌ ಹುಸೇನ್‌, ಶಾಮೀದ್‌ಸಾಬ್‌ ಮುಜಾವರ್‌ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next