Advertisement

Punjalkatte ಪತ್ನಿಗೆ ಎರಡನೇ ವಿವಾಹ ದೃಢ: ಜೀವನಾಂಶ ರದ್ದುಗೊಳಿಸಿ ಕೋರ್ಟ್‌ ಆದೇಶ

11:08 PM Dec 09, 2023 | Team Udayavani |

ಪುಂಜಾಲಕಟ್ಟೆ: ವಿವಾಹದ ವಿಚ್ಛೇದನ ಪ್ರಕ್ರಿಯೆ ನ್ಯಾಯಾಲಯದಲ್ಲಿ ವಿಚಾರಣ ಹಂತದಲ್ಲಿರುವಾಗಲೇ ಪತಿಗೆ ತಿಳಿಯದಂತೆ ಪತ್ನಿ ಎರಡನೇ ವಿವಾಹವಾದ ಹಿನ್ನೆಲೆಯಲ್ಲಿ ಮಂಗಳೂರಿನ ಕೌಟುಂಬಿಕ ನ್ಯಾಯಾಲಯವು ಆಕೆಯ ನಿರ್ವಹಣೆಗಾಗಿ ನೀಡಲಾಗುತ್ತಿದ್ದ ಜೀವನಾಂಶವನ್ನು ರದ್ದುಗೊಳಿಸಿ ಆದೇಶವನ್ನು ಹೊರಡಿಸಿದೆ.

Advertisement

ಪಣಕಜೆ, ಮಂಡಾಡಿ ನಿವಾಸಿ ಉದಯ ನಾಯಕ್‌ ಅವರು ಮಂಗಳೂರಿನ ಮೇರಿಹಿಲ್‌ನ ಅನಿತಾ ನಾಯಕ್‌ರನ್ನು 2018ರಲ್ಲಿ ಮದುವೆಯಾಗಿದ್ದು, ಬಳಿಕ ಇವರ ದಾಂಪತ್ಯದಲ್ಲಿ ಕೆಲ ಅಡೆತಡೆಗಳು ಬಂದ ಹಿನ್ನೆಲೆಯಲ್ಲಿ ಉದಯ ನಾಯಕ್‌ ಅವರು ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವ್ಯಾಜ್ಯವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗಲೇ ಅನಿತಾ ನಾಯಕ್‌ ಗೌಪ್ಯವಾಗಿ ಎರಡನೇ ವಿವಾಹವಾಗುತ್ತಿದ್ದಾಳೆಂದು ಪತಿ ಬೆಳ್ತಂಗಡಿ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ಫಿರ್ಯಾದು ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣ ದಾಖಲಿಸಿ ವರದಿ ಸಲ್ಲಿಸುವಂತೆ ಪುಂಜಾಲಕಟ್ಟೆ ಠಾಣಾ ಅಧಿಕಾರಿಗೆ ಸೂಚಿಸಿತ್ತು.

ಈ ಮಧ್ಯೆ ಉದಯ್‌ ನಾಯಕ್‌ ಅವರಿಂದ ಜೀವನಾಂಶವನ್ನು ಕೋರಿ ಪತ್ನಿ ಅನಿತಾ ನಾಯಕ್‌ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ಸಂದರ್ಭ ನ್ಯಾಯಾಲಯದ ಆದೇಶದಂತೆ ಉದಯ್‌ ನಾಯಕ್‌ ಅವರು ಪತ್ನಿಗೆ ನಿರ್ವಹಣ ಪಾವತಿಯಾಗಿ 15 ಸಾ. ರೂ.ವಿನ ಡಿಮ್ಯಾಂಡ್‌ ಡ್ರಾಫ್ಟ್ ಅನ್ನು ನೀಡಿದ್ದರು.

ಪತ್ತೆದಾರನಾದ ಪತಿ
ಪತ್ನಿ ಗೌಪ್ಯವಾಗಿ ಎರಡನೇ ವಿವಾಹವಾಗಿರುವುದನ್ನು ಖಚಿತಪಡಿಸುವ ನಿಟ್ಟಿನಲ್ಲಿ ಪತಿ ಉದಯ ನಾಯಕ್‌ ಖುದ್ದು ಪತ್ತೆದಾರಿಕೆಗೆ ಮುಂದಾದರು. ಪತ್ನಿ ಅನಿತಾ 2023ರ ಮಾರ್ಚ್‌ 13ರಂದು ಮುಂಬಯಿಯ ಡೊಂಬಿವಲಿಯ ಲೋಧಾ ಪ್ಯಾನೇಸಿಯಾದಲ್ಲಿ ಹರಿಕೃಷ್ಣ ಗಣಪತ್‌ ರಾವ್‌ ಕೀಲು ಅವರೊಂದಿಗೆ ಎರಡನೇ ವಿವಾಹವಾಗಿದ್ದು ಈ ಬಗ್ಗೆ ಮಹಾರಾಷ್ಟ್ರ ಶಾಸನ ರಾಜಪತ್ರದ ಮಾರ್ಚ್‌ 16-22, 2023ರ ಆವೃತ್ತಿಯಲ್ಲಿ ಪ್ರಕಟಗೊಂಡಿರುವ ದಾಖಲೆಯ ಮೂಲಕ ಉದಯ ನಾಯಕ್‌ ದೃಢಪಡಿಸಿಕೊಂಡರು. ಅನಿತಾ ನಾಯಕ್‌ ತನ್ನ ಹೆಸರನ್ನು ಅನಿತಾ ಹರಿಕೃಷ್ಣ ಕೀಲು ಎಂದು ಬದಲಾಯಿಸಿಕೊಂಡಿದ್ದರು. ಇವರ ಎರಡನೇ ವಿವಾಹವು 2022ರ ಡಿ. 27ರಂದೇ ನಡೆದಿತ್ತು ಎಂಬ ವಿಚಾರ ಮಹಾರಾಷ್ಟ್ರ ಗೆಜೆಟ್‌ ಕಚೇರಿಗೆ ಸಲ್ಲಿಸಿದ ಪ್ರಮಾಣಪತ್ರದ ಪ್ರಕಾರ ಬೆಳಕಿಗೆ ಬಂದಿದೆ. ಅನಿತಾ ಅವರ ಎರಡನೇ ವಿವಾಹದ ಛಾಯಾಚಿತ್ರಗಳನ್ನು ಆಕೆಯ ಸಂಬಂಧಿಯೋರ್ವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದರು. ಆದರೂ ಜೀವನಾಂಶ ಪಡೆಯಲು ಅನಿತಾಳ ತಂದೆ ರಾಮಚಂದ್ರ ನಾಯಕ್‌ ತನ್ನ ಸಂಬಂಧಿಯ ಜತೆ ಮಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಆಗಮಿಸುತ್ತಿದ್ದರೆನ್ನಲಾಗಿದೆ.

ಉದಯ್‌ ನಾಯಕ್‌ ತನ್ನ ಪತ್ನಿ ಅನಿತಾ ಎರಡನೇ ವಿವಾಹವಾದ ಕುರಿತಂತೆ ಛಾಯಾಚಿತ್ರಗಳ ಸಹಿತ ಪ್ರಕಟವಾದ ಮಹಾರಾಷ್ಟದ ಗೆಜೆಟ್‌ ಅನ್ನು ಕೌಟುಂಬಿಕ ನ್ಯಾಯಾಲಯಕ್ಕೆ ಪುರಾವೆಯಾಗಿ ಸಲ್ಲಿಸಿದರು. ಇದರ ವಿಚಾರಣೆ ನಡೆಸಿದ ಪ್ರಧಾನ ನ್ಯಾಯಾಧೀಶರು ಈ ಪುರಾವೆಗಳನ್ನು ಅಂಗೀಕರಿಸಿದ್ದಲ್ಲದೆ ಅನಿತಾಳಿಗೆ ನಿರ್ವಹಣೆಗಾಗಿ ನೀಡಲಾಗುತ್ತಿದ್ದ ಜೀವನಾಂಶವನ್ನು ರದ್ದುಗೊಳಿಸಿ ಆದೇಶವನ್ನು ಹೊರಡಿಸಿದ್ದಾರೆ. ಅನಿತಾ ನಾಯಕ್‌ ಅವರ ಎರಡನೇ ವಿವಾಹಕ್ಕೆ ಸಂಬಂಧಿಸಿದಂತೆ ಉದಯ್‌ ನಾಯಕ್‌ ಅವರ ಅರ್ಜಿಯ ಹೆಚ್ಚಿನ ತನಿಖೆಗೂ ನಿರ್ದೇಶಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next