ಮುಂಬಯಿ: ಒಂದೂವರೆ ವರ್ಷಗಳ ಕಾಲ ಮನೆಯೊಳಗೆ ಹೆಂಡತಿಯನ್ನು ಕೂಡಿ ಹಾಕಿ ಲೈಂಗಿಕ ಕಿರುಕುಳ ಮತ್ತು ಮೂವರು ಹೆಣ್ಣುಮಕ್ಕಳನ್ನು ಬಂಧಿಸಿಟ್ಟ ಘಟನೆಯ ಆರೋಪದಲ್ಲಿ ವ್ಯಕ್ತಿಯನ್ನು ಬಂಧಿಸಿರುವುದಾಗಿ ಮಹಾರಾಷ್ಟ್ರದ ಸೋಲಾಪುರ್ ಜಿಲ್ಲೆಯ ಪೊಲೀಸರು ಗುರುವಾರ(ಜೂನ್ 03) ತಿಳಿಸಿದ್ದಾರೆ.
ಇದನ್ನೂ ಓದಿ:ಮತ್ತೊಮ್ಮೆ ರೈತರ ಬದುಕನ್ನು ಕಸಿದುಕೊಂಡ ಕೋವಿಡ್ : ತೋಟದಲ್ಲೇ ಕೊಳೆಯುತ್ತಿದೆ ತರಕಾರಿ ಬೆಳೆ
ಪೊಲೀಸರು ಸೋಮವಾರ ಪಂಡಾರಪುರ ನಗರದ ಝೆಂಡೆ ಗುಲ್ಲಿ ಪ್ರದೇಶದಲ್ಲಿನ ಮನೆಯ ಮೇಲೆ ದಾಳಿ ನಡೆಸಿ ಮಹಿಳೆ ಮತ್ತು ಆಕೆಯ ಮೂವರು ಹೆಣ್ಣು ಮಕ್ಕಳನ್ನು ರಕ್ಷಿಸಿದ್ದು, ಈ ಸಂದರ್ಭದಲ್ಲಿ ಮಹಿಳೆಯ ಪತಿಯನ್ನು ಐಪಿಸಿ ಸೆಕ್ಷನ್ 376(ಅತ್ಯಾಚಾರ) ಮತ್ತು ಇತರ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತನ್ನನ್ನು ಬಂಧಿಸಿಟ್ಟು, ಹಿಂಸೆ ನೀಡುತ್ತಿರುವುದಾಗಿ ಮಹಿಳೆ ಟಿಪ್ಪಣಿಯೊಂದನ್ನು ಬರೆದು ಮನೆಯ ಕಿಟಕಿಯಿಂದ ಹೊರಗೆ ಎಸೆದಿದ್ದು, ಇದನ್ನು ಮಹಿಳೆಯೊಬ್ಬರು ಓದಿ ಪೊಲೀಸರಿಗೆ ವಿಷಯ ತಿಳಿಸಿದ್ದರಿಂದ ಪ್ರಕರಣ ಬೆಳಕಿಗೆ ಬಂದಿರುವುದಾಗಿ ವಿವರಿಸಿದ್ದಾರೆ. ಪಂಡಾರಪುರ ನಗರದ ನಿರ್ಭಯಾ ತಂಡವು ಮನೆಯ ಮೇಲೆ ನಿಗಾವಹಿಸಿ ದಾಳಿ ನಡೆಸಿತ್ತು. ನಂತರ ಮಹಿಳೆ ಮತ್ತು ಮಕ್ಕಳನ್ನು ರಕ್ಷಿಸಿರುವುದಾಗಿ ವರದಿ ತಿಳಿಸಿದೆ.
ಗಂಡು ಮಗುವಿಗೆ ಜನ್ಮ ನೀಡಿಲ್ಲ ಎಂಬ ಕಾರಣಕ್ಕೆ ಕಳೆದ ಒಂದೂವರೆ ವರ್ಷದಿಂದ ತನ್ನನ್ನು ಕೋಣೆಯೊಳಗೆ ಬಲವಂತವಾಗಿ ಕೂಡಿ ಹಾಕಿ, ಲೈಂಗಿಕವಾಗಿ ಹಿಂಸಿಸುತ್ತಿರುವುದಾಗಿ ಮಹಿಳೆ ತನಿಖೆ ವೇಳೆ ತಿಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.