Advertisement

ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ

12:07 PM Nov 10, 2017 | |

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಅಭ್ಯರ್ಥಿಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಅವಶ್ಯವಿರುವ ಆಳವಾದ ವಿಷಯದ ಜ್ಞಾನವಿದ್ದು, ಆತ್ಮವಿಶ್ವಾಸದ ಕೊರತೆ ಹೆಚ್ಚಿದೆ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಮದನಗೋಪಾಲ ಹೇಳಿದರು. 

Advertisement

ಇಲ್ಲಿನ ಕೆಎಲ್‌ಇ ಸಂಸ್ಥೆ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಸಮುತ್ಕರ್ಷ ನಾಗರಿಕ ಸೇವಾ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಭಾಗದ ಗ್ರಾಮೀಣ ಪ್ರತಿಭೆಗಳಿಗೆ ಆತ್ಮವಿಶ್ವಾಸ ತುಂಬುವ ಮೂಲಕ ನಾಗರಿಕ ಸೇವೆ ಪರೀಕ್ಷೆಗಳಿಗೆ ಸಜ್ಜುಗೊಳಿಸುವ ಹೊಣೆಗಾರಿಕೆಯನ್ನು ಸಮುತ್ಕರ್ಷ ಸಂಸ್ಥೆ ತೆಗೆದುಕೊಳ್ಳಬೇಕು ಎಂದರು. 

ನಾಗರಿಕ ಪರೀಕ್ಷೆಗಳು ಅಂದರೆ ತುಂಬ ಕಷ್ಟ ಎನ್ನುವ ಮನಸ್ಥಿತಿಯಿಂದ ವಿದ್ಯಾರ್ಥಿಗಳು ಹೊರಬರಬೇಕು. ಪ್ರಾಮಾಣಿಕ ಪ್ರಯತ್ನ, ನಿರಂತರ ಅಧ್ಯಯನವೊಂದಿದ್ದರೆ ಇಂತಹ ಪರೀಕ್ಷೆಗಳನ್ನು ಸುಲಭವಾಗಿ ಪೂರೈಸಬಹುದು. ಉತ್ತರ ಕರ್ನಾಟಕ ಭಾಗದಲ್ಲಿ ಇಂತಹದೊಂದು ವ್ಯವಸ್ಥಿತ ಕೇಂದ್ರದ ಅವಶ್ಯಕತೆಯಿತ್ತು.  

ಹುಬ್ಬಳ್ಳಿಯಲ್ಲಿ ಕೇಂದ್ರ ಸ್ಥಾಪನೆ ಮಾಡುವುದಾಗಿ ನಿರ್ಧರಿಸಿದ್ದಕ್ಕೆ ಸಂಸ್ಥೆಯ ಸಲಹಾ ಸಮಿತಿ ಸದಸ್ಯನಾಗಲು ಒಪ್ಪಿಕೊಂಡಿದ್ದೇನೆ ಎಂದರು. ಪ್ರತಿಷ್ಠೆಯ ಹುದ್ದೆಗಳು ಎನ್ನುವ ಕಾರಣಕ್ಕೆ ನಾಗರಿಕ ಸೇವೆಗೆ ದಯವಿಟ್ಟು ಬರಬೇಡಿ. ಬಡವರು ಹಾಗೂ ಅನ್ಯಾಯಕ್ಕೊಳಗಾದವರಿಗೆ ಪ್ರಾಮಾಣಿಕ ಸೇವೆ ನೀಡುವ ಮನಸ್ಸಿನಿಂದ ಈ ಕ್ಷೇತ್ರವನ್ನು ಆಯ್ದುಕೊಳ್ಳಿ.

ಕಾರ್ಪೊರೇಟ್‌ ಕಂಪನಿಗಳಲ್ಲಿ ನಮಗಿಂತ ಹೆಚ್ಚಿನ ವೇತನ ಪಡೆಯಬಹುದು. ಆದರೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವಿಗೆ ಸ್ಪಂದಿಸಿದ ಆತ್ಮತೃಪ್ತಿ ಎಷ್ಟು ಹಣ ನೀಡಿದರು ಬರುವುದಿಲ್ಲ ಎಂದು ಹೇಳಿದರು. ಕೇರಳ ನಿವೃತ್ತ ಡಿಜಿಪಿ ಡಾ| ಕೃಷ್ಣಮೂರ್ತಿ ಮಾತನಾಡಿ, ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಎಲ್ಲ ಸೌಲಭ್ಯಗಳು ಇರುತ್ತವೆ.

Advertisement

ಸಮುತ್ಕರ್ಷ ಸಂಸ್ಥೆ ಗ್ರಾಮೀಣ ಪ್ರತಿಭೆಗಳ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಬೇಕು. ನಗರದ ಉದ್ದಿಮೆದಾರರು ಗ್ರಾಮೀಣ ಪ್ರತಿಭೆಗಳಿಗೆ ಒಂದಿಷ್ಟು ಆರ್ಥಿಕ ನೆರವು ನೀಡುವ ಕೆಲಸವಾಗಬೇಕು. ನಾಗರಿಕ ಸೇವೆಗೆ ಆಗಮಿಸುವವರು ರಾಷ್ಟ್ರೀಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. 

ಬೆಳಗಾವಿಯ ರಾಮಕೃಷ್ಣ ಮಿಷನ್‌ ಆಶ್ರಮದ ಸ್ವಾಮಿ ಸತ್ವಸ್ಥಾನಂದ ಸ್ವಾಮೀಜಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿ, ಪಡೆದ ಜ್ಞಾನ, ತಂತ್ರಜ್ಞಾನ ಹಾಗೂ ಉತ್ತಮ ಶಿಕ್ಷಣ ಸ್ವಾರ್ಥಕ್ಕೆ ಬಳಕೆಯಾಗುತ್ತಿದೆ. ಉತ್ತಮ ಸಮಾಜ ಹಾಗೂ ದೇಶ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಜ್ಞಾನ ಸದ್ಭಳಕೆಯಾಗುತ್ತಿಲ್ಲ.

ಪಡೆದ ಜ್ಞಾನವನ್ನು ವಿವೇಕದಿಂದ ಖರ್ಚು ಮಾಡಿದಾಗ ಮಾತ್ರ ಒಳ್ಳೆಯ ಕಾರ್ಯಗಳನ್ನು ಮಾಡಬಹುದು ಎಂದು ಹೇಳಿದರು. ಸಮುತ್ಕರ್ಷ ಸಂಸ್ಥೆ ಚೇರನ್‌ ಡಾ| ಕ್ರಾಂತಿ ಕಿರಣ ಪ್ರಾಸ್ತಾವಿಕ ಮಾತನಾಡಿದರು. ಕೆಎಲ್‌ಇ ತಾಂತ್ರಿಕ ವಿವಿ ಕುಲಪತಿ ಡಾ| ಅಶೋಕ ಶೆಟ್ಟರ ಮಾತನಾಡಿದರು. ಕೆಎಲ್‌ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಜಿತೇಂದ್ರ ನಾಯಕ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next