Advertisement

ವಿಶ್ವಾಸಮತ ಯಾಚನೆ: ಕಾನೂನು ತಜ್ಞರು ಏನಂತಾರೆ?

05:31 AM Jul 13, 2019 | Lakshmi GovindaRaj |

ಬೆಂಗಳೂರು: ಮುಖ್ಯಮಂತ್ರಿ ಕೋರಿರುವ ವಿಶ್ವಾಸಮತ ಯಾಚನೆಗೆ ಸ್ಪೀಕರ್‌ ಒಪ್ಪಿಗೆ ಕೊಟ್ಟು ಅದು ನಡೆದಾಗ ರಾಜೀನಾಮೆ ಕೊಟ್ಟ ಶಾಸಕರು ಬಂದರೆ ಹೇಗೆ, ಬರದಿದ್ದರೆ ಏನು ಅನ್ನುವುದರ ಬಗ್ಗೆ ಕಾನೂನು ತಜ್ಞರು “ಭಿನ್ನ’ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

Advertisement

ಸರ್ಕಾರದ ವಿಶ್ವಾಸಮತ ಯಾಚನೆ ವೇಳೆ ವಿಪ್‌ ಉಲ್ಲಂಘಿಸಿ ರಾಜೀನಾಮೆ ಕೊಟ್ಟಿರುವ ಶಾಸಕರು ಗೈರು ಹಾಜರಾದರೆ ಏನೂ ಆಗುವುದಿಲ್ಲ ಎಂದು ಮಾಜಿ ಅಡ್ವೋಕೇಟ್‌ ಜನರಲ್‌ ಅಶೋಕ್‌ ಹಾರನಹಳ್ಳಿ ಹೇಳಿದರೆ, ರಾಜೀನಾಮೆ ಸಲ್ಲಿಸಿದ ಮಾತ್ರಕ್ಕೆ ಅವರ ಸದಸ್ಯತ್ವ ಹೋಗುವುದಿಲ್ಲ, ಆದ್ದರಿಂದ ರಾಜೀನಾಮೆ ಕೊಟ್ಟವರಿಗೆಲ್ಲ ವಿಪ್‌ ಅನ್ವಯವಾಗುತ್ತದೆ, ಉಲ್ಲಂ ಸಿದರೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುತ್ತದೆ ಎಂದು ಮತ್ತೂಬ್ಬ ಮಾಜಿ ಅಡ್ವೋಕೇಟ್‌ ಜನರಲ್‌ ಪ್ರೊ.ರವಿವರ್ಮ ಕುಮಾರ್‌ ಹೇಳುತ್ತಾರೆ.

ವಿಪ್‌ ಉಲ್ಲಂಘಿಸಿ ಗೈರು ಹಾಜರಾದರೆ ಅಥವಾ ಸದನಕ್ಕೆ ಬಂದು ಸರ್ಕಾರದ ವಿರುದ್ಧ ಮತ ಹಾಕಿದರೆ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಶಾಸಕರು ಅನರ್ಹಗೊಳಿಸಬಹುದು ಎಂಬ ವಾದ ಮುಂದಿಟ್ಟರೆ, ಅನರ್ಹ ಮಾಡುವವರು ಸ್ಪೀಕರ್‌, ಒಂದೊಮ್ಮೆ ವಿಶ್ವಾಸಮತ ಸೋತು ಸರ್ಕಾರ ಬಿದ್ದು ಹೋದರೆ, ಸ್ಪೀಕರ್‌ ಸಹ ಇರುವುದಿಲ್ಲ. ಅಷ್ಟಕ್ಕೂ ರಾಜೀನಾಮೆ, ಅನರ್ಹತೆ ಇವರೆಡಕ್ಕೂ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂಕೋರ್ಟ್‌ ಹೇಳಿದೆ, ಸದ್ಯ ಇದೆಲ್ಲವೂ ಸುಪ್ರೀಂಕೋರ್ಟ್‌ ಮಂಗಳವಾರ ನೀಡುವ ತೀರ್ಪಿನ ಮೇಲೆ ನಿಂತಿದೆ ಎಂದು ಅಶೋಕ್‌ ಹಾರನಹಳ್ಳಿಯವರು ಅಭಿಪ್ರಾಯಪಟ್ಟಿದ್ದಾರೆ.

ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ಇರುವುದು ರಾಜೀನಾಮೆ ಅಂಗೀಕಾರ ಮತ್ತು ಅನರ್ಹಗೊಳಿಸುವ ಕುರಿತಾಗಿ. ವಿಪ್‌ ವಿಚಾರ ಇದಕ್ಕೆ ಸಂಬಂಧವಿಲ್ಲ. ಅಲ್ಲದೇ, ರಾಜೀನಾಮೆ ಪತ್ರ ಸಲ್ಲಿಸಿದಾಕ್ಷಣ ಶಾಸಕರೊಬ್ಬರ ಸದಸ್ಯತ್ವ ಹೋಗುವುದಿಲ್ಲ. ಅದು ಅಂಗೀಕಾರವಾಗುವರೆಗೂ ಒಬ್ಬ ಶಾಸಕನ ಜವಾಬ್ದಾರಿ, ಹಕ್ಕು ಮತ್ತು ಕರ್ತವ್ಯಗಳು ಅವರಿಗೆ ಅನ್ವಯವಾಗುತ್ತವೆ.

ಅಷ್ಟಕ್ಕೂ ವಿಪ್‌ ಪಾಲನೆ ಮಾಡಬೇಕು, ಬೇಡ, ಸದನಕ್ಕೆ ಹಾಜರಾಗಬೇಕು ಅಥವಾ ಇಲ್ಲ ಎಂಬ ಬಗ್ಗೆ ಸುಪ್ರೀಂಕೋರ್ಟ್‌ ಏನೂ ಹೇಳಿಲ್ಲ. ಹೀಗಿರುವಾಗ ಸುಪ್ರೀಂಕೋರ್ಟ್‌ ಮೆಟ್ಟಿಲೇರಿರುವ 10 ಮಂದಿ ಸೇರಿದಂತೆ ರಾಜೀನಾಮೆ ಕೊಟ್ಟ ಎಲ್ಲ ಶಾಸಕರಿಗೂ ವಿಪ್‌ ಅನ್ವಯವಾಗುತ್ತದೆ, ಅವರೆಲ್ಲ ಸದನಕ್ಕೆ ಹಾಜರಾಗಿ ಕಡ್ಡಾಯವಾಗಿ ಸರ್ಕಾರದ ಪರ ಮತ ಹಾಕಬೇಕು. ಇಲ್ಲದಿದ್ದರೆ ಸಂವಿಧಾನದ ಅನುಚ್ಛೇದ 10 ಅವರಿಗೆ ಅನcಯವಾಗಿ ಅನರ್ಹತೆ ಎದುರಿಸಬೇಕಾಗುತ್ತದೆ ಎಂದು ರವಿವರ್ಮ ಕುಮಾರ್‌ ಹೇಳುತ್ತಾರೆ.

Advertisement

ಶಾಸಕರ “ರಾಜೀನಾಮೆ-ಅನರ್ಹತೆ’ ಪ್ರಕರಣ ಮಂಗಳವಾರ ಸುಪ್ರೀಂಕೋರ್ಟ್‌ನಲ್ಲಿ ಅಂತಿಮ ಇತ್ಯರ್ಥವಾಗುವ ಸಾಧ್ಯತೆ ಕಡಿಮೆ. ರಾಜೀನಾಮೆ ಅಂಗೀಕಾರವಾಗುವರೆಗೆ ಅಥವಾ ಅನರ್ಹತೆಗೊಳ್ಳುವರೆಗೆ ಶಾಸಕರು ಅವರು ಆಯ್ಕೆಯಾದ ಪಕ್ಷದ ಶಾಸಕಾಂಗ ಸಭೆಯ ಸದಸ್ಯರಾಗಿರುತ್ತಾರೆ. ಹಾಗಾಗಿ, ಅವರಿಲ್ಲರಿಗೂ ವಿಪ್‌ ಅನ್ವಯವಾಗುತ್ತದೆ. ಉಲ್ಲಂ ಸಿದರೆ ಅನರ್ಹರಾಗುತ್ತಾರೆ.
-ಎ.ಎಸ್‌. ಪೊನ್ನಣ್ಣ, ಮಾಜಿ ಹೆಚ್ಚುವರಿ ಅಡ್ವೋಕೇಟ್‌ ಜನರಲ್

ರಾಜೀನಾಮೆ ಕೊಟ್ಟ ಮಾತ್ರಕ್ಕೆ ಸದಸ್ಯತ್ವ ಕಳೆದುಕೊಂಡಂತೆ ಅಲ್ಲ. ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಗೂ, ವಿಪ್‌ಗ್ೂ ಸಂಬಂಧವಿಲ್ಲ. ಎಲ್ಲರಿಗೂ ವಿಪ್‌ ಜಾರಿ ಮಾಡಬೇಕಾಗುತ್ತದೆ. ಅದನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಇಲ್ಲದಿದ್ದರೆ ಕಾನೂನು ರೀತಿ ಕ್ರಮ ಎದುರಿಸಬೇಕಾಗುತ್ತದೆ.
-ಶಶಿಕಿರಣ್‌ ಶೆಟ್ಟಿ, ಹಿರಿಯ ವಕೀಲ

ಸುಪ್ರೀಂಕೋರ್ಟ್‌ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೇಳಿರುವಾಗ ಈ ಹಂತದಲ್ಲಿ ವಿಶ್ವಾಸಮತ ಯಾಚನೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಲ್ಲದೇ ವಿಪ್‌ ಜಾರಿ, ಅದರ ಪಾಲನೆ, ಉಲ್ಲಂಘನೆ ಇದೆಲ್ಲವೂ ಸದ್ಯ ಅಪ್ರಸ್ತುತ.
-ಕೆ.ವಿ. ಧನಂಜಯ್‌, ಸುಪ್ರೀಂಕೋರ್ಟ್‌ ವಕೀಲ

* ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next