Advertisement

ಇಂದು ಕೇಂದ್ರ ಸರ್ಕಾರಿ ವಕೀಲರಿಂದ ರಾಷ್ಟ್ರೀಯ ಭದ್ರತೆ ಕುರಿತ ಸಮ್ಮೇಳನ

10:15 AM Dec 16, 2017 | Team Udayavani |

ಬೆಂಗಳೂರು: ರಾಷ್ಟ್ರೀಯ ಭದ್ರತೆಗೆ ವಿವಿಧೆಡೆಗಳಿಂದ ಉಂಟಾಗುತ್ತಿರುವ ಬೆದರಿಕೆಗಳನ್ನು ಕಾನೂನಾತ್ಮಕವಾಗಿ ಬಗೆಹರಿಸುವ ಕುರಿತಂತೆ ದಕ್ಷಿಣ ಭಾರತದ ಕೇಂದ್ರ ಸರ್ಕಾರಿ ವಕೀಲರಿಂದ ಶನಿವಾರ ನಗರದಲ್ಲಿ “ರಾಷ್ಟ್ರೀಯ ಭದ್ರತೆ- ನಮ್ಮ ಆದ್ಯತೆಗಳು’ ಕುರಿತ ವಿಚಾರ ಸಂಕಿರಣ ನಡೆಯಲಿದೆ.

Advertisement

ಅರಮನೆ ರಸ್ತೆಯಲ್ಲಿರುವ ಹೋಟೆಲ್‌ ಶಾಂಗ್ರಿಲಾದಲ್ಲಿ ನಡೆಯುವ ವಿಚಾರ ಸಂಕಿರಣವನ್ನು ಬೆಳಗ್ಗೆ 10.30ಕ್ಕೆ ರಾಜ್ಯಪಾಲ ವಿ.ಆರ್‌.ವಾಲಾ ಉದ್ಘಾಟಿಸಲಿದ್ದು, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಜಂಟಿ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಸಮಾರೋಪ
ಭಾಷಣ ಮಾಡಲಿದ್ದು, ಅಡಿಷನಲ್‌ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಪಾಲ್ಗೊಳ್ಳುವರು. ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಐದು ರಾಜ್ಯಗಳನ್ನು ಪ್ರತಿನಿಧಿಸುವ ಅಡಿಷನಲ್‌ ಸಾಲಿಸಿಟರ್‌ ಜನರಲ್‌, ಅಸಿಸ್ಟೆಂಟ್‌ ಸಾಲಿಸಿಟರ್‌ ಜನರಲ್‌ಗ‌ಳು ಸೇರಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ 250ಕ್ಕೂ ಹೆಚ್ಚು ವಕೀಲರು ಭಾಗವಹಿಸಲಿದ್ದಾರೆ.

ಐಸಿಸ್‌ ಸೇರಿ ವಿದೇಶಿ ಭಯೋತ್ಪಾದಕ ಸಂಘಟನೆಗಳು, ಸೈಬರ್‌ ಮತ್ತಿತರೆ ಬೌದ್ಧಿಕತೆಗೆ ಸಂಬಂಧಿಸಿದ ಭಯೋತ್ಪಾದನೆ, ಆರ್ಥಿಕ
ಭಯೋತ್ಪಾದನೆ ಮುಂತಾದ ವಿಚಾರಗಳಲ್ಲಿ ನ್ಯಾಯಾಂಗ ವ್ಯವಸ್ಥೆ ಯಾವ ರೀತಿ ದೇಶದ ಭದ್ರತೆಗೆ ಸಹಕರಿಸಬೇಕು? ಕಾನೂನಿನ ಮೂಲಕ ದೇಶದ ಸುರಕ್ಷತೆಗೆ ಹೇಗೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬಿತ್ಯಾದಿ ಅಂಶಗಳ ಬಗ್ಗೆ ವಕೀಲರು ಚರ್ಚೆ 
ನಡೆಸಲಿದ್ದಾರೆ.

ಪ್ರತಿಯೊಬ್ಬ ಪ್ರಜೆಗೂ ದೇಶದ ಭದ್ರತೆ, ಸುರಕ್ಷತೆ ಆದ್ಯತೆಯಾಗಿರುತ್ತದೆಯೋ ಅದೇ ರೀತಿ ನ್ಯಾಯಾಂಗ ಕ್ಷೇತ್ರದಲ್ಲಿ ಕೆಲಸ ಮಾಡುವ ವಕೀಲರಿಗೂ ಆದ್ಯತೆಯಾಗುತ್ತದೆ. ರಾಷ್ಟ್ರೀಯ ಭದ್ರತೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಆ ಕುರಿತಂತೆ
ನ್ಯಾಯಾಲಯಗಳಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ವಕೀಲರು ಹೆಚ್ಚು ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿಚಾರ ಸಂಕಿರಣದಲ್ಲಿ ಚರ್ಚೆಗಳು ನಡೆಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

ರಾಷ್ಟ್ರೀಯ ಭದ್ರತೆ ಪ್ರತಿಯೊಬ್ಬನ ಆದ್ಯ ಕರ್ತವ್ಯ. ಈ ನಿಟ್ಟನಲ್ಲಿ ಕಾನೂನಿನ ಮೂಲಕ ದೇಶದ ಭದ್ರತೆಯನ್ನು ಯಾವ ರೀತಿ
ಕಾಪಾಡಿಕೊಳ್ಳಬಹುದು ಎಂಬ ಬಗ್ಗೆ ವಿಚಾರ ಸಂಕಿರಣದಲ್ಲಿ ಚರ್ಚೆ ನಡೆಯಲಿದೆ. ಜತೆಗೆ ಭಯೋತ್ಪಾದಕ ಚಟುವಟಿಕೆಗಳನ್ನು ತಡೆಗಟ್ಟುವ ಕುರಿತು ಕಾನೂನಾತ್ಮಕ ಚಿಂತನೆ ಮಾಡಲಾಗುವುದು.

 ●ಕೆ.ಎಂ.ನಟರಾಜ್‌, ಅಡಿಷನಲ್‌ ಸಾಲಿಸಿಟರ್‌ ಜನರಲ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next