ಸಿದ್ದಾಪುರ: ಹೊಸಂಗಡಿ ಗ್ರಾಮದ ಭಾಗೀಮನೆಯಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತಿರುವ ಸಂಡೂರು ಪೌವರ್ ಪ್ರೊಜಕ್ಟ್ ಕಂಪನಿಯು ಸ್ಥಳೀಯರಿಗೆ ಹಾಗೂ ಉದ್ಯೋಗಿಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ, ಅವರ ವಿರುದ್ಧ ಪ್ರತಿಭಟನೆ ನಡೆಸುವ ಉದ್ದೇಶದಿಂದ ಆ. 17ರಂದು ಹೊಸಂಗಡಿ ಗ್ರಾ. ಪಂ. ಸಭಾಂಗಣದಲ್ಲಿ ಜನಪ್ರತಿನಿಧಿಗಳ ನೇತೃತ್ವದಲ್ಲಿ ಸಮಾಲೋಚನ ಸಭೆ ನಡೆಯಿತು.
ಆಂಧ್ರ ಮೂಲದ ವ್ಯಕ್ತಿಯ ಒಡೆತನದ ಸಂಡೂರು ಪೌವರ್ ಪ್ರೊಜಕ್ಟ್ ಕಂಪನಿಯು ಭೂಮಿ ನೀಡಿದವರಿಗೆ ಪರ್ಯಾಯ ವ್ಯವಸ್ಥೆ ಹಾಗೂ ಉದ್ಯೋಗ ಮತ್ತು ಪರಿಸರದ ಜನತೆಗೆ ಮೂಲಭೂತ ಸೌಕರ್ಯ ನೀಡುವ ಭರವಸೆಯೊಂದಿಗೆ ಆರಂಭಗೊಂಡಿತ್ತು. ಪ್ರಾರಂಭದ ದಿನಗಳಲ್ಲಿ ಅಲ್ಪಸ್ವಲ್ಪ ಹಣ, ಉದ್ಯೋಗ, ಮೂಲಭೂತ ಸೌಕರ್ಯ ನೀಡಿದರು.
ಅನಂತರದ ದಿನಗಳಲ್ಲಿ ಸೌಕರ್ಯಗಳನ್ನು ನೀಡದೆ ಸ್ಥಳೀಯರಿಗೆ ಹಾಗೂ ಉದ್ಯೋಗಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಕಂಪನಿಯು ಲಾಭದಲ್ಲಿ ಶೇ.4ರಷ್ಟು ಹಣವನ್ನು ಗ್ರಾ. ಪಂ.ಗೆ ನೀಡುವ ಭರವಸೆ ನೀಡಿದ್ದರು ಕೂಡ ಹಣವನ್ನು ನೀಡಲಿಲ್ಲ. ಕಂಪನಿಯು ಯಾವುದೂ ಒಂದು ಏಜೆನ್ಸಿಯ ಮೂಲಕ ಕಾರ್ಮಿಕರನ್ನು ನೇಮಕ ಮಾಡಿಕೊಂಡು ಕನಿಷ್ಠ ವೇತನ, ಯಾವುದೇ ಸೌಕರ್ಯ ಹಾಗೂ ಸೌಲಭ್ಯಗಳನ್ನು ನೀಡದೆ ವಂಚಿಸುತ್ತಿದೆ. ಕಂಪನಿಯು ಕೂಡಲೆ ಕಾರ್ಮಿಕರಿಗೆ ಸಂಬಳ ಹಾಗೂ ಸೌಲಭ್ಯಗಳು, ಸ್ಥಳೀಯರಿಗೆ ಉದ್ಯೋಗ, ಪರಿಹಾರ ಹಾಗೂ ಮೂಲ ಭೂತ ಸೌಕರ್ಯಗಳನ್ನು ನೀಡಬೇಕು.
ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ಹಾಗೂ ಕಂಪನಿಗೆ ಮುತ್ತಿಗೆ ಹಾಕುದಾಗಿ ಪ್ರತಿಭಟನಗಾರರು ಸಮಾಲೋಚನ ಸಭೆಯಲ್ಲಿ ಆಗ್ರಹಿಸಿದರು.
ಹೊಸಂಗಡಿ ಗ್ರಾ. ಪಂ. ಅಧ್ಯಕ್ಷೆ ಯಶೋಧ ಶೆಟ್ಟಿ, ಉಪಾಧ್ಯಕ್ಷ ಶ್ರೀಧರ, ಸದಸ್ಯರಾದ ಜಯರಾಮ ಗಾಣಿಗ, ಶಂಕರ ಶೆಟ್ಟಿ ನಳಾಲು ಅವರು ಮಾತನಾಡಿ, ಕಾರ್ಮಿಕ ಹಾಗೂ ಸ್ಥಳೀಯರಿಗೆ ಅನ್ಯಾಯವಾದರೆ ಕಂಪನಿಯ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ. ಗ್ರಾಮಸ್ಥರಿಗೆ ಗ್ರಾ. ಪಂ.ನ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ. ಪಂ. ಸದಸ್ಯರಾದ ಭಾಸ್ಕರ್ ಶೆಟ್ಟಿ ಕಾರೂರು, ಅನಿತಾ, ಶಾಂತಿ, ಮಲ್ಲಿಕಾ ನಾಯ್ಕ, ನಾಗವೇಣಿ ಹಾಗೂ ಕಾರ್ಮಿಕರು, ಸ್ಥಳೀಯರು ಉಪಸ್ಥಿತರಿದ್ದರು.