Advertisement

ಕನ್ನಡದ ಭರವಸೆಯ ಯಾತ್ರೆಯಾಗುತ್ತಿಲ್ಲ ಸಮ್ಮೇಳನ

11:01 AM Nov 27, 2017 | |

ಇಡೀ ಸಮಾವೇಶದಲ್ಲಿ ಅದ್ಭುತವೆನಿಸುವ, ಸದಾ ನೆನಪಿನಲ್ಲುಳಿ ಯುವ ಒಂದೇ ಒಂದು ಉಪನ್ಯಾಸವೂ ದಾಖಲಾಗಲಿಲ್ಲ. ವಿಭಿನ್ನವೆನಿಸುವ ಮಾತುಗಾರಿಕೆಯಿರಲಿಲ್ಲ. ಪ್ರತಿ ಸಮ್ಮೇಳನದಲ್ಲೂ ಕೇಳುವ ಅದೇ ಹಳೆಯ ವಿಚಾರಗಳು, ಅದರಲ್ಲೂ ಏಕತಾನತೆ. ಉದ್ಘಾಟನಾ ಸಮಾರಂಭದಲ್ಲಿ ನಿಕಟಪೂರ್ವ ಅಧ್ಯಕ್ಷ ಪೊ›.ಬರ ಗೂರು ರಾಮಚಂದ್ರಪ್ಪ, ಜಯಂತ್‌ ಕಾಯ್ಕಿಣಿ ಪರವಾಗಿಲ್ಲ ಎನ್ನುವಂತೆ ಮಾತನಾಡಿದ್ದು ಮಾತ್ರ ಇದಕ್ಕೆ ಹೊರತು.

Advertisement

ಬೆಳಗೊಂದು ಹುಟ್ಟುತ್ತದೆ, ಅರಿವೊಂದು ಹುಟ್ಟುತ್ತದೆ, ದಿನವೊಂದು ಶುರುವಾಗುತ್ತದೆ…ಬೆಳಕಿನೊಂದಿಗೆ ಕತ್ತಲೆಯೂ ಹಿಂಬಾಲಿಸಿಕೊಂಡು ಬರುತ್ತದೆ, ಅರಿವಿನೊಂದಿಗೆ ಆತಂಕವೂ ಹಿಂಬಾ ಲಿಸುತ್ತದೆ, ದಿನ ಮುಗಿದು ಮತ್ತೂಂದು ಬೆಳಗಿಗೆ ಸಿದ್ಧವಾಗುತ್ತದೆ. ಇವೆಲ್ಲವೂ ಯಾಂತ್ರಿಕ ಕ್ರಿಯೆಗಳಾಗಿ ಕ್ರಿಯೆಗಳಾಗಿ ಕ್ರಿಯೆಗಳಾಗಿ ಕಡೆಕಡೆಗೆ ಅವು ನಮ್ಮಲ್ಲಿ ಯಾವ ಬೆರಗನ್ನೂ ಸೃಷ್ಟಿಸದೆ ಕೊರಗನ್ನೂ ಎಬ್ಬಿಸದೆ ಹಾಗೆಯೇ ಹುಟ್ಟಿ ಹಾಗೆಯೇ ಮುಗಿಯುತ್ತವೆ. ಪ್ರತಿ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನವೂ ಹೀಗೆಯೇ ಶುರುವಾಗಿ, ಮುಗಿದು ಮತ್ತೂಂದು ಸಾಹಿತ್ಯ ಸಮ್ಮೇಳನದ ಘೋಷಣೆ ಯಾಗುತ್ತದೆ. ಇದರೊಂದಿಗೆ ಬರಬೇಕಾದ ಅರಿವಾಗಲೀ, ಅದನ್ನು ಹಿಂಬಾಲಿಸಬೇಕಾದ ಆತಂಕಗಳಾಗಲೀ, ಅದನ್ನು ಬೆನ್ನತ್ತಬೇಕಾದ ಸೃಜನಾತ್ಮಕ ಚಿಂತನೆಗಳಾಗಲೀ, ಇದರಿಂದ ಹೊರಹೊಮ್ಮಬೇಕಾದ ಸಮಾಧಾನ, ಸಾಂತ್ವನಗಳಾಗಲೀ ಎಲ್ಲಿ ಎಲ್ಲಿ ಎಲ್ಲಿ…

ಪ್ರತಿ ಸಮ್ಮೇಳನ ಮುಗಿದಾಗ ಕನ್ನಡಿಗ ಕನ್ನಡದ ಉಳಿವಿನ ಬಗ್ಗೆ, ಅದರ ಅಗಾಧ ಭವಿಷ್ಯದ ಅಗಾಧ ಸಾಧ್ಯತೆಗಳ ಬಗ್ಗೆ, ಊಧ್ವಗಾಮಿ ಪಯಣದ ಬಗ್ಗೆ ಭರವಸೆ ತಾಳಬೇಕು. ಆದರೆ ಸಮ್ಮೇಳನದ ಆರಂಭದಲ್ಲಿರುವ ಉದ್ವೇಗ ಸಮ್ಮೇಳನದ ಮಧ್ಯಭಾಗದಲ್ಲಿರುವು ದಿಲ್ಲ, ಮುಕ್ತಾಯವಾಗುವಾಗ ಬರೀ ತಲ್ಲಣಗಳಷ್ಟೇ ಉಳಿದು ಜನ ಉಂಡು ಎಸೆದಿರುವ ತಟ್ಟೆಗಳನ್ನು ಆರಿಸಿ ಎಸೆಯುವುದಕ್ಕಷ್ಟೆ ಕಾರ್ಯತತ್ಪರತೆ ಸೀಮಿತವಾಗಿರುತ್ತದೆ. ಇದು ಒಂದು ಸಮ್ಮೇಳನದಲ್ಲಿ ಹೇಳಿ ಮುಗಿಸಬಹುದಾದ ಮಾತುಗಳೇ ಎಂದರೆ ಇಲ್ಲ ಪ್ರತಿ ಸಮ್ಮೇಳನದಲ್ಲೂ ಇದನ್ನು ಯಥಾವತ್ತು ಹೇಳಿದರೂ ತಪ್ಪೆನಿಸದಷ್ಟು ಸಾದೃಶ್ಯ ಕಾಪಾಡಿಕೊಂಡು ಆ ಮಟ್ಟಿಗೆ ಬೆರಗನ್ನು ಹುಟ್ಟಿಸುತ್ತದೆ.

ಈ ಸಮ್ಮೇಳನವೂ ಸೇರಿ ಪ್ರತಿ ಸಮ್ಮೇಳನದಲ್ಲೂ ಆಗುವ ತಪ್ಪುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಈ ತಪ್ಪುಗಳ ತಿಳಿವಿನಲ್ಲಿ ಸರಿ ದಾರಿಯ ದಿಕ್ಸೂಚಿಯಿದೆ. ಭಾರತದ ಖ್ಯಾತ ಆಂಗ್ಲ ಲೇಖಕ ಅಮೀಶ್‌ ತ್ರಿಪಾಠಿ ತಾವು ಬರೆದ ಶಿವ ಟ್ರೈಲಜಿಯಲ್ಲಿ ಶಿವನನ್ನು ದೋಷ, ಅಸಮಾನತೆಯನ್ನು ನಾಶ ಮಾಡುವವನು ಎಂದು ಚಿತ್ರಿಸಿ¨ªಾರೆ. ಅಂದರೆ ಆತನದು ದೋಷ ನಾಶ ಮಾಡುವವನ ಪಾತ್ರವಷ್ಟೇ. ಹೊಸ ವ್ಯವಸ್ಥೆ ಸೃಷ್ಟಿಸುವ ಕೆಲಸ ಆತನದಲ್ಲ. ಅದಕ್ಕೆ ವಿಷ್ಣುವೇ ಬರಬೇಕು. ಈ ಲೇಖನವೂ ದೋಷವನ್ನು ಹೇಳು ವುದಕ್ಕಷ್ಟೇ ಸೀಮಿತಗೊಳ್ಳಲಿದೆ. ಪರಿಹಾರವನ್ನು ಕಾಲದ ಪ್ರಾಯೋ ಗಿಕ ಅಗತ್ಯಕ್ಕೆ ಬಿಟ್ಟುಬಿಡಲಾಗಿದೆ.

ಗೋಷ್ಠಿಗಳು ಗೋಷ್ಠಿಗಳು ಗೋಷ್ಠಿಗಳು
83ನೆ ಸಾಹಿತ್ಯ ಸಮ್ಮೇಳನದಲ್ಲಿ 23 ಗೋಷ್ಠಿಗಳು ನಡೆದವು. ಉದ್ಘಾಟನೆ, ಸಮಾರೋಪ, ಬಹಿರಂಗ ಅಧಿವೇಶನ ಸೇರಿದರೆ 26ಕ್ಕೇರುತ್ತದೆ. ಇದು ಹಿಂದಿನ ರಾಯಚೂರು ಸಮ್ಮೇಳನಕ್ಕಿಂತ ಜಾಸ್ತಿ. ಇದು ಜನರನ್ನು ನಿರಂತರವಾಗಿ ಗೋಷ್ಠಿಗಳಲ್ಲೇ ಮುಳುಗಿಸಿ ಬಿಡುತ್ತದೆ. ಸಮ್ಮೇಳನದಲ್ಲಿ ಸೃಷ್ಟಿಸಬಹುದಾದ ಹತ್ತಾರು ವೈವಿಧ್ಯಗಳ ಬದಲು, ಸಾಹಿತ್ಯವನ್ನು ಆ ಮೂಲಕವೂ ಜನರಿಗೆ ತಲುಪಿಸುವ ಸೃಜನಾತ್ಮಕತೆ ಬದಲು ಬರೀ ಭಾಷಣಕ್ಕಷ್ಟೇ ಸೀಮಿತವಾಗಿಸುತ್ತದೆ. ಇದು ಒಂದು ಹಂತದಲ್ಲಿ ಭಾಷಣವನ್ನು ಕೇಳಿಕೇಳಿ ಅಕ್ಷರವೇ ವಾಂತಿಯಾಗುವ ಹಂತಕ್ಕೆ ತಲುಪುತ್ತದೆ. 

Advertisement

ಸಮಯಕ್ಕೆ ಸರಿಯಾಗಿ ಯಾವುದೂ ನಡೆದಿಲ್ಲ
ಉದ್ಘಾಟನಾ ಕಾರ್ಯಕ್ರಮದಿಂದ ಹಿಡಿದು ಗೋಷ್ಠಿಗಳವರೆಗೆ ಯಾವುದೂ ಸಮಯಕ್ಕೆ ಸರಿಯಾಗಿ ನಡೆದಿಲ್ಲ. ಹತ್ತು ನಿಮಿಷದಷ್ಟು ತಡವಾಗಿದ್ದರೆ ಬೇಸರಕ್ಕೆ ಅರ್ಥವಿರುತ್ತಿರಲಿಲ್ಲ. 2, 3 ಗಂಟೆಗಳಷ್ಟು ತಡವಾದರೆ ಅಂತಹ ಬಿರುಬಿಸಿಲಿನಲ್ಲಿ ಯಾರ ಸಹನೆ ಉಳಿ ಯುತ್ತದೆ? ದೂರದೂರಿಂದ ಕೆಲವು ಗೋಷ್ಠಿಗಳಿಗೆಂದೆ ಬಂದವರ, ಬಸ್ಸನ್ನು ಹಿಡಿಯಬೇಕಾದವರ ಗತಿಯೇನು?

ಪ್ರೇಕ್ಷಕರ ನಾಡಿಬಡಿತವನ್ನು ಗಮನಿಸದ ಉಪನ್ಯಾಸಕರು
ಗೋಷ್ಠಿಗಳಲ್ಲಿ ಭಾಗವಹಿಸುವ ಉಪನ್ಯಾಸಕರು ಪ್ರೇಕ್ಷಕರನ್ನು ತಾವು ಹೇಳಿದ್ದನ್ನು ಕೇಳುವ ಯಂತ್ರಗಳೆಂದು ತಿಳಿದಂತಿತ್ತು. ಜನರು ಕೇಳುತ್ತಿ¨ªಾರೋ, ಅವರ ಆಸಕ್ತಿ ಇಲ್ಲಿದೆಯೂ ಎಂದೂ ಗಮನಿಸದೇ ನಿರಂತರವಾಗಿ ತಮಗೆ ಮಾತ್ರ ಅರ್ಥವಾಗುವ ವಿಚಾರಗಳನ್ನು ಪ್ರೇಕ್ಷಕರ ಮೇಲೆ ಹೇರುತ್ತಾ ಹೋದರು. ಕೆಲವು ಗೋಷ್ಠಿಗಳಲ್ಲಿ ಜನರೇ ಇರಲಿಲ್ಲ. ಇನ್ನು ಕೆಲವದರಲ್ಲಿ ಜನ ಜೋರು ಜೋರಾ ಗಿಯೇ ಮಾತನಾಡುತ್ತಿದ್ದರು. ಇಂತಹ ಹೊತ್ತಿನಲ್ಲಿ ಉಪನ್ಯಾಸಕರು ಅತ್ಯಂತ ದೀರ್ಘ‌ ಭಾಷಣ ಮಾಡುವುದು, ಅವರಿಗೆ ಕೊಟ್ಟ ಸಮಯವನ್ನು ಮೀರಿ ಮಾತನಾಡುವುದು ಒಂದು ಮಾಮೂಲಿ ವಿಧಿಯಂತೆ ನಡೆಯುತ್ತಿತ್ತು.

ಬರೀ ಭಾಷಾ ಚಮತ್ಕಾರ, ಗುಣಮಟ್ಟವೇ ಇಲ್ಲ
ಮಾಧ್ಯಮ-ಮುಂದಿರುವ ಸವಾಲುಗಳು, ಮಹಿಳಾ ಲೋಕದ ಹೊಸ ಮೀಮಾಂಸೆ, ಕನ್ನಡ ಸಂಶೋಧನೆ-ವಿಮರ್ಶೆ, ಅಲಕ್ಷಿತ ಸಮುದಾಯಗಳು ಎಂಬಂತಹ ಗಂಭೀರವಾದ ವಿಚಾರಗಳಿದ್ದರೂ ಅವು ಗಂಭೀರ ಚರ್ಚೆಗಳನ್ನು ಪ್ರೇಕ್ಷಕರ ನಡುವೆ ಎಬ್ಬಿಸಲಿಲ್ಲ. ಉಪನ್ಯಾಸಕರು ಭಾಷಾ ಚಮತ್ಕಾರಕ್ಕೆ ಗಮನ ಕೊಟ್ಟಷ್ಟು ವಿಚಾರ ಚಮತ್ಕಾರಕ್ಕೆ ಗಮನ ಕೊಡಲಿಲ್ಲ.
ಹೇಳಿದ್ದನ್ನೇ ಪದೇ ಪದೇ ಹೇಳುವುದು ಒಟ್ಟಾರೆ ನಡೆದ 23 ಗೋಷ್ಠಿಗಳಲ್ಲಿ ಬಹಳ ಬೇಸರ ಮೂಡಿಸಿದ ಸಂಗತಿಯೆಂದರೆ ಪ್ರತೀ ಗೋಷ್ಠಿಯಲ್ಲೂ ವಿಚಾರಗಳು ಪುನ ರಾವರ್ತ ನೆಗೊಳ್ಳುವುದು. ಉದಾಹರಣೆಗೆ ಕನ್ನಡವೆಂದರೆ ಮಂತ್ರ ಕಣಾ, ಶಕ್ತಿ ಕಣಾ, ತಾಯಿ ಕಣಾ, ದೇವಿ ಕಣಾ, ನೂರು ದೇವರ ನೂಕಾಚೆ ದೂರ- ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ ಬಾರಾ, ಕುಲ ಕುಲ ಕುಲವೆಂದು ಹೊಡೆದಾಡದಿರಿ- ನಿಮ್ಮ ಕುಲದ ನೆಲೆಯೇನಾದರೂ ಬಲ್ಲಿರಾ, ಮನುಜ ಜಾತಿ ತಾನೊಂದೆ ವಲಂ, ಮನುಜಮತ ವಿಶ್ವಪಥ ಎಂಬ ಸಾಲುಗಳು ಎಲ್ಲ ಕಡೆ ಗೋಷ್ಠಿಗಳಲ್ಲಿ ಕೇಳಿ ಬರುತ್ತಿದ್ದವು. ಶೋಷಣೆ, ಅಸಮಾನತೆ, ಜಾತೀಯತೆ, ಧಾರ್ಮಿಕ ಅಸಹಿಷ್ಣುತೆ, ಅಭಿವ್ಯಕ್ತಿ ಸ್ವಾತಂತ್ರ್ಯಹರಣ ಮತ್ತಿತರ ವಿಚಾರಗಳು ರಗಳೆ ಹಿಡಿಸುವಷ್ಟು ಬಾರಿ ಕೇಳಿಸಿದವು. ಕೆಲವು ಪದಗಳಂತೂ ಉದಾಹರಣೆಗೆ ಬಹುತ್ವ, ಬಹುಸಂಸ್ಕೃತಿ, ಒಲವು ನಿಲುವು, ಒಳನೋಟಗಳು ಸವಕಲಾಗು ವಷ್ಟು ಬಾರಿ ಕೇಳಿಸಿದವು.

ಭಾಷಣದ ಶೈಲಿ, ಧ್ವನಿಯ ಏರಿಳಿತದಲ್ಲೂ ಏಕತಾನ
ಅತ್ಯಂತ ಏಕತಾನವೆನ್ನಿಸುವ ವಿಚಾರವೆಂದರೆ ಪ್ರತಿ ಉಪನ್ಯಾಸ ಕರೂ ಒಂದೇ ಶೈಲಿಯಲ್ಲಿ, ಲಯದಲ್ಲಿ ಮಾತನಾಡುವುದು. ಅಂದರೆ ಭಾಷೆ, ಧ್ವನಿ, ಹಾವಭಾವವನ್ನು ಉಪಯೋಗಿಸುವ ಕ್ರಮದಲ್ಲೂ ಪ್ರತಿಯೊಬ್ಬರೂ ಒಂದೇ ರೀತಿ ಕಾಣುವುದು. ಬಂದ ಬಹುತೇಕ ಉಪನ್ಯಾಸಕರು ಒಂದೇ ತೆರನಲ್ಲಿ ಮಾತನಾಡುತ್ತ ನೀರಸವಾಗಿ ಏಕತಾನದ ಸ್ಥಿತಿ ಉಂಟು ಮಾಡಿದರು.

ನೆನಿಪಿನಲ್ಲುಳಿಯುವ ಉಪನ್ಯಾಸವೇ ಇಲ್ಲ
ಇಡೀ ಸಮಾವೇಶದಲ್ಲಿ ಅದ್ಭುತವೆನಿಸುವ, ಸದಾ ನೆನಪಿನಲ್ಲುಳಿ ಯುವ ಒಂದೇ ಒಂದು ಉಪನ್ಯಾಸವೂ ದಾಖಲಾಗಲಿಲ್ಲ. ವಿಭಿನ್ನವೆನಿಸುವ ಮಾತುಗಾರಿಕೆಯಿರಲಿಲ್ಲ. ಪ್ರತಿ ಸಮ್ಮೇಳನದಲ್ಲೂ ಕೇಳುವ ಅದೇ ಹಳೆಯ ವಿಚಾರಗಳು, ಅದರಲ್ಲೂ ಏಕತಾನತೆ. ಉದ್ಘಾಟನಾ ಸಮಾರಂಭದಲ್ಲಿ ನಿಕಟಪೂರ್ವ ಅಧ್ಯಕ್ಷ ಪೊ›.ಬರ ಗೂರು ರಾಮಚಂದ್ರಪ್ಪ, ಕವಿಗೋಷ್ಠಿಯಲ್ಲಿ ಜಯಂತ್‌ ಕಾಯ್ಕಿಣಿ ಪರವಾಗಿಲ್ಲ ಎನ್ನುವಂತೆ ಮಾತನಾಡಿದ್ದು ಮಾತ್ರ ಇದಕ್ಕೆ ಹೊರತು.

ಸಾಹಿತ್ಯ ತಲುಪಿಸಲು ನವೀನ ದಾರಿ ಹುಡುಕುತ್ತಿಲ್ಲ
ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಪ್ರತಿಬಾರಿ ಸಮ್ಮೇಳನ ನಡೆಸಿದಾಗಲೂ ಭಾಷಣದ ಗೋಷ್ಠಿಗಳಿಗೆ ಮಾತ್ರ ಆದ್ಯತೆ ಕೊಡುತ್ತಾರೆ (ರಾತ್ರಿ ಹೊತ್ತು ಸಂಗೀತ, ನೃತ್ಯ ಇದ್ದರೂ ಅದರ ಪ್ರೇಕ್ಷಕವರ್ಗವೇ ಬೇರೆ). ಸಾಹಿತ್ಯವನ್ನು ಬರೀ ಗೋಷ್ಠಿಗಳ ಮೂಲಕ, ಭಾಷಣದ ಮೂಲಕವಷ್ಟೇ ತಲುಪಿಸಬಹುದು ಎಂಬ ಭ್ರಮೆಯಿಂದ ಕಸಾಪ ಹೊರಬರಬೇಕು. ಹಿಂದೆ ಹಾಡು, ನೃತ್ಯ, ಹಲವು ಜನಪದ ಶೈಲಿಗಳ ರೂಪದಲ್ಲೂ ಸಾಹಿತ್ಯ ಜನರನ್ನು ತಲುಪುತ್ತಿತ್ತು. ಅಂದರೆ ಹಿಂದೆ ಕುಮಾರವ್ಯಾಸ ಭಾರತವನ್ನು ಗಮಕಗಳ ರೂಪದಲ್ಲಿ ಹಾಡಲಾಗುತ್ತಿತ್ತು. ಅದನ್ನು ನೃತ್ಯದ ಮೂಲಕವೂ ತೋರಿಸಲಾಗುತ್ತಿತ್ತು. ವೀರಗಾಸೆಯ ಮೂಲಕ ಶೂರತ್ವವನ್ನು ವರ್ಣಿಸಲಾಗುತ್ತಿತ್ತು. ಇವೆಲ್ಲ ಸಾಹಿತ್ಯ ಜನರನ್ನು ತಲುಪಲು ಪಡೆದುಕೊಂಡ ವಿವಿಧ ರೂಪಗಳು. ಈಗ ತಂತ್ರಜ್ಞಾನ ಬೆಳೆದಿರುವುದರಿಂದ ಸಾಹಿತ್ಯವನ್ನು ಜನರಿಗೆ ತಲುಪಿಸಲು ಇನ್ನಷ್ಟು ನವೀನ ದಾರಿಗಳನ್ನು ಕಸಾಪ ಹುಡುಕಬೇಕಾಗುತ್ತದೆ. ಆಗ ಏಕತಾನ ಇಲ್ಲವಾಗುತ್ತದೆ.

ಎಡಪಂಥೀಯ ಚಿಂತನೆಗಳು, ಚಿಂತಕರಿಗೆ ಗರಿಷ್ಠ ಆದ್ಯತೆ
ಪ್ರತಿ ಸಾಹಿತ್ಯ ಸಮ್ಮೇಳನದಲ್ಲೂ ಎಡಪಂಥೀಯ ಚಿಂತನೆಗಳು, ಚಿಂತಕರಿಗೆ ಆದ್ಯತೆ ಎಂಬ ವಾತಾವರಣವಿದೆ. ಇದು ವಿಚಾರದಲ್ಲೂ ಏಕತಾನವನ್ನುಂಟು ಮಾಡುತ್ತದೆ. ಪ್ರತಿಬಾರಿಯೂ ಶೋಷಣೆ, ಅಸಮಾನತೆ, ಪುರೋಹಿತಶಾಹಿ, ಬಹುತ್ವ ಎಂದೇ ಹೇಳುತ್ತಿದ್ದರೆ ಈ ಸಮ್ಮೇಳನ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗುವ ಅಪಾಯ ಎದುರಾಗುತ್ತದೆ. ಮತ್ತೂಂದು ಗುಂಪು ಇದನ್ನು ಶಾಶ್ವತವಾಗಿ ದೂರೀಕರಿಸುತ್ತದೆ. ಬಲಪಂಥೀಯ ಸಾಹಿತಿಗಳೆನಿಸಿಕೊಂಡವ ರ್ಯಾರೂ ಈ ಕಾರ್ಯಕ್ರಮಕ್ಕೆ ಬರದಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಪಿಎಚ್ಡಿ ಪದವೀಧರರದ್ದೇ ದೊಡ್ಡ ದಂಡು
ಈ ಸಮ್ಮೇಳನದಲ್ಲಿ ಅಂದಾಜು 86 ಮಂದಿ ಪಿಎಚ್ಡಿ ಪದವೀ ಧರರು ತಮ್ಮ ಪ್ರಬಂಧ ಮಂಡಿಸಿದರು. ಇದು ಗೋಷ್ಠಿಗಳನ್ನು ಪಕ್ಕಾ ಸೆಮಿರ್ನಾ ಗಳ ರೂಪಕ್ಕಿಳಿಸಿತು. ಇವರಲ್ಲಿ ಬಹುಪಾಲು ಮಂದಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದಂತೆ ಬರೆದು ತಂದ ಪ್ರಬಂಧ ಓದಿದರು. ಸಾಹಿತ್ಯದಲ್ಲಿ ಕೃಷಿ ಮಾಡಿದ ಎಸ್‌.ಎಲ….ಭೈರಪ್ಪ, ಸಿದ್ಧಲಿಂಗಯ್ಯ, ವಿವೇಕ್‌ ಶಾನುಭಾಗ್‌, ವಸುಧೇಂದ್ರ ಇಂತಹವರು ಮಾತನಾಡಿದರೆ ಅದು ನೈಜವಾಗಿ ಜನರಿಗೆ ತಟ್ಟುತ್ತದೆ.

ಜಾತ್ರೆಯ ಜೊತೆಗೆ ಜ್ಞಾನದ ಯಾತ್ರೆಯಾಗಲೀ
ಸಾಹಿತ್ಯ ಸಮ್ಮೇಳನ ಬರೀ ಜನರ ಜಾತ್ರೆಗಷ್ಟೇ ಸೀಮಿತವಾಗ ಬಾರದು. ಅದೊಂದು ನವಜಾಗೃತಿ ಮೂಡಿಸುವ ಜಾತ್ರೆಯಾಗ ಬೇಕು. ದೇವಸ್ಥಾನವೊಂದರಲ್ಲಿ ಪ್ರತಿ ಬಾರಿ ಜಾತ್ರೆ ನಡೆದಾಗಲೂ ತೇರೆಳೆಯುತ್ತಾರೆ. ಹಾಗೆಯೇ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡದ ತೇರನ್ನೆಳೆಯಬೇಕು. ಎಳೆದೂ ಎಳೆದೂ ಪ್ರತಿಬಾರಿಯೂ ಕನ್ನಡ ವನ್ನೂ ಇನ್ನಷ್ಟು ದೂರಕ್ಕೆ, ಎತ್ತರಕ್ಕೆ, ಹತ್ತಿರಕ್ಕೆ ಒಯ್ದು ನಿಲ್ಲಿಸಬೇಕು. ಆದರಿಲ್ಲಿ ಕನ್ನಡ ಜಾತ್ರೆ ಮಾತ್ರ ನಡೆಯುತ್ತಿದೆ. ಕನ್ನಡದ ಭರವಸೆಯ ಯಾತ್ರೆಯಾಗುವುದರಲ್ಲಿ ವಿಫ‌ಲವಾಗುತ್ತಿದೆ.

ನಿರೂಪ

Advertisement

Udayavani is now on Telegram. Click here to join our channel and stay updated with the latest news.

Next