ಬೆಳ್ತಂಗಡಿ: ಹನ್ನೊಂದು ವರ್ಷಗಳ ಹಿಂದೆ ಧರ್ಮಸ್ಥಳದ ಸಮೀಪದ ನಿವಾಸಿ ಪಾಂಗಳದ ಸೌಜನ್ಯ ಎಂಬ ವಿದ್ಯಾರ್ಥಿನಿಯ ಹತ್ಯೆ ಮಾಡಿದ ನೈಜ ಆರೋಪಿಯನ್ನು ಪತ್ತೆ ಹಚ್ಚಿ ಶಿಕ್ಷಿಸುವ ಕುರಿತಂತೆ ಹಕ್ಕೊತ್ತಾಯ ಮತ್ತು ಪ್ರಕರಣವನ್ನು ಮುಂದಿಟ್ಟು ಕ್ಷೇತ್ರ ಧರ್ಮಸ್ಥಳದ ಮೇಲೆ ಹಾಗೂ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮೇಲೆ ವೃಥಾರೋಪಗಳಿಂದ ನೊಂದಿರುವ ಆಕ್ರೋಶಿತ ಬಂಧುಗಳು ನಾಡಿನ ಲಕ್ಷಾಂತರ ಭಕ್ತರು ಸೇರಿ ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದ ವತಿಯಿಂದ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಮುಂಭಾಗ ನಡೆಸಿದ ಸಮಾವೇಶದ ಬಳಿಕ ಉಜಿರೆ ಎಸ್.ಡಿ.ಎಂ. ಕಾಲೇಜು ಮುಂಭಾಗ ನಡೆದ ಹಕ್ಕೊತ್ತಾಯ ಸಭೆ ವೇಳೆ ಸೌಜನ್ಯ ಅವರ ತಾಯಿ ಹಾಗೂ ತಂಗಿಯರು ಭಾಗಿಯಾದರು.
ಪ್ರಕರಣ ಸಂಬಂಧಿಸಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಅವಹೇಳನ ವಿಚಾರ ಪ್ರತಿಭಟನಾ ಸಮಾವೇಶಕ್ಕೆ ರಾಜ್ಯದ ವಿವಿಧ ಭಾಗದ ಭಕ್ತರು ಆಗಮಿಸಿ ಮಳೆಯ ಮಧ್ಯೆಯೇ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಜೈಕಾರ ಕೂಗುತ್ತ ಸೌಜನ್ಯಳಿಗೆ ನ್ಯಾಯ ಒದಗಿಸಬೇಕೆಂದು ಹೋರಾಟ ನಡೆಸಿದರು.
ಇದೇ ವೇಳೆ ಸಮಾವೇಶದ ಹಕ್ಕೊತ್ತಾಯ ವೇದಿಕೆ ಸಮೀಪ ಸೌಜನ್ಯ ಅವರ ತಾಯಿ ಕುಸುಮಾವತಿ, ತಂಗಿಯರಾದ ಸೌಮ್ಯ, ಸೌಂದರ್ಯ, ಸೌಹಾರ್ದ, ತಮ್ಮ ಜಯರಾಮ ಹಾಗೂ ಅತ್ತೆ ಮಗಳು ಮಧುಶ್ರೀ ಸೌಜನ್ಯ ಫೋಟೋ ಹಿಡಿದು ಬಂದರು.
ಹಕ್ಕೊತ್ತಾಯ ಸಭೆ ಮುಗಿದ ಬಳಿಕ ಡಾ.ಹೆಗ್ಗಡೆ ಅವರ ಅವಹೇಳನ ಮಾಡಿದವರ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಪೊಲೀಸರು ತಕ್ಷಣ ಅವರ ಕುಟುಂಬಕ್ಕೆ ಭದ್ರತೆ ನೀಡಿದರು. ಬಳಿಕ ಅಲ್ಲಿಂದ ಬೆಳಾಲು ಕ್ರಾಸ್ ವರೆಗೆ ಸೌಜನ್ಯ ಕೊಲೆ ಮಾಡಿದವರ ಬಂಧಿಸಿ ನ್ಯಾಯ ಕೊಡಿಸುವಂತೆ ಸೌಜನ್ಯ ತಾಯಿ, ತಂಗಿಯಂದಿರು ಘೋಷಣೆ ಕೂಗಿದರು.
ಈ ವೇಳೆ ಪರಿಸ್ಥಿತಿ ಉದ್ವಿಗ್ನಗೊಳ್ಳುವ ಸಾಧ್ಯತೆಯನ್ನು ಅರಿತ ಪೊಲೀಸರು ತಕ್ಷಣ ಅವರ ಕುಟುಂಬವರನ್ನು ಸ್ಥಳದಿಂದ ಕಳುಹಿಸುವ ವ್ಯವಸ್ಥೆ ಮಾಡಿದರು.