ನಾಲ್ಕು ದಿನಗಳ ಹಿಂದೆ ಸುಡುವ ಬಿಸಿಲಿನಲ್ಲಿ ನಾವು ಬಸ್‌ಗಾಗಿ ಬಸ್‌ಸ್ಟಾಪ್‌ನಲ್ಲಿ ಕಾಯುತ್ತಿದ್ದೆವು. ಆದರೆ ವಿಪರೀತ ಟ್ರಾಫಿಕ್ ಜಾಮ್ ನಿಂದಾಗಿ ಟ್ರಾಫಿಕ್ ಪೊಲೀಸರು ವಾಹನ ದಟ್ಟಣೆಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದರು. ಕೊನೆಗೆ ಬಸ್‌ಸ್ಟಾಪ್ ಹತ್ತಿರವೇ ಬ್ಯಾರಿಕೇಡ್‌ಗಳನ್ನ ಹಾಕಿ ಕೇವಲ ಕಾರ್ ಮತ್ತು ದ್ವಿಚಕ್ರ ವಾಹನಗಳು ಹೋಗಲು ಅವಕಾಶ ಮಾಡಿ ಕೊಟ್ಟರು. ಹೀಗಾಗಿ ಬಸ್, ಆಟೋ ಸೇರಿದಂತೆ ಇತರ ವಾಹನಗಳು ಡೇಟೂರ್ ಮಾಡಿ ಬೇರೆ ಮಾರ್ಗವಾಗಿ ಹೋಗಲು ಶುರುಮಾಡಿದವು. ಇದಿಷ್ಟೂ ನಮ್ಮ ಅರಿವಿಗೆ ಬರುವಷ್ಟರಲ್ಲಿ ತುಂಬ ಹೊತ್ತಾಗಿತ್ತು. ರಸ್ತೆ ದಾಟಿ ಎದುರು ಬದಿಯ ಬಸ್‌ಸ್ಟಾಪ್ ಬಳಿ ಬಂದೆವು. ಆದರೆ ಆ ಮಾರ್ಗವಾಗಿ ಯಾವುದೇ ಬಸ್ ನಾವು ಹೋಗಬೇಕಿದ್ದ ಜಾಗಕ್ಕೆ ಹೋಗುವುದಿಲ್ಲ ಎಂಬುದು ಗೊತ್ತಿತ್ತು. ಬಸ್ ಬದಲಿಸಿ ಬದಲಿಸಿ ಹೋಗಬೇಕಷ್ಟೆ ಎಂದು ತೀರ್ಮಾನಿಸಿದೆವು.
ಅಷ್ಟರಲ್ಲೇ ಟ್ರಾಫಿಕ್‌ನಲ್ಲಿ ಸಿಲುಕಿದ್ದ ಬಸ್ ಒಂದರ ಕಂಡಕ್ಟರ್ ನಮ್ಮ ಪರದಾಟವನ್ನು ನೋಡಿ “ಎಲ್ಲಿಗೆ ಹೋಗಬೇಕು?’ ಎಂದು ಕೇಳಿದರು. ಬನ್ನೇರುಘಟ್ಟ ಎಂದಾಗ “ಬನ್ನಿ, ಬಸ್ ಹತ್ತಿ, ಮುಂದೆ ಬೇರೆ ಬಸ್ ಸಿಕ್ಕರೆ ಹತ್ತಿಸುತ್ತೇನೆ’ ಎಂದು ಹೇಳಿದರು. ಆ ಗಿಜಿಗಿಜಿ ಟ್ರಾಫಿಕ್‌ನಲ್ಲಿ ಮೆಲ್ಲ ಮೆಲ್ಲನೆ ಸಾಗುತ್ತ ಬಸ್ ಮುಂದೆ ಹೋಯಿತು. ಬೆಳಗ್ಗೆ 10 ಗಂಟೆಗೆ ಮೆಜೆಸ್ಟಿಕ್ ಬಿಟ್ಟ ಬಸ್ 12:10 ಆದರೂ ಇಲ್ಲೇ ಇದೆ ನೋಡಿ ಎಂದರು ಕಂಡಕ್ಟರ್. ನಮ್ಮಂಥಾ ಅದೆಷ್ಟೋ ಮಂದಿ ಟ್ರಾಫಿಕ್‌ನಲ್ಲಿ ಸಿಲುಕಿ ಓವರ್‌ಟೈಮ್ ಕೆಲಸ ಮಾಡುತ್ತಾರೆ. ಆದರೆ ಅಷ್ಟೂ ಹೊತ್ತು ಬಸ್ ಟ್ರಾಫಿಕ್‌ನಲ್ಲೇ ಇರುವ ಕಾರಣ ಅದನ್ನು “ಸಿಂಗಲ್ ರೂಟ್’ ಎಂದು ಪರಿಗಣಿಸಲಾಗುತ್ತೆ. ಹಾಗಾಗಿ ಒ.ಟಿ ಮಾಡಿದ್ದಕ್ಕೆ ಸಂಬಳ ಸಿಗೋಲ್ಲ ಎಂದು ತನ್ನ ಕಷ್ಟ ಹೇಳಿದರು.
ಸ್ವಲ್ಪಮುಂದೆ ಹೋದಾಗ, ಬೇರೆ ಮಾರ್ಗವಾಗಿ ಬರುತ್ತಿದ್ದ ಬನ್ನೇರುಘಟ್ಟ ಬಸ್ ಕೊನೆಗೂ ನಮಗೆ ಕಾಣಿಸಿಕೊಂಡಿತು. ನಾವಿಳಿದು ಆ ಬಸ್ಸನ್ನೇರಿದೆವು. ಟ್ರಾಫಿಕ್‌ನಲ್ಲಿ ಸಿಕ್ಕಿಬಿದ್ದು ನಮಗೂ ಕಷ್ಟ ಆಗಿರೋದನ್ನ ಗಮನಿಸಿ ನಮ್ಮ ನೆರವಿಗೆ ಬಂದ ಆ ಕಂಡಕ್ಟರ್ ಡಿಪೊ ನಂಬರ್ 38ರ ಹನುಮಂತ ಅವರು. ಚಿಲ್ಲರೆಗಾಗಿ ಜಗಳ ಮಾಡುವ, ಅಥವಾ ಚಿಲ್ಲರೆ ಕೊಡದೆ ಇರುವ, ಟಿಕೆಟ್ ಇಶ್ಯೂ ಮಾಡದೆ ಇರುವ ಕಂಡಕ್ಟರ್‌ಗಳಿಂದಾಗಿ ಇಲಾಖೆಗೆ ಕೆಟ್ಟು ಹೆಸರು ಬರುತ್ತಿರುವುದಾದ್ರೆ, ಹನುಮಂತರಂಥ ಒಳ್ಳೆ ಸಿಬ್ಬಂದಿಯಿಂದ ಇಲಾಖೆಯ ಬಗ್ಗೆ ಒಳ್ಳೆ ಅಭಿಪ್ರಾಯ ಬರುತ್ತದೆ. ಕಿಕ್ಕಿರಿದ ಟ್ರಾಫಿಕ್ ದಟ್ಟಣೆಯಲ್ಲೂ ತಾಳ್ಮೆ ಕಳೆದುಕೊಳ್ಳದೆ ಹಸನ್ಮುಖೀಯಾಗಿ ಜನರ ಜೊತೆ ಮಾತನಾಡುತ್ತ ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡುವ ಇಂಥ ಕಂಡಕ್ಟರ್‌ಗಳನ್ನು ಕಂಡಾಗ ಬಹಳ ಖುಷಿಯಾಗುತ್ತದೆ. ಇವರ ಸಹಾಯ ಸಿಗದೇ ಇರುತ್ತಿದ್ದರೆ ಆವತ್ತು ನಾವು ಬನ್ನೇರುಘಟ್ಟ ತಲಪುವಷ್ಟರಲ್ಲಿ ರಾತ್ರಿಯಾಗುತ್ತಾ ಇತ್ತೇನೋ!
ಅದಿತಿಮಾನಸ ಟಿ. ಎಸ್.