ಬೆಂಗಳೂರು: ವೈಟ್ ಫೀಲ್ಡ್ ಘಟಕದ ಬಿಎಂಟಿಸಿ ವೋಲ್ವೋ ಬಸ್ ನಿರ್ವಾಹಕನಿಗೆ ಚಾಕು ಇರಿದಿರುವ ಜಾರ್ಖಂಡ್ ಮೂಲದ ಹರ್ಷ ಸಿನ್ಹಾ ಕೆಲವು ದಿನಗಳ ಹಿಂದೆ ಕೆಲಸದಿಂದ ತೆಗೆದು ಹಾಕಿದ್ದ ಮ್ಯಾನೇಜರ್ ನನ್ನು ಬೆದರಿಸಲು ಬ್ಯಾಗ್‌ನಲ್ಲಿ ಚಾಕು ಹಿಡಿದುಕೊಂಡು ಹೋಗಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.
ವೈಟ್ ಫೀಲ್ಟ್ ಘಟಕದ ಬಿಎಂಟಿಸಿ ವೋಲ್ವೋ ಬಸ್ ನಿರ್ವಾಹಕನಿಗೆ ಚಾಕು ಇರಿದಿರುವ ಘಟನೆ ಮಂಗಳ ವಾರ ಐಟಿಪಿಎಲ್ ಬಸ್ ನಿಲ್ದಾಣದ ಬಳಿ ನಡೆದಿತ್ತು. ಆರೋಪಿ ಹರ್ಷ ಸಿನ್ಹಾನನ್ನು ಬಂಧಿಸಿರುವ ವೈಟ್ ಫೀಲ್ಡ್ ಠಾಣೆ ಪೊಲೀಸರು ಆತನನ್ನು ವಿಚಾರಣೆ ನಡೆಸಿದಾಗ ಮ್ಯಾನೇಜರ್‌ಗೆ ಚಾಕು ತೋರಿಸಲು ಬೆದರಿಸಲು ಮುಂದಾಗಿದ್ದ ಸಂಗತಿ ಬೆಳಕಿಗೆ ಬಂದಿದೆ.
ಬಿಕಾಂ ಪದವೀಧರನಾಗಿದ್ದ ಹರ್ಷ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಇತ್ತೀಚೆಗೆ ಆತನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಇದರಿಂದ ಬೇರೆ ಕೆಲಸವಿಲ್ಲದೇ ಕಳೆದ 20 ದಿನಗಳಿಂದ ಹೂಡಿಯಲ್ಲಿರುವ ಪಿಜಿಯಲ್ಲೇ ಕಾಲ ಕಳೆಯುತ್ತಿದ್ದ. ಕೆಲಸಕ್ಕಾಗಿ ಅಲೆದು ಸುಸ್ತಾಗಿದ್ದ ಆತ ತನ್ನನ್ನು ಕೆಲಸದಿಂದ ತೆಗೆದ ಮ್ಯಾನೇಜರ್‌ನನ್ನು ಬೆದರಿಸಲು ಸಂಚು ರೂಪಿಸಿದ್ದ. ಅದರಂತೆ ಮಂಗಳವಾರ ಬ್ಯಾಗ್‌ನಲ್ಲಿ 2 ಚಾಕು ಇಟ್ಟುಕೊಂಡು ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಗೆ ತೆರಳಿದ್ದ. ಆದರೆ, ಕಂಪನಿಯ ಬಳಿ ಮ್ಯಾನೇಜರ್ ಹಾಗೂ ಇತರ ಅಧಿಕಾರಿಗಳು ಸಿಕ್ಕಿರಲಿಲ್ಲ. ಇದರಿಂದ ನೊಂದು ಹೂಡಿಯಲ್ಲಿರುವ ತನ್ನ ಪಿಜಿಗೆ ವಾಪಸ್ ಬರಲು ವೋಲ್ವೋ ಬಸ್ ಹತ್ತಿದ್ದ. ಬಸ್ ನಲ್ಲಿ ಫುಟ್‌ಬೋರ್ಡ್ ಮೇಲೆ ನಿಂತಿದ್ದ ಆತನನ್ನು ಬಸ್ ನೊಳಗೆ ಹೋಗುವಂತೆ ನಿರ್ವಾಹಕ ಯೋಗೇಶ್ ಹೇಳಿದ್ದರು. ಮೊದಲೇ ಕೆಲಸದಿಂದ ತೆಗೆದು ಹಾಕಿದ ಆಕ್ರೋಶದಲ್ಲಿದ್ದ ಹರ್ಷ ಸಿನ್ಹಾ ನಿರ್ವಾಹಕನ ಮಾತಿನಿಂದ ಕೆರಳಿ ಏಕಾಏಕಿ ತನ್ನ ಬ್ಯಾಗ್‌ನಲ್ಲಿದ್ದ ಚಾಕು ತೆಗೆದು ನಿರ್ವಾಹಕನಿಗೆ ಇರಿದಿದ್ದಾನೆ ಎಂಬ ವಿಚಾರ ತನಿಖೆಯಲ್ಲಿ ಗೊತ್ತಾಗಿದೆ.
ಮತ್ತೂಂದೆಡೆ ಗಾಯಾಳು ನಿರ್ವಾಹಕ ವೈಟ್ ಫೀಲ್ಡ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಂಡಿದ್ದಾರೆ.
ಬಸ್‌ನೊಳಗೆ ಆರೋಪಿ ಕೃತ್ಯದ ವಿಡಿಯೋ ವೈರಲ್: ಇನ್ನು ನಿರ್ವಾಹಕ ಯೋಗೀಶ್‌ಗೆ ಚಾಕು ಹಾಕಿದ ಸಿನ್ಹಾ, ಇಷ್ಟಕ್ಕೆ ಸುಮ್ಮನಾಗದೇ ಬಸ್ ಗಾಜುಗಳನ್ನು ಚಾಕುವಿನಿಂದ ಒಡೆದು ಹಾಕಿದ್ದ. ಚಾಕು ಪ್ರದರ್ಶಿಸುತ್ತಿದ್ದ ಆರೋಪಿಯನ್ನು ಕಂಡು ಬಸ್ ನಲ್ಲಿ ತುಂಬಿದ್ದ ಪ್ರಯಾಣಿಕರು ಭಯಭೀತರಾಗಿ ಬಸ್‌ನಿಂದ ಇಳಿದು ಹೋಗಿದ್ದರು. ಈ ದೃಶ್ಯವು ಬಸ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ದೃಶ್ಯ ವೈರಲ್ ಆಗಿದೆ. ಇನ್ನು ಈ ವಿಡಿಯೋ ನೋಡಿ ಹೊರ ರಾಜ್ಯದಿಂದ ಬೆಂಗಳೂರಿಗೆ ಉದ್ಯೋಗ ಅರಸಿ ಬರುತ್ತಿರುವವರ ಕುರಿತು ಬಗ್ಗೆ ಅಪಸ್ವರ ಕೇಳಿ ಬಂದಿದೆ. ಈ ಹಿಂದೆಯೂ ಬೆಂಗಳೂರಿನಲ್ಲಿ ಹೊರ ರಾಜ್ಯದವರಿಂದ ಇಂತಹ ಕೃತ್ಯಗಳು ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಜಾಲತಾಣಗಳಲ್ಲಿ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾನಸಿಕವಾಗಿ ನೊಂದಿದ್ದ ಆರೋಪಿ :
ವಿಚಾರಣೆ ವೇಳೆ ಕೆಲಸದಿಂದ ತೆಗೆದು ಹಾಕಿರುವ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದಿದ್ದೆ. ಜೀವನ ನಿರ್ವಹಣೆ ಮಾಡಲು ಕೆಲಸಕ್ಕಾಗಿ ಅಲೆದಾಡಿದ್ದರೂ ನೌಕರಿ ಸಿಕ್ಕಿರಲಿಲ್ಲ ಎಂದು ಆರೋಪಿ ಹೇಳಿದ್ದಾನೆ. ಹೀಗಾಗಿ ನೊಂದು ಕೃತ್ಯ ಎಸಗಿರುವುದು ಕಂಡು ಬಂದಿದೆ. ಆದರೆ, ಆರೋಪಿಯು ಈ ವಿಚಾರ ಹೊರತುಪಡಿಸಿ ಮಾನಸಿಕವಾಗಿ ಯಾವುದೇ ಕಾಯಿಲೆಗೆ ಒಳಗಾಗಿಲ್ಲ. ಆರೋಗ್ಯವಾಗಿದ್ದಾನೆ ಎಂದು ತಿಳಿದು ಬಂದಿದೆ.