ದಾವಣಗೆರೆ: ಜಿಲ್ಲೆಯಲ್ಲಿ ಮೇ 21 ಮತ್ತು 22ರಂದು ನಡೆಯಲಿರುವ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಅಧಿಕಾರಿಗಳು, ಸಿಬ್ಬಂದಿ ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚಿಸಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಮೂರು ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 600 ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷಾ ಕೇಂದ್ರದ ಸುತ್ತ 144 ಸೆಕ್ಷನ್ ಜಾರಿಯಲ್ಲಿರುತ್ತದೆ ಎಂದರು.
ಪ್ರತಿ ಕೊಠಡಿಯಲ್ಲಿ 20 ಅಭ್ಯರ್ಥಿಗಳಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಕೊರೊನಾ ನಿಯಾಮನುಸಾರ ಪರೀಕ್ಷಾ ಅಭ್ಯರ್ಥಿಗಳಿಗೆ ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್ ಮಾಡಿ ಉಚಿತವಾಗಿ ಮಾಸ್ಕ್ ನೀಡಲಾಗುವುದು. ಪರೀಕ್ಷಾ ಕೇಂದ್ರದಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಲಾಗುವುದು. ಕೇಂದ್ರಗಳಲ್ಲಿ ಕೊಠಡಿ ಮೇಲ್ವಿಚಾರಕರು ಹಾಗೂ ಅಭ್ಯರ್ಥಿಗಳು ಮೊಬೈಲ್, ಶೂ, ಎಲೆಕ್ಟ್ರಾನಿಕ್ ವಾಚ್ ಸೇರಿದಂತೆ ಯಾವುದೇ ರೀತಿಯ ಎಲೆಕ್ಟ್ರಾನಿಕ್‌ಉಪಕರಣ ತೆಗೆದುಕೊಂಡು ಹೋಗಲು ಅವಕಾಶವಿಲ್ಲ. ಪ್ರತಿ ಕೊಠಡಿಯಲ್ಲೂ ಸಮಯ ಪಾಲನೆಗಾಗಿ ಗೋಡೆ ಗಡಿಯಾರಗಳನ್ನು ಅಳವಡಿಸಲಾಗುತ್ತದೆ ಎಂದು ತಿಳಿಸಿದರು.
ಜಾಮಿಟ್ರಿ ಬಾಕ್ಸ್ ಇದ್ದಲ್ಲಿ ಕಡ್ಡಾಯವಾಗಿ ತಪಾಸಣೆಗೊಳಪಡಿಸಿ ರೇಖಾಗಣಿತ ಪರಿಕರಗಳಿಗೆ ಮಾತ್ರ ಅನುಮತಿ ನೀಡಲಾಗುವುದು. ನಿರ್ಬಂಧಿತ ಉಪಕರಣಗಳನ್ನು ತಂದಿರುವುದು ಕಂಡು ಬಂದಲ್ಲಿ ಪರೀಕ್ಷೆಯಿಂದ ಅಮಾನತು ಮಾಡಲಾಗುವುದು. ಜಿಲ್ಲೆಯಲ್ಲಿ ಈವರೆಗೆ ಎಲ್ಲ ಪರೀಕ್ಷೆಗಳು ಸುಗಮವಾಗಿ ನಡೆದಿವೆ. ಸರ್ಕಾರಕ್ಕೆ ಒಳ್ಳೆಯ ಹೆಸರು ತರಬೇಕು. ಯಾವುದೇ ರೀತಿಯ ಲೋಪ ಬರದಂತೆ ಕಾರ್ಯ ನಿರ್ವಹಿಸಬೇಕು. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಇ.ಎನ್.ಟಿ ವಿಶೇಷ ಪರಿಣಿತರನ್ನು ನೇಮಿಸಿ ಕೇಂದ್ರಗಳಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸದಂತೆ ನೋಡಿಕೊಳ್ಳಬೇಕು. ಪರೀಕ್ಷಾ ಕೇಂದ್ರದ ಆವರಣ ಮತ್ತು ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದು ಪರೀಕ್ಷಾರ್ಥಿಗಳ ಸಂಬಂ ಧಿಗಳು ಕೇಂದ್ರ, ಕೊಠಡಿ ಒಳಗೆ ಬರುವಂತಿಲ್ಲ. ಪರೀಕ್ಷಾ ಕೇಂದ್ರಗಳಲ್ಲಿ ನಡೆಯಬಹುದಾದ ಪರೀಕ್ಷಾ ಪ್ರಕ್ರಿಯೆಗಳ ಬಗ್ಗೆ ಕಾಲಕಾಲಕ್ಕೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಡಳಿತದ ಕಂಟ್ರೋಲ್ ರೂಂ ಸಂಖ್ಯೆ: 08192-257778 ಸಂಪರ್ಕಿಸಬಹುದು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎ. ಚನ್ನಪ್ಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಜಿ. ನಜ್ಮಾ, ಡಿಡಿಪಿಐ ಜಿ.ಆರ್. ತಿಪ್ಪೇಶಪ್ಪ, ಶಿಕ್ಷಣ ಇಲಾಖೆಯ ನೋಡಲ್ ಅಧಿಕಾರಿಗಳು, ಹಲವಾರು ಶಿಕ್ಷಣ ತಜ್ಞರು ಭಾಗವಹಿಸಿದ್ದರು.
ಇತ್ತೀಚಿಗೆ ಪಿಎಸ್‌ಐ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆಯಲ್ಲಿ ಸಾಕಷ್ಟು ಅಕ್ರಮಗಳು ಕಂಡುಬಂದಿರುವುದರಿಂದ ಜಿಲ್ಲೆಯಲ್ಲಿ ನಡೆಯಲಿರುವ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಅತ್ಯಂತ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಒಬ್ಬ ಅಭ್ಯರ್ಥಿ ಅಕ್ರಮ ನಡೆಯುವ ಸಣ್ಣ ಸಂದೇಹ ಕಂಡುಬಂದರೂ ಅಂಥವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.
– ಸಿ.ಬಿ. ರಿಷ್ಯಂತ್, ಜಿಲ್ಲಾ ರಕ್ಷಣಾಧಿಕಾರಿ