ದೇವನಹಳ್ಳಿ: ಸೆ.7 ರಿಂದ 18 ರವರೆಗೆ ಜಿಲ್ಲೆಯ 4 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ, ಜಿಲ್ಲೆಯ 2500 ವಿದ್ಯಾರ್ಥಿಗಳು ಹಾಜರಾಗಲಿದ್ದು, ಪರೀಕ್ಷೆ ಸುಸೂತ್ರವಾಗಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಗ್ರಾಮಾಂತರ ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್.ಕೆ.ನಾಯಕ್ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ನಡೆದ “2019-20ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವ್ಯವ್ಯಸ್ಥಿತವಾಗಿ ನಡೆಸುವ ಪೂರ್ವಸಿದ್ಧತಾ ಸಭೆ’ಯಲ್ಲಿ ಅಧ್ಯಕ್ಷತೆ ವಹಿಸಿಮಾತನಾಡಿದರು.
ಕೋವಿಡ್ ಸೋಂಕು ಭೀತಿ ಹಿನ್ನಲೆ, ಪರೀಕ್ಷಾ ಕೇಂದ್ರಗಳ ಎಲ್ಲಾ ಕೊಠಡಿ, ಪರೀಕ್ಷಾ ಕೇಂದ್ರದ ಸುತ್ತಲಿನ ಆವರಣವನ್ನು ಸ್ಯಾನಿಟೈಜ್ ಮಾಡಬೇಕು. ಪಿಯುಸಿ ಪೂರಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮಾಸ್ಕ್ ನೀಡಬೇಕು. ಪ್ರತಿ ವಿದ್ಯಾರ್ಥಿಗಳಿಗೆ ಸ್ಯಾನಿಟೈಜ್ ನೀಡಿ ಥರ್ಮಲ್ ಸ್ಕ್ರೀನಿಂಗ್ ನಡೆಸಬೇಕು ಎಂದರು.
ಒಟ್ಟು 4 ಪರೀಕ್ಷಾ ಕೇಂದ್ರಗಳ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಹೊರಡಿಸಲಾಗುವುದು. ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯೊಳಗೆ ವಿದ್ಯಾರ್ಥಿಗಳ ಪಾಲಕರೂ ಪ್ರವೇಶಿಸುವಂತಿಲ್ಲ ಎಂದರು. ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳವಂತೆ ಶಿಕ್ಷಕರು ನಿಗಾವಹಿಸಬೇಕು, ಅಲ್ಲದೆ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯ ಉತ್ತಮವಾಗಿರುವಂತೆ ಕ್ರಮ ವಹಿಸಬೇಕೆಂದರು. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಬಂದೋಬಸ್ತ್ನೊಂದಿಗೆ ಪರೀಕ್ಷಾ ಕಾರ್ಯ ಗಳಿಗೆ ವಾಹನ ಸೌಕರ್ಯ ಕಲ್ಪಿಸಲಾಗುವುದೆಂದರು.
ಬೆಂ.ಗ್ರಾಮಾಂತರ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.