Advertisement

ಪಾಟ್ ಹೋಲ್ ಸಮಿಟ್ ಮಾಡಿ: ಸರಕಾರಕ್ಕೆ ಎಚ್.ಡಿ.ಕೆ. ಕುಟುಕು

02:55 PM Oct 19, 2022 | Team Udayavani |

ಬೆಂಗಳೂರು: ನಾಡಪ್ರಭು ಕೆಂಪೇಗೌಡರು ಕಟ್ಟಿದ ವಿಶ್ವಮಾನ್ಯ ನಗರ ಬೆಂಗಳೂರಿಗೆ ಪಿಂಚಣಿದಾರು ಉದ್ಯಾನ ನಗರ, ಸಿಲಿಕಾನ್ ವ್ಯಾಲಿ ಎಂದೆಲ್ಲ ಹೆಸರುಗಳಿದ್ದವು. ಈಗ ಅವು ಗುಂಡಿಗಳೂರು, ಅಧ್ವಾನ ನಗರ, ಗುಂಡಿಗಳ ವ್ಯಾಲಿ ಎಂದಾಗಿದೆ. ಕಾಮಗಾರಿಗಳಲ್ಲಿ ಪರ್ಸಂಟೇಜ್ ವ್ಯವಸ್ಥೆಯೇ ಇಂಥ ಕುಖ್ಯಾತಿಗೆ ಕಾರಣ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಸರಣಿ ಟ್ವೀಟ್ ಮಾಡಿರುವ ಅವರು, ರಸ್ತೆಗುಂಡಿಗಳು ಸಾವಿನ ಗುಂಡಿಗಳಾಗಿವೆ. ನಗರದ ಲುಲೂ ಮಾಲ್ ಎದುರಿನ ರಸ್ತೆಯಲ್ಲಿ ಗುಂಡಿಗೆ ಇನ್ನೊಂದು ಜೀವ ಬಲಿಯಾದ ಮೇಲೆ ಎಚ್ಚೆತ್ತುಕೊಳ್ಳುವ ನಾಟಕ ನಡೆದಿದೆ. ಶಾಶ್ವತ ಪರಿಹಾರ ಎಲ್ಲಿ? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಕೊಲೆಪಾತಕ ಗುಂಡಿಕೂಪಗಳು ಸರಣಿ ಸಾವುಗಳಿಗೆ ಕಾರಣವಾಗಿದ್ದರೆ, ಅದೇ ಗುಂಡಿಗಳು ಕೆಲವರಿಗೆ ಕಲ್ಪವೃಕ್ಷವಾಗಿವೆ. ರಾಜ್ಯ ಬಿಜೆಪಿ ಸರಕಾರಕ್ಕೆ ರಸ್ತೆ ಗುಂಡಿಗಳು ಎಂದರೆ ಬಲು ಇಷ್ಟ. ಗುಂಡಿಗಳು ಬಿದ್ದಷ್ಟೂ ಕಿಸೆಗೆ ಹರಿದು ಬರಲಿದೆ ದುಡ್ಡು. ಇವರಿಗೆ ಹೈಕೋರ್ಟ್ ಛೀಮಾರಿ ಹಾಕಿದರೂ ನಾಚಿಕೆ, ಸಂಕೋಚ ಎನ್ನವುದಿಲ್ಲ. ಜೈಲಿಗೆ ಅಟ್ಟುವುದಾಗಿ ಎಚ್ಚರಿಕೆ ಕೊಟ್ಟರೂ ಅಧಿಕಾರಿಗಳು ಭಂಡತನ ಬಿಡುತ್ತಿಲ್ಲ ಎಂದು ಟೀಕಿಸಿದ್ದಾರೆ.

ಗುಂಡಿ ಬಿದ್ದ ರಸ್ತೆಗಳು ರಾಜ್ಯದ ಗೌರವವನ್ನು ಮೂರಾಬಟ್ಟೆ ಮಾಡುತ್ತಿರುವುದು ಒಂದೆಡೆ, ಇನ್ನೊಂದೆಡೆ ಸರಕಾರ ಜಾಗತಿಕ ಹೂಡಿಕೆದಾರರ ಸಮಾವೇಶ, ಜಾಗತಿಕ ತಂತ್ರಜ್ಞಾನ ಶೃಂಗ ನಡೆಸುತ್ತಿದೆ. ‘ ರಸ್ತೆ ಗುಂಡಿಗಳ ಶೃಂಗ’ (Patholes Summit) ವನ್ನೂ ನಡೆಸಿದರೆ ಇನ್ನೂ ಚೆನ್ನಾಗಿರುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ರಸ್ತೆ ಗುಂಡಿಗಳ ಸರಣಿ ಸಾವುಗಳಿಗೆ ರಾಜ್ಯ ಬಿಜೆಪಿ ಸರಕಾರವೇ ನೇರ ಕಾರಣ. ಮುಗ್ಧ ಜನರು ಸಾವು ನೋವುಗಳಿಗೆ ಬಿಬಿಎಂಪಿಯೇ ಸಂಪೂರ್ಣ ಹೊಣೆ. ಸಂಬಂಧಪಟ್ಟ ಮಂತ್ರಿಗಳು, ಅಧಿಕಾರಿಗಳೇ ಇದಕ್ಕೆ ಉತ್ತರದಾಯಿಗಳು ಎಂದು ಆರೋಪಿಸಿದ್ದಾರೆ.

Advertisement

ಪಾಲಿಕೆ ಮಾಡಿದ ಪಾಪಕ್ಕೆ ನತದೃಷ್ಟ ಮಹಿಳೆ ಉಮಾದೇವಿ ಅವರು ಬಲಿಯಾಗಿದ್ದಾರೆ. ಅವರಿಗೆ ಪರಿಹಾರ ಕೊಟ್ಟು ಕೈತೊಳೆದುಕೊಳ್ಳುವುದಲ್ಲ. ಇನ್ನಾದರೂ ಗುಂಡಿಗಳನ್ನು ಮುಚ್ಚಬೇಕು ಹಾಗೂ ರಸ್ತೆಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಬೇಕು. ಮೃತ ಮಹಿಳೆ ಉಮಾದೇವಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ರಾಜ್ಯ ಸರಕಾರ ಅವರಿಗೆ ಸೂಕ್ತ ಪರಿಹಾರ ಬಿಡುಗಡೆ ಮಾಡಬೇಕು ಎಂಬುದು ನನ್ನ ಒತ್ತಾಯ ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next