ಬಾದಾಮಿ: ಪಟ್ಟದಕಲ್ಲು ಹಾಗೂ ಐಹೊಳೆ ಐತಿಹಾಸಿಕ ಕ್ಷೇತ್ರಗಳು ಚಾಲುಕ್ಯರ ಹೆಮ್ಮೆಯಾಗಿದ್ದು. ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿವೆ. ಜನಪದ ಕಲೆ, ಗ್ರಾಮೀಣ , ಸಾಹಿತ್ಯ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ದೊರೆಯಬೇಕಾದರೆ ಬರುವ ಫೆಬ್ರವರಿಯಲ್ಲಿ ಚಾಲುಕ್ಯ ಉತ್ಸವ ನಡೆಸಬೇಕು ಎಂದು ಬಾದಾಮಿ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್ .ಹಿರೇಹಾಳ ಆಗ್ರಹಿಸಿದರು.
ಪಟ್ಟಣದ ಕಾನಿಪ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ನಾಲ್ಕೈದು ವರ್ಷಗಳಿಂದ ಅನೇಕ ಕಾರಣಗಳಿಂದ ಚಾಲುಕ್ಯ ಉತ್ಸವ ನಡೆಯದೇ ಇರುವುದು ಜನರಿಗೆ ನೋವು ತಂದಿದೆ. ಚಾಲುಕ್ಯ ಉತ್ಸವವನ್ನು ಹಮ್ಮಿಕೊಂಡರೆ ಇಲ್ಲಿನ ಜನಪದ ಕಲೆ, ಗ್ರಾಮೀಣ , ಸಾಹಿತ್ಯ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಸಿಗುತ್ತದೆ.
ಈ ಹಿಂದೆ 2019 ಮತ್ತು 2020 ರಲ್ಲಿ ಚಾಲುಕ್ಯ ಉತ್ಸವ ನಡೆಸಲು ಕೋರಿ ಮಾಜಿ ಮುಖ್ಯಮಂತ್ರಿ, ಶಾಸಕ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಅವರಿಗೆ ಮನವಿ ಕೊಡಲಾಗಿತ್ತು. ಕಳೆದ ಬಾರಿ ಕೊರೊನಾ ಕಾರಣದಿಂದ ಉತ್ಸವ ನಡೆಸಲಿಲ್ಲ. ಆದ್ದರಿಂದ ಈ ಸಲ ಚಾಲುಕ್ಯ ಉತ್ಸವವನ್ನು ಹಮ್ಮಿಕೊಳ್ಳಬೇಕು. ಸದ್ಯದಲ್ಲಿ ಚಾಲುಕ್ಯ ಉತ್ಸವ ಆಯೋಜನೆಗಾಗಿ ಶಾಸಕರು ಮುತುವರ್ಜಿ ವಹಿಸಿ ಸರಕಾರಕ್ಕೆ ಒತ್ತಡ ಹೇರಿ ದಿನಾಂಕವನ್ನು ರಾಜ್ಯ ಸರ್ಕಾರ ಘೋಷಿಸಬೇಕು ಎಂದರು.
ಕಾರ್ಯದರ್ಶಿ ಇಷ್ಟಲಿಂಗ ನರೇಗಲ್ ಮಾತನಾಡಿ, ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅ ಕಾರಿಗಳು ಚಾಲುಕ್ಯ ಉತ್ಸವ ನಡೆಸುವ ಮೂಲಕ ಈ ಭಾಗದ ಜನರ ಬೇಡಿಕೆ ಈಡೇರಿಸಬೇಕು. ಬೇಡಿಕೆಗಳನ್ನು ಈಡೇರಿಸದಿದ್ದರೆ, ಬಾದಾಮಿ ಸಾರ್ವಜನಿಕರು, ವಿದ್ಯಾರ್ಥಿಗಳು, ಇತಿಹಾಸಕಾರರು, ಚಿತ್ರಕಾರರು, ಶಿಲ್ಪಕಾರರು, ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳೊಂದಿಗೆ ಪ್ರತಿಭಟನಾ ರ್ಯಾಲಿ ಹಾಗೂ ಮುತ್ತಿಗೆ ಹಾಕುವ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.ಪತ್ರಿಕಾಗೋಷ್ಟಿಯಲ್ಲಿ ಮಹಾಂತೇಶ ವಡ್ಡರ, ಚಂದ್ರು ಸೂಡಿ ಹಾಜರಿದ್ದರು.