Advertisement

ತಿಂಗಳಿಗೊಮ್ಮೆ ಪ್ರತಿ ಗ್ರಾಮದಲ್ಲಿ ಆಧಾರ್‌ ಕ್ಯಾಂಪ್‌ ನಡೆಸಿ

10:47 AM Jul 22, 2019 | Team Udayavani |

ರೋಣ: ಸರ್ಕಾರದ ಯೋಜನೆ, ಶಿಕ್ಷಣ, ಬ್ಯಾಂಕ್‌ ವ್ಯವಹಾರ, ಉದ್ಯೋಗ ಸೇರಿದಂತೆ ಪ್ರತಿಯೊಂದು ಕೆಲಸಕ್ಕೂ ಆಧಾರ್‌ ಕಾರ್ಡ್‌ ಕಡ್ಡಾಯವಾಗಿದೆ. ಆಧಾರ್‌ಗಾಗಿ ಹೋಬಳಿ, ತಾಲೂಕು ಕೇಂದ್ರಕ್ಕೆ ತೆರಳಿ ಎರಡರಿಂದ ಮೂರು ದಿನ ಸರದಿ ನಿಲ್ಲಬೇಕಾಗುತ್ತದೆ. ಆದ್ದರಿಂದ ಕನಿಷ್ಠ ಪಕ್ಷ ತಿಂಗಳಿಗೊಮ್ಮೆ ಪ್ರತಿ ಗ್ರಾಮದಲ್ಲಿ ಆಧಾರ್‌ ಕ್ಯಾಂಪ್‌ ನಡೆಸಬೇಕು ಎಂದು ತಾಲೂಕಿನ ಸವಡಿ ಗ್ರಾಮದ ರೈತರು ಹಾಗೂ ಮುಖಂಡರು ಆಗ್ರಹಿಸಿದರು.

Advertisement

ತಾಲೂಕಿನ ಸವಡಿ ಗ್ರಾಪಂ ಆವರಣದಲ್ಲಿ ನಡೆದ ತಾಲೂಕು ಮಟ್ಟದ ಜನಸ್ಪಂದನಾ ಸಭೆಯಲ್ಲಿ ಆಗ್ರಹಿಸಿದ ಅವರು, ಪ್ರತಿಯೊಬ್ಬರಿಗೂ ಆಧಾರ್‌ ಅತಿ ಅವಶ್ಯವಾಗಿದೆ. ಆದ್ದರಿಂದ ಆಧಾರ್‌ ಕಾರ್ಡ್‌ ಹೊಂದಲು ಅಥವಾ ಆಧಾರ್‌ ಕಾರ್ಡ್‌ನಲ್ಲಿ ಹೆಸರು, ವಿಳಾಸ ತಿದ್ದುಪಡಿ ಅಥವಾ ಸೇರ್ಪಡೆ ಮಾಡಲು ತಾಲೂಕು ಕೇಂದ್ರದಲ್ಲಿ ತೆರೆಯಲಾದ ಆಧಾರ್‌ ಕೇಂದ್ರದಲ್ಲಿ ಎರಡರಿಂದ ಮೂರು ದಿನ ಉದ್ಯೋಗ ಬಿಟ್ಟು ಸರದಿ ನಿಲ್ಲಬೇಕು. ಜತೆಗೆ ಸಣ್ಣ ಸಣ್ಣ ಮಕ್ಕಳು, ವೃದ್ದರನ್ನು ಸರದಿಯಲ್ಲಿ ನಿಲ್ಲಿಸಬೇಕು. ಬೇರಡೆ ಹೋಗಿ ದಿನವಿಡಿ ನಿಂತು ಆಧಾರ್‌ ಪಡೆಯುವುದು ತೀವ್ರ ತೊಂದರೆಯಾಗುತ್ತಿದೆ. ಅಲ್ಲದೇ ಕೆಲ ಆಧಾರ್‌ ಕೇಂದ್ರದಲ್ಲಿ ಮಧ್ಯವರ್ತಿಗಳ ಹಾವಳಿಯಿದ್ದು, ಮಧ್ಯವರ್ತಿಗಳು ಕಾರ್ಡ್‌ವೊಂದಕ್ಕೆ 500ರಿಂದ 1000 ರೂ. ಪಡೆಯುತ್ತಿದ್ದಾರೆ. ಆದ್ದರಿಂದ ಜನತೆ ಪರದಾಟ ಮತ್ತು ತೊಂದರೆ ತಪ್ಪಿಸಲು

ಪ್ರತಿಯೊಂದು ಗ್ರಾಮದಲ್ಲಿ ಕನಿಷ್ಠ ಪಕ್ಷ ತಿಂಗಳಿಗೊಮ್ಮೆ ಆಧಾರ್‌ ಕ್ಯಾಂಪ್‌ ನಡೆಸಲು ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಆಗ ತಹಶೀಲ್ದಾರ್‌ ಶರಣಮ್ಮ ಕಾರಿ ಮಾತನಾಡಿ, ಈಗಾಗಲೇ ರೋಣ, ಹೊಳೆಆಲೂರು, ಗಜೇಂದ್ರಗಡ, ನರೇಗಲ್ಲ, ಸೂಡಿ ಸೇರಿದಂತೆ 9 ಕಡೆಗಳಲ್ಲಿ ಆಧಾರ್‌ ಕೇಂದ್ರ ತೆರೆಯಲಾಗಿದೆ. ಯಾವದೇ ಕೇಂದ್ರದಲ್ಲಾದರೂ ಆಧಾರ್‌ ಪಡೆಯಲು ಅಥವಾ ತಿದ್ದುಪಡಿ ಮಾಡಿಸಲು ಅವಕಾಶವಿದೆ. ಆದ್ದರಿಂದ ಜನರು ಕೇವಲ ಒಂದೇ ಕೇಂದ್ರದಲ್ಲಿ ಸರದಿ ಸಾಲಲ್ಲಿ ನಿಲ್ಲುವುದು ಬೇಡ. ಆಧಾರ್‌ ಕ್ಯಾಂಪ್‌ ನಡೆಸುವ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಬೇರೆಡೆ ಗುಳೆ ಹೋಗದಂತೆ ತಡೆಯಲು ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದಿದೆ. ಈ ಮೂಲಕ ದುಡಿಯುವ ಕೈಗಳಿಗೆ ಕೆಲಸ ನೀಡಬೇಕು ಎಂಬ ನಿಯಮವಿದೆ. ಆದರೆ ಸವಡಿ ಗ್ರಾಮದಲ್ಲಿ ಈ ವರ್ಷ ಕೇವಲ 2 ದಿನ ಮಾತ್ರ ಕೆಲಸ ನೀಡಲಾಗಿದೆ. ಗ್ರಾಮದಲ್ಲಿ 11 ಸಾವಿರ ಎಕರೆ ಜಮೀನು, 7 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಆದರೆ ಸಮರ್ಪಕವಾಗಿ ಉದ್ಯೋಗ ನೀಡುವಲ್ಲಿ ಗ್ರಾಪಂ ಮುಂದಾಗಿಲ್ಲ ಎಂದು ಮೇಘರಾಜ ಬಾವಿ ಆರೋಪಿಸಿದರು. ಆಗ ಪಿಡಿಒ ಅನೀಲ ಬೇವಿನಮರದ ಮಾತನಾಡಿ, ಉದ್ಯೋಗ ಅರಸಿ ಬಂದವರಿಗೆ ಕೆಲಸ ನೀಡುತ್ತ ಬರಲಾಗಿದೆ. ಅಲ್ಲದೇ ಖಾತ್ರಿ ಯೋಜನೆಯಡಿ ಅನೇಕ ಕಾಮಗಾರಿ ಕೈಗೊಳ್ಳಲಾಗಿದೆ. ಈಗಲೂ ಯಾರಾದರೂ ಉದ್ಯೋಗ ಅರಸಿ ಬಂದಲ್ಲಿ ತಕ್ಷಣವೇ ಕೆಲಸ ನೀಡಲಾಗುವುದು ಎಂದು ಹೇಳಿದರು. ಗ್ರಾಮದ ಸುತ್ತ ಹಳ್ಳಗಳಿವೆ. ಪ್ರತಿಯೊಂದು ಹಳ್ಳಕ್ಕೂ ಚೆಕ್‌ ಡ್ಯಾಂ ನಿರ್ಮಿಸಬೇಕು. ಗ್ರಾಪಂ ಕಚೇರಿಯಲ್ಲಿಯೇ ಪಹಣಿ ಪತ್ರ ವಿತಸುವಂತೆ ಕ್ರಮ ಕೈಗೊಳ್ಳಬೇಕು. ಶಾಲಾ ಅವಧಿ ಪ್ರಾರಂಭ ಮತ್ತು ಬಿಡುವಿನ ವೇಳೆಯಲ್ಲಿ ಗ್ರಾಮಕ್ಕೆ ಸಾರಿಗೆ ಬಸ್‌ ಬಂದು ಹೋಗುವಂತೆ ಸರಿಯಾದ ಸಮಯ ನಿಗದಿ ಮಾಡಬೇಕು. ಶಾಲೆ ಆಗಮಿಸಿ ತೆರಳುವ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು. ಸಕಾಲಕ್ಕೆ ರೇಷನ್‌ ಕಾರ್ಡ್‌ ವಿತರಿಸಬೇಕು. ಹೀಗೆ ವಿವಿಧ ರೀತಿಯ ಬೇಡಿಕೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.ಗ್ರಾಪಂ ಅಧ್ಯಕ್ಷೆ ಅಕ್ಕಮಹಾದೇವಿ ತಳವಾರ, ತಾಪಂ ಸದಸ್ಯ ಎಂ.ಎ. ತರಪದಾರ, ಉಪ ತಹಶೀಲ್ದಾರ್‌ ಎಸ್‌.ಎ. ನದಾಫ, ಕಂದಾಯ ನಿರೀಕ್ಷಕ ಜೆ.ಟಿ. ಕೊಪ್ಪದ, ಸಿಡಿಪಿಒ ನಾಗನಗೌಡ ಪಾಟೀಲ, ಪಿಡಿಒ ಅನೀಲ ಬೇವಿನಮರದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next