Advertisement

ಎಚ್ಚೆಸ್ವಿ ಕಾವ್ಯ ತಿಳಿಯಲು ವಿಮರ್ಶೆ ನಡೆಸಿ

01:09 AM Jul 01, 2019 | Lakshmi GovindaRaj |

ಬೆಂಗಳೂರು: ಹಿರಿಯ ಕವಿ ಎಚ್‌.ಎಸ್‌.ವೆಂಕಟೇಶ ಮೂರ್ತಿಯವರ‌ ಕಾವ್ಯದ ಘಮಲು ಸವಿಯಲು ಅವರ ಕೃತಿಗಳ ಬಗ್ಗೆ ಮತ್ತಷ್ಟು ವಿಮರ್ಶೆಗಳು ನಡೆಯಬೇಕಾದ ಅಗತ್ಯವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಅಭಿಪ್ರಾಯ ಪಟ್ಟರು.

Advertisement

ಡಾ.ಎಚ್‌.ಎಸ್‌.ವಿ.ಅಭಿನಂದನಾ ಸಮಿತಿ, ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ “ಎಚ್ಚೆಸ್ವಿ 75′ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲಾ ಪ್ರಕಾರದ ಸಾಹಿತ್ಯದಲ್ಲಿ ಸೈ ಎನಿಸಿಕೊಂಡಿರುವ ಎಚ್‌.ಎಸ್‌.ವೆಂಕಟೇಶ ಮೂರ್ತಿ ಅವರ ಕಾವ್ಯಗಳಲ್ಲಿ ಅಳವಾದ ಕನಸುಗಳು ಮತ್ತು ನೆನಪುಗಳು ಇದ್ದು, ಅವುಗಳನ್ನು ಯುವ ಸಮುದಾಯಕ್ಕೆ ತಿಳಿಯ ಬೇಕಾಗಿದೆ ಎಂದು ಹೇಳಿದರು.

ನವೋದಯದ ಕಾಲಘಟ್ಟದಲ್ಲಿ ಯಾವ ಇತಿಹಾಸದ ಸುಳಿಗೂ ಸಿಗದೆ, ತಮ್ಮದೇ ಆದ ಇತಿಮಿತಿಯಲ್ಲೇ ಭಿನ್ನ ರೀತಿಯ ಕಾವ್ಯವನ್ನು ಕಟ್ಟಿ ಕನ್ನಡ ಸಾಹಿತ್ಯ ಲೋಕವನ್ನು ಮತ್ತಷ್ಟು ಶ್ರೀಮಂತಗೊಳಿಸಿದ್ದಾರೆ. ತಮ್ಮ ಬರಹಗಳಲ್ಲಿ ಮೌಲ್ಯ ಮತ್ತು ನಂಬಿಕೆ ಎರಡನ್ನೂ ಇಟ್ಟುಕೊಂಡು ಸಾಹಿತ್ಯವನ್ನು ರಚಿಸಿದ್ದಾರೆ ಎಂದು ಶ್ಲಾಘಿಸಿದರು.

ಕಾವ್ಯಗಳಲ್ಲಿ ಕನಸುಗಳು ಇರಬೇಕು. ಹಾಗೆಯೇ ನೆನಪುಗಳು ಅವಿತಿರಬೇಕು. ಈ ಎರಡೂ ಅಂಶಗಳು ಎಚ್‌.ಎಸ್‌.ವಿ.ಅವರ ಬರಹದಲ್ಲಿ ಕಾಣಬಹುದಾಗಿದೆ. ಕಾವ್ಯ ಸಾಹಿತ್ಯದ ಅಪರೂಪ ಕವಿಯನ್ನು ಅವರ ಶಿಷ್ಯ ಬಳಗ, ಅಭಿಮಾನಿ ಸಮೂಹ ನೆನಪಿಸಿ ಗೌರವಿಸುತ್ತಿರುವುದು ಸಂತೋಷ ಪಡುವ ವಿಚಾರವಾಗಿದೆ ಎಂದರು.

ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ಸಾಹಿತ್ಯ ಲೋಕದಲ್ಲಿ ವಿಮರ್ಶೆಯ ಮೂಲಕ ಮನ್ನಣೆ ಮತ್ತು ಜನಪ್ರಿಯತೆ ಪಡೆಯುವುದು ಬಹಳ ಕಷ್ಟದ ಕೆಲಸ. ಆದರೆ ಕಾವ್ಯ ಪರಂಪರೆಯಲ್ಲಿ ವಿಮರ್ಶಕರ ಮನ್ನಣೆಯ ಜತೆಗೆ, ಜನಪ್ರಿಯತೆಯನ್ನು ಉಳಿಸಿಕೊಂಡ ಅನನ್ಯ ಕವಿ ಅಂದರೆ ಅದು ಎಚ್ಚೆಎಸ್ವಿ, ಎಂದು ಶ್ಲಾಘಿಸಿದರು.

Advertisement

ಸೃಜನಶೀಲತೆಯನ್ನು ಹತ್ತಿಕ್ಕುವ ವಾತಾವರಣದಲ್ಲಿ ನಾವು ಬದುಕುತ್ತಿರುವ ಈ ಸಂದರ್ಭದಲ್ಲಿ ಸೃಜನಶೀಲತೆಯ ಕವಿಯನ್ನು ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದರು.

“ನನ್ನ ಶಿಷ್ಯವೃಂದ, ಅಭಿಮಾನಿ ಬಳಗ, ಹಿತೈಷಿಗಳು ನನ್ನನ್ನು ಸನ್ಮಾನಿಸುವ ಮೂಲಕ ನನ್ನ ಸಾಹಿತ್ಯ ಕ್ಷೇತ್ರದ ಜವಾಬ್ದಾರಿಯನ್ನು ಹೆಚ್ಚಿಸಿದ್ದೀರಿ.ನಿಮ್ಮ ಸನ್ಮಾನಕ್ಕೆ ನಾನು ಚಿರಋಣಿಯಾಗಿದ್ದೇನೆ’ ಎಂದು ಕವಿ ವೆಂಕಟೇಶ ಮೂರ್ತಿ ಹೇಳಿದರು.

ಇದಕ್ಕೂ ಮೊದಲು, ಡಾ ಎಚ್‌.ಎಸ್‌.ವೆಂಕಟೇಶಮೂರ್ತಿಯವರ ರಚನೆ ಕಾವ್ಯಗಳ ಗೀತಗಾಯನ ನಡೆಯಿತು. ಸಮಾರಂಭದಲ್ಲಿ ರಂಗಕರ್ಮಿ ಶ್ರೀನಿವಾಸ್‌ ಜಿ. ಕಪ್ಪಣ್ಣ, ಹಿರಿಯ ಕವಿ ಬಿ.ಆರ್‌.ಲಕ್ಷ್ಮಣ್‌, ಗಾಯಕ ವೈ.ಕೆ. ಮುದ್ದುಕೃಷ್ಣ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next