Advertisement

ಹಾನಗಲ್ ಶಾಸಕ ಸಿ.ಎಂ.ಉದಾಸಿ ನಿಧನ: ಗಣ್ಯರ ಸಂತಾಪ

04:40 PM Jun 08, 2021 | Team Udayavani |

ಬೆಂಗಳೂರು: ಮಾಜಿ ಸಚಿವ, ಹಾನಗಲ್ ಕ್ಷೇತ್ರದ ಶಾಸಕ, ಬಿಜೆಪಿಯ ಹಿರಿಯ ನಾಯಕ ಸಿ.ಎಂ.ಉದಾಸಿ ಅವರು ಇಂದು ನಿಧನರಾದರು. ಅನಾರೋಗ್ಯದಿಂದ ಕೆಲವು ದಿನಗಳ ಹಿಂದೆ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ 77 ವರ್ಷ ಪ್ರಾಯದ ಸಿಎಂ ಉದಾಸಿ ಅವರು ಇಂದು ಅಸುನೀಗಿದ್ದಾರೆ.

Advertisement

ಶಾಸಕ ಸಿ.ಎಂ.ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಿ.ಎಂ.ಉದಾಸಿಯವರು ಸಜ್ಜನ ಹಾಗೂ ಕ್ರಿಯಾಶೀಲ ರಾಜಕಾರಣಿ. ಲೋಕೋಪಯೋಗಿ ಸಚಿವರಾಗಿಯೂ ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಅಭಿವೃದ್ಧಿ ಪರ ಚಿಂತಕರಾಗಿದ್ದ ಅವರು ಹಾನಗಲ್ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿ, ಆ ಭಾಗದಲ್ಲಿ ಮಾತ್ರವಲ್ಲದೆ ರಾಜ್ಯದ ಅತ್ಯಂತ ಜನಪ್ರಿಯ ನಾಯಕರಾಗಿದ್ದರು. ಅವರ ನಿಧನದಿಂದ ಅಪರೂಪದ ನೇತಾರರೊಬ್ಬರನ್ನು ನಾಡು ಕಳೆದುಕೊಂಡಂತಾಗಿದೆ ಎಂದು ಸಿಎಂ ಬಿಎಸ್ ವೈ ಹೇಳಿದ್ದಾರೆ.

ಮಾಜಿ ಸಚಿವರೂ ಹಾನಗಲ್ ಶಾಸಕರು ರಾಜಕೀಯ ಮುತ್ಸದ್ದಿಯಾಗಿದ್ದ ಸಿ ಎಂ ಉದಾಸಿಯವರು ಇಂದು ನಮ್ಮನ್ನೆಲ್ಲ ಅಗಲಿದ ಸುದ್ದಿ ತಿಳಿದು ತೀವ್ರ ದುಃಖವಾಯ್ತು. ಅವರ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ.  ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.

ಇದನ್ನೂ ಓದಿ:ಹಾನಗಲ್ ಬಿಜೆಪಿ ಶಾಸಕ ಸಿ.ಎಂ.ಉದಾಸಿ ನಿಧನ

ಸರಳ ಸಜ್ಜನಿಕೆಯ ಪ್ರತಿರೂಪದಂತಿದ್ದ ಉದಾಸಿ ಅವರ ಹಠಾತ್ ನಿಧನ ರಾಜ್ಯ ರಾಜಕಾರಣಕ್ಕೆ ತುಂಬಾಲಾರದ ನಷ್ಟ. ಭಗವಂತನು ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ‌ನೀಡಿ, ಮೃತರ ಆತ್ಮಕ್ಕೆ ‌ಸದ್ಗತಿ‌ ನೀಡಲಿ ಎಂದು ಸಚಿವ ಮುರುಗೇಶ್ ನಿರಾಣಿ ಅವರು ತಮ್ಮ ‌ಶೋಕ ಸಂದೇಶದಲ್ಲಿ ಪ್ರಾರ್ಥಿಸಿದ್ದಾರೆ.

Advertisement

ಸಿ.ಎಂ.ಉದಾಸಿಯವರು ಸಜ್ಜನ ಹಾಗೂ ಕ್ರಿಯಾಶೀಲ ರಾಜಕಾರಣಿಯಾಗಿದ್ದರು. ಅವರ ನಿಧನದಿಂದ ಅಪರೂಪದ ನೇತಾರರೊಬ್ಬರನ್ನು ನಾಡು ಕಳೆದುಕೊಂಡಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಸಿಎಂ ಉದಾಸಿ ಅವರು ರಾಜ್ಯ ರಾಜಕಾರಣದ ಹಿರಿಯ ನಾಯಕರು.  ಅವರಿಗೆ ಆಡಳಿತದಲ್ಲಿ ಅಪಾರ ಅನುಭವ ಇತ್ತು. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಲೋಕೋಪಯೋಗಿ ಖಾತೆಗಳನ್ನು ಉದಾಸಿ ಅವರು ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಉದಾಸಿ ಅವರು ಏಳು ಭಾಷೆಗಳನ್ನು ಬಲ್ಲ ನಾಯಕ. ಅಂಥಹ ಮುತ್ಸದ್ದಿ ನಾಯಕನನ್ನು ಕಳೆದುಕೊಂಡು ರಾಜ್ಯ ಈಗ ಬಡವಾಗಿದೆ. ಇದರಿಂದ ಕರ್ನಾಟಕ ಮತ್ತು ರಾಜ್ಯ ರಾಜಕಾರಣಕ್ಕೆ ತುಂಬಲಾರದ ಹಾನಿಯಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಂಬನಿ ಮಿಡಿದಿದ್ದಾರೆ.

ಸಿಎಂ ಉದಾಸಿ ಅವರು ಉತ್ತರ ಕರ್ನಾಟಕದ ಅತ್ಯಂತ ಪ್ರಬಲ ಜನ ನಾಯಕರಾಗಿದ್ದರು. ಹಾವೇರಿ ಜಿಲ್ಲೆ, ಹಾನಗಲ್ಲಿನ ಅಣ್ಣಾ ಎಂದೇ ಪ್ರಖ್ಯಾತರಾಗಿದ್ದ ಸಿ.ಎಂ ಉದಾಸಿ, ನಾವು ಕಂಡ ಅತ್ಯಂತ ಸರಳ, ಸಜ್ಜನ ರಾಜಕಾರಣಿಯಾಗಿದ್ದರು. ಲೋಕೋಪಯೋಗಿ ಸಚಿವ ರಾಗಿ ಅತ್ಯಂತ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದ ಅವರು, ಇಳಿವಯಸ್ಸಿನಲ್ಲಿಯೂ ಶಾಸಕರಾಗಿ ತಮ್ಮ ಕ್ಷೇತ್ರದ ಜನಹಿತಕ್ಕಾಗಿ ದುಡಿಯುತ್ತಿದ್ದರು ಎಂದು ಸ ಚಿವ ಅರವಿಂದ ಲಿಂಬಾವಳಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next