ಮಣಿಪಾಲ: “ಉದಯವಾಣಿ’ ಪತ್ರಿಕೆಯ ಸಂಸ್ಥಾಪಕ ಟಿ. ಮೋಹನದಾಸ್ ಪೈ ಅವರಿಗೆ ಸೋಮವಾರ ಮಣಿಪಾಲದ ಉದಯವಾಣಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
“ಅಗಲುವಾಗ ಇತರರು ಅಳುವಂತೆ ಬದುಕಬೇಕೆಂಬ ನೀತಿಯಂತೆ ನನ್ನ ದೊಡ್ಡಪ್ಪ ಮೋಹನದಾಸ್ ಪೈ ಅವರು ಬದುಕಿದ್ದರು. ಒಬ್ಬ ಮನುಷ್ಯ ಹೇಗೆ ಬದುಕಿದ್ದರೆಂಬುದು ಮುಖ್ಯ. ಪ್ರಾಮಾಣಿಕವಾದ ಬಾಂಧವ್ಯ ಹೊಂದಿರುವುದು, ಮೌಲಿಕತೆಗಾಗಿ ಬದುಕಿರುವುದು ಅವರ ವೈಶಿಷ್ಟ್ಯವಾಗಿತ್ತು. ಅವರಿಂದ ನಾವು ಕಲಿಯಬೇಕಾದ ಅಂಶ ಮತ್ತು ಮೌಲಿಕತೆಯನ್ನು ಬಿಟ್ಟು ಹೋಗಿದ್ದಾರೆ’ ಎಂದು ಮಣಿಪಾಲ್ ಟೆಕ್ನಾಲಜೀಸ್ ಲಿ. ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಗೌತಮ್ ಪೈ ನುಡಿ ನಮನ ಸಲ್ಲಿಸಿದರು.
ಅಪರೂಪದ ವ್ಯಕ್ತಿಗಳು ಮಾತ್ರ ಭವಿಷ್ಯದ ದಿನಗಳನ್ನು ಮುಂದಾಗಿಯೇ ಗ್ರಹಿಸಿ ದೂರದೃಷ್ಟಿಯವರೆನಿಸಿಕೊಳ್ಳುತ್ತಾರೆ. ಸ್ಥಳೀಯ ಸಾಮಾಜಿಕ ಮತ್ತು ಆರ್ಥಿಕ ಜೀವನದ ಅಭಿವೃದ್ಧಿಯನ್ನು ಅವರು ಸದಾ ಬಯಸುತ್ತಿದ್ದರು. ಇದಕ್ಕೊಂದು ಉದಾಹರಣೆ ಅಂದರೆ 1980ರಲ್ಲಿ ಅವರು “ಉದಯವಾಣಿ’ ಮೂಲಕ ನಡೆಸಿದ “ಕುಗ್ರಾಮ ಗುರುತಿಸಿ’ ಆಂದೋಲನ ಎಂದು ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿ. ಆಡಳಿತ ನಿರ್ದೇಶಕ ಮತ್ತು ಸಿಇಒ ವಿನೋದಕುಮಾರ್ ನುಡಿದರು.
ಸುದ್ದಿ ಮಾಧ್ಯಮ ಉದ್ಯಮದಲ್ಲಿ ಮೋಹನದಾಸ್ ಪೈ ಅವರಿಗೆ ಅಗಾಧವಾದ ವಿಶ್ವಾಸ, ನಂಬಿಕೆ ಇತ್ತು. ಆದ್ದರಿಂದಲೇ ಅವರು “ಉದಯವಾಣಿ’ಯನ್ನು ಸ್ಥಾಪಿಸಿದರು. ಸವಾಲು, ಸಂಕಷ್ಟ ಮತ್ತು ಆದ್ಯತೆಗಳನ್ನು ಈ ಮೂಲಕ ಗುರುತು ಹಿಡಿದ ಪರಿಣಾಮವೇ ಸವಾಲುಗಳನ್ನು ಎದುರಿಸಿ “ಉದಯವಾಣಿ’ ಇಂದು ಎತ್ತರಕ್ಕೆ ಬೆಳೆದುನಿಂತಿದೆ. ಅಂತಹ ದೂರದೃಷ್ಟಿಯ ನೇತಾರರು ನಮ್ಮನ್ನಗಲಿರುವುದು ಬಲು ದೊಡ್ಡ ನಷ್ಟ ಎಂದು ವಿನೋದಕುಮಾರ್ ಸಂತಾಪ ಸೂಚಿಸಿದರು.
ಮಣಿಪಾಲ್ ಮೀಡಿಯಾ ನೆಟ್‌ವರ್ಕ್‌ನ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ರಾಮಚಂದ್ರ ಮಿಜಾರ್ ಕಾರ್ಯಕ್ರಮ ನಿರೂಪಿಸಿದರು. ಉದಯವಾಣಿ ಸಮೂಹದ ಸಿಬಂದಿ ಮೋಹನದಾಸ್ ಪೈಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.