Advertisement

ಪೈ ಅವರ ಅಗಲಿಕೆ ಪತ್ರಿಕಾ,ವೈದ್ಯಕೀಯ, ಶೈಕ್ಷಣಿಕ ರಂಗಕ್ಕೆ ತುಂಬಲಾರದ ನಷ್ಟ: ಕಾಮಗೆರೆ ಪ್ರಕಾಶ್

11:54 AM Aug 01, 2022 | Team Udayavani |

ಹನೂರು:  ಪೈ ಅವರ ಅಗಲಿಕೆ ಪತ್ರಿಕಾರಂಗಕ್ಕೆ ಮಾತ್ರವಲ್ಲದೆ ಶೈಕ್ಷಣಿಕ ರಂಗ ಮತ್ತು ವೈದ್ಯಕೀಯ ರಂಗಕ್ಕೂ ತುಂಬಲಾರದ ನಷ್ಟವಾಗಿದೆ ಎಂದು ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಕಾಮಗೆರೆ ಪ್ರಕಾಶ್ ಅಭಿಪ್ರಾಯಪಟ್ಟರು.

Advertisement

ಹನೂರು ಪಟ್ಟಣದ ಲೋಕೋಪಯೋಗಿ ಇಲಾಖಾ ವಸತಿಗೃಹದ ಆವರಣದಲ್ಲಿ ಉದಯವಾಣಿ ಸಂಸ್ಥಾಪಕ ಟಿ.ಮೋಹನದಾಸ್ ಪೈ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಮೋಹನದಾಸ್ ಪೈ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಪೂಜೆ ನೆರವೇರಿಸಿ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿದೇಶಕ ಪ್ರಕಾಶ್ ಮಾತನಾಡಿ, ಮೋಹನದಾಸ್ ಪೈ ಅವರು 1969-70ರ ಅವಧಿಯಲ್ಲಿಯೇ ಉದಯವಾಣಿ ಪತ್ರಿಕೆಯನ್ನು ಆರಂಭಿಸಿ ಯಶಸ್ವಿಯಾಗಿ ಮುನ್ನಡೆಸುತ್ತ ಹಲವಾರು ಪತ್ರಕರ್ತರ ಉದಯಕ್ಕೆ ಕಾರಣರಾದರು. ಇದರ ಜೊತೆಗೆ ತರಂಗ ಸೇರಿದಂತೆ ಇನ್ನಿತರ ಪಾಕ್ಷಿಕ ಹಾಗೂ ಮಾಸಿಕ ಪುರವಣಿಗಳನ್ನು ಹೊರತಂದು ಪ್ರಖ್ಯಾತಿ ಗಳಿಸಿದ್ದರು. ಅವರ ಅಗಲಿಕೆ ಉದಯವಾಣಿ ಸಮೂಹ ಸಂಸ್ಥೆಗೆ, ಪತ್ರಿಕಾರಂಗ, ವೈದ್ಯಕೀಯ ರಂಗ, ಶೈಕ್ಷಣಿಕ ರಂಗಕ್ಕೂ ತುಂಬಲಾರದ ನಷ್ಟ ಎಂದು ಬಣ್ಣಿಸಿದರು.

ಪತ್ರಕರ್ತ ಪೊನ್ನಾಚಿ ಬಂಗಾರಪ್ಪ ಮಾತನಾಡಿ, ಕರಾವಳಿ ಭಾಗದಲ್ಲಿ ಪತ್ರಿಕೆಯನ್ನು ಆರಂಭಿಸಿ ರಾಜ್ಯದ ಮೂಲೆ ಮೂಲೆಗೂ ಪತ್ರಿಕೆಗಳನ್ನು ತಲುಪಿಸುತ್ತ ಜನಮನದ ಜೀವನಾಡಿಯಾಗಿದ್ದರು. ಅವರು ರಾಜ್ಯದ ಪ್ರತಿ ತಾಲೂಕಿನಲ್ಲಿಯೂ ಉತ್ತಮ ಪತ್ರಕರ್ತರನ್ನು ಹುಟ್ಟು ಹಾಕಿದ್ದರು. ಶುಕ್ರವಾರ, ಭಾನುವಾರ ಬಂದರೆ ಬೆಳ್ಳಂ ಬೆಳಗ್ಗೆಯೇ ಜನರು ಉದಯವಾಣಿ ಪತ್ರಿಕೆಗೆ ಟೋಕನ್ ಪಡೆದು ಸರದಿ ಸಾಲಿನಲ್ಲಿ ಕಾಯುವ ಮಟ್ಟಕ್ಕೆ ಪತ್ರಿಕೆಯನ್ನು ಬೆಳೆಸಿದರು. ಅವರ ಕುಟುಂಬಕ್ಕೆ ಅವರ ಅಗಲಿಕೆ ನೋವನ್ನು ತಡೆದುಕೊಳ್ಳುವಂತಹ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ವೆಂಕಟೇಗೌಡ, ರವಿ, ಪುಟ್ಟಸ್ವಾಮಿ, ವಿನೋದ್, ನಿರಂಜನ್, ಅಜಿತ್, ಶಾರುಖ್‍ಖಾನ್, ಹ.ಶು.ಲಿಂಗರಾಜು ಹಾಜರಿದ್ದರು. ಗಣ್ಯರ ನಿಧನಕ್ಕೆ ಅಭಿಲಾಷ್.ಟಿ, ಮಣಗಳ್ಳಿ ಮಾದೇವ, ಶಾಗ್ಯ ನಂದೀಶ್, ಬಂಡಳ್ಳಿ ಉಸ್ಮಾನ್‍ಖಾನ್, ಮಹದೇಶ್ವರ ಬೆಟ್ಟ ಪ್ರದೀಪ್ ಕುಮಾರ್, ಕಾಂಚಳ್ಳಿ ವಿಜಯ್‍ಕುಮಾರ್, ಗುಂಡಾಪುರ ಸುರೇಶ್ ಹಾಗೂ ಇತರ ಪತ್ರಕರ್ತರು ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next