Advertisement
ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆ, ಮೈಸೂರು ಅಸೋಸಿ ಯೇಶನ್ ಮತ್ತು ಕರ್ನಾಟಕ ಸಂಘ ಮುಂಬಯಿ ವತಿಯಿಂದ ಈ ಸಭೆಯನ್ನು ಆಯೋಜಿಸಲಾಗಿತ್ತು. ಆರಂಭದಲ್ಲಿ ವಿದುಷಿ ಶ್ಯಾಮಲಾ ರಾಧೇಶ್ ಸನದಿಯವರ ಎರಡು ಕವನಗಳನ್ನು ಹಾಡಿದರು. ಮುಂಬಯಿಯ ಹಿರಿಯ ಸಾಹಿತಿ ಡಾ| ಸುನೀತಾ ಶೆಟ್ಟಿಯವರು ನುಡಿ ನಮನ ಸಲ್ಲಿಸಿ, ನಾವು ಮನುಷ್ಯರನ್ನು ಗುರುತಿಸುವುದು ಹೃದಯದ ಬೆಸುಗೆಯಿಂದ, ಮಾತುಗಳಿಂದಲ್ಲ, ಸೇವೆಯಿಂದ. ಸನದಿಯವರು ಕನ್ನಡ ನಾಡು ನುಡಿಯ ಸೇವೆ ಮಾಡಿದ ಮಹತ್ವದ ಸಾಹಿತಿ. ಕನ್ನಡದ ಜನ ನನಗೆ ಬೇಕಾದವರು ಎಂದು ನಂಬಿದವರು. ಶ್ರೀಪತಿ ಬಲ್ಲಾಳರು ಮುಂಬಯಿಯ ನಾಟಕ ಕ್ಷೇತ್ರವನ್ನು ಬೆಳೆಸಿದರು. ಕರ್ನಾಟಕ ಸಂಘವನ್ನು ಚಟುವಟಿಕೆಯ ಕೇಂದ್ರವಾಗಿ ಬೆಳೆಸಿದರು. ತುಳಸಿಯವರು ಕನ್ನಡದ ಸೃಜನಶೀಲ ಕತೆಗಾರ್ತಿ ಎಂದರು.
Related Articles
Advertisement
ಶಿಕ್ಷಣ ತಜ್ಞ ಡಾ| ಎಸ್. ಕೆ. ಭವಾನಿ ಮಾತನಾಡಿ, ಬಿ. ಎ. ಸನದಿಯವರು ಮಾನವೀಯತೆಯ ಬಗ್ಗೆ ಬರೆದ ಮಹತ್ವದ ಕವಿ ಎಂದು ಅವರ ಸಾಧನೆಗಳ ಬಗ್ಗೆ ಮೆಲುಕು ಹಾಕಿದರು. ಕವಿ ವಿ. ಎಸ್. ಶ್ಯಾನ್‌ಭಾಗ ಅವರು ಮಾತನಾಡಿ, ಸನದಿಯವರು ಮುಂಬಯಿಯ ಮಾಸ್ತಿ ಇದ್ದ ಹಾಗೆ ಅವರ ನಿಜವಾದವ್ಯಕ್ತಿತ್ವ ಇರುವುದು ಹುರಿದುಂಬಿಸುವಿಕೆಯಲ್ಲಿ ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಎಂ. ಎಂ. ಕೋರಿಯವರು ಮಾತನಾಡಿ, ಬಸವೇಶ್ವರ ಫಿಲಾಸಿಪಿಕಲ್ ಸೊಸೈಟಿ ಮತ್ತು ಕರ್ನಾಟಕ ಸಂಘದಲ್ಲಿರುವಾಗ ಸನದಿಯವರ ಒಡನಾಟವನ್ನು ನೆನಪಿಸಿಕೊಂಡರು. ರಂಗ ಕಲಾವಿದ ಮೋಹನ್ ಮಾರ್ನಾಡ್ ಅವರು ತನಗೆ ಸನದಿಯವರು ನೀಡಿದ ಪ್ರೋತ್ಸಾಹ ಅನನ್ಯವಾದದ್ದು. ಅವರು ನೀಡಿದ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಲ್ಲದೆ ಬಲ್ಲಾಳರು ನನ್ನಂತಹ ಕಲಾವಿದರನ್ನು ಪ್ರೋತ್ಸಾಹಿಸಿದ್ದರಿಂದ ನಾನು ಈ ಮಟ್ಟಿಗೆ ಬೆಳೆಯಲು ಸಾಧ್ಯವಾಯಿತು ಎಂದು ಸನದಿಯವರ ಕವನ ವಾಚಿಸಿದರು.
ಅರವಿಂದ ಬಲ್ಲಾಳರು ಮಾತನಾಡಿ, ತನ್ನ ಚಿಕ್ಕಪ್ಪನ ಜತೆಗಿನ ಕೌಟುಂಬಿಕ ಹಾಗೂ ರಂಗಭೂಮಿಯ ಒಡನಾಟವನ್ನು ವಿವರಿಸಿದರು. ಕತೆಗಾರ ರಾಜೀವ ನಾಯಕ ಅವರು ಸನದಿಯವರ ತುಳಸಿಕಟ್ಟೆ ಕವನದ ಮೂಲಕ ಸನದಿಯವರ ಸಾಹಿತ್ಯದ ಮಾನವೀಯ ಮುಖವನ್ನು ಪರಿಚಯಿಸಿದರು. ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿ ಡಾ| ಭರತ್ ಕುಮಾರ್ ಪೊಲಿಪು ಕಾರ್ಯಕ್ರಮ ನಿರೂಪಿಸಿದರು. ಮೌನಾಚರಣೆಯ ಮೂಲಕ ಅಗಲಿದ ಚೇತನಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.