ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಮೈತ್ರಿಕೂಟಕ್ಕೆ ತೀವ್ರ ಹಿನ್ನಡೆಯುಂಟಾಗಿದ್ದರಿಂದ ಮುಖ್ಯಮಂತ್ರಿ ಸ್ಥಾನ ತ್ಯಜಿಸಿ, ಕಾಂಗ್ರೆಸ್‌ಗೆ ಬಿಟ್ಟು ಕೊಡಲು ಜೆಡಿಎಸ್ ಮುಂದಾಗಿದೆ. ಆದರೆ, ಆರ್.ವಿ.ದೇಶಪಾಂಡೆ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಷರತ್ತು ವಿಧಿಸಿದೆ ಎಂಬ ಗುಸು ಗುಸು ಕೇಳಿ ಬರುತ್ತಿದೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಎರಡು ಸ್ಥಾನಗಳು ಮಾತ್ರ ಬಂದಿದ್ದರಿಂದ ಒತ್ತಡ ಬಂದರೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಲು ಕುಮಾರಸ್ವಾಮಿ ಬಯಸಿದ್ದರು. ಆದರೆ, ದೇಶಪಾಂಡೆ ಅವರನ್ನು ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಮಾಡಬೇಕು ಎಂಬ ಷರತ್ತನ್ನು ದೇವೇಗೌಡರು ವಿಧಿಸಿ, ಹೈಕಮಾಂಡ್ ಮುಂದೆ ಪ್ರಸ್ತಾಪ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿಯೂ ಇಂತದ್ದೊಂದು ಪ್ರಸ್ತಾಪವನ್ನು ಕುಮಾರಸ್ವಾಮಿ ಚರ್ಚಿಸಿದರು. ಆದರೆ, ಸಿದ್ದರಾಮಯ್ಯನವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ನೀವೇ ಮುಂದುವರಿಯಿರಿ, ಅಭ್ಯಂತರವಿಲ್ಲ. ಆದರೆ, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಹೇಳಿದರು ಎನ್ನಲಾಗಿದೆ.
ಸಂಪುಟ ಪುನಾರಚನೆ: ಈ ಮಧ್ಯೆ, ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಚಿವ ಸಂಪುಟ ಪುನಾರಚನೆ ಮಾಡುವ ಮಾತುಗಳು ಕೇಳಿ ಬರುತ್ತಿವೆ. ಜಯಮಾಲಾ, ವೆಂಕಟರಮಣಪ್ಪ, ಆರ್.ಬಿ.ತಿಮ್ಮಾಪುರ ಅವರನ್ನು ಕೈ ಬಿಟ್ಟು ಅತೃಪ್ತರಿಗೆ ಮಣೆ ಹಾಕಲು ತೀರ್ಮಾನಿಸಲಾಗಿದೆ. ಸಿ.ಎಸ್.ಶಿವಳ್ಳಿ ಅವರ ಸ್ಥಾನವನ್ನು ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಅವರಿಗೆ ನೀಡಲು ಚಿಂತನೆ ನಡೆಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇನ್ನು, ಜೆಡಿಎಸ್ ಕೋಟಾದಡಿಯೇ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಲು ತೀರ್ಮಾನಿಸಲಾಗಿದೆ. ಮಂಡ್ಯ ಸೋಲಿನ ಹಿನ್ನೆಲೆಯಲ್ಲಿ ಪುಟ್ಟರಾಜು, ಸಾ.ರಾ.ಮಹೇಶ್, ತುಮಕೂರು ಸೋಲಿನ ಹಿನ್ನೆಲೆಯಲ್ಲಿ ಗುಬ್ಬಿ ಶ್ರೀನಿವಾಸ್ ಅವರನ್ನು ಸಚಿವ ಸ್ಥಾನದಿಂದ ತೆಗೆಯಬೇಕು ಎಂಬ ಒತ್ತಡವೂ ಜೆಡಿಎಸ್‌ನಲ್ಲಿದೆ ಎಂದು ಹೇಳಲಾಗಿದೆ.