ಬೆಂಗಳೂರು: ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಡಿಐಜಿ ಆಗಿದ್ದ ರೂಪಾ ಬಹಿರಂಗಪಡಿಸಿ ವರದಿ ನೀಡಿದ್ದ ಬೆನ್ನಲ್ಲೇ ಕೆಲ ಕೈದಿಗಳನ್ನು ಜೈಲಿನಿಂದ ಸ್ಥಳಾಂತರಗೊಳಿಸಲಾಗಿತ್ತು. ಈ ವೇಳೆ ಮಾರಣಾಂತಿಕವಾಗಿ ಹಲ್ಲೆಗೊಳಾಗಿದ್ದ ಕೈದಿಯೊಬ್ಬನ ಸ್ಥಿತಿ ಚಿಂತಾಜನಕವಾಗಿರುವ ಬಗ್ಗೆ ವರದಿಯಾಗಿದೆ.
ಭಾನುವಾರ ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಗೊಂಡಿದ್ದ ಅನಂತಮೂರ್ತಿ ಎಂಬ ಕೈದಿ ಯ ಸ್ಥಿತಿ ಗಂಭೀರವಾಗಿದ್ದು ಮಂಗಳವಾರ ರಾತ್ರೋ ರಾತ್ರಿ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಜೈಲಿಗೆ ವಾಪಾಸ್ ಕರೆದುಕೊಂಡು ಹೋಗಿರುವುದು ಕಂಡು ಬಂದಿದೆ.
ಅನಂತಮೂರ್ತಿಗೆ ಜೈಲಿನಿಂದ ಸ್ಥಳಾಂತರಿಸುವ ವೇಳೆ ಮರ್ಮಾಂಗಕ್ಕೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗಿದ್ದು ಇದೀಗ ರಕ್ತ ಹೆಪ್ಪುಗಟ್ಟಿ ಮೂತ್ರ ವಿಸರ್ಜನೆ ಸಾಧ್ಯವಾಗುತ್ತಿಲ್ಲ ಎಂದು ತಿಳಿದು ಬಂದಿದೆ. ಇದಕ್ಕೆ ಸಾಕ್ಷಿಯಾಗಿ ಜೈಲಿಗೆ ಸ್ಥಳಾಂತರಿಸುವ ವೇಳೆ ಮರ್ಮಾಂಗವಿರುವ ಭಾಗಕ್ಕೆ ಕೈಯಿಟ್ಟು ತೀವ್ರ ಯಾತನೆ ಪಡುತ್ತಿರುವ ದೃಶ್ಯಗಳು ಸೆರೆಯಾಗಿವೆ.
ಅವ್ಯವಹಾರಗಳ ಕುರಿತಾಗಿನ ತನಿಖಾಧಿಕಾರಿ ವಿನಯ್ ಕುಮಾರ್ ಅವರು ಜೈಲಿಗೆ ಬಂದಸಂದರ್ಭದಲ್ಲಿ ಕೈದಿಗಳು ವ್ಯವಹಾರದ ಬಗ್ಗೆ ಮಾಹಿತಿ ನೀಡಬಾರದು ಎನ್ನುವ ದ್ದೇಶದಿಂದ ಸಂದೇಹಾಸ್ಪದ ಕೈದಿಗಳನ್ನ ಮೈಸೂರು,ಬೆಳಗಾವಿ ಮತ್ತು ಬಳ್ಳಾರಿ ಬಂದೀಖಾನೆಗಳಿಗೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ.
ಕೈದಿಯ ಸ್ಥಿತಿಯ ಕುರಿತಾಗಿ ಪೊಲೀಸರು ಯಾವುದೇ ಮಾಹಿತಿ ಹೊರ ಬಿಟ್ಟಿಲ್ಲ. ಕುಟುಂಬ ಸದಸ್ಯರಿಗೂ ಈ ಬಗ್ಗೆ ತಿಳಿಸಿಲ್ಲ ಎಂದು ವರದಿಯಾಗಿದೆ.