Advertisement

ಜನರ ಒಕ್ಕಲೆಬ್ಬಿಸುವುದಕ್ಕೆ ಖಂಡನೆ

01:04 PM Jan 10, 2017 | |

ಶಿವಮೊಗ್ಗ: ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ವಿಧಿವಿಧಾನಗಳನ್ನು ಪಾಲಿಸದೇ ಕಂದಾಯ ಭೂಮಿಯನ್ನು ಶರಾವತಿ ಅಭಯಾರಣ್ಯವೆಂದು ಘೋಷಿಸಿ, ಜನರನ್ನು ಒಕ್ಕಲೆಬ್ಬಿಸಲು ಹೊರಟಿರುವುದನ್ನು ಖಂಡಿಸಿ ಶರಾವತಿ ಕಣಿವೆ ಜನ ಹೋರಾಟ ಸಮಿತಿ ವತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. 

Advertisement

ಯಾವುದೇ ಒಂದು ಪ್ರದೇಶ ಅಭಯಾರಣ್ಯವೆಂದು ಘೋಷಣೆಯಾಗಬೇಕಾದರೆ ಅದಕ್ಕೆ ನಿಗದಿತವಾದ ಕಾನೂನು ಪ್ರಕ್ರಿಯೆಗಳಿವೆ. ಆ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಸರ್ಕಾರ ಅದನ್ನು ಅಧಿಕೃತವಾಗಿ ಆದೇಶಿಸಲಿದೆ. ಆದರೆ ಈ ಯಾವುದೇ ಪ್ರಕ್ರಿಯೆ ನಡೆಯದಿದ್ದರೂ ಕೂಡ ಅಧಿಕಾರಿಗಳು ಶರಾವತಿ ಅಭಯಾರಣ್ಯವೆಂದು ಹೇಳುತ್ತಾ ಅಲ್ಲಿನ ನಿವಾಸಿಗಳನ್ನು ಒಕ್ಕಲೆಬ್ಬಿಸಲು ಯತ್ನ ನಡೆಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. 

ಅಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದಂತೆ ತಡೆ ಒಡ್ಡಲಾಗುತ್ತಿದೆ. ಜಮೀನು ಮಾರಾಟ ಮಾಡಲು ಬಿಡುತ್ತಿಲ್ಲ. ಮಾರಾಟ ಮಾಡುವುದಾದರೆ ಕಡಿಮೆ ಬೆಲೆಗೆ ಅರಣ್ಯ ಇಲಾಖೆಗೆ ನೀಡುವಂತೆ ಒತ್ತಾಯಿಸಲಾಗುತ್ತಿದೆ. ಇದರಿಂದಾಗಿ ನಿವಾಸಿಗಳು ಜಮೀನು ಅಭಿವೃದ್ಧಿ ಮಾಡಲು ಅಥವಾ ಮಾರಾಟ ಮಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಅಭಯಾರಣ್ಯವೆಂದು ಹೇಳುತ್ತಿರುವ 432 ಚಕಿಮೀ ಪ್ರದೇಶದಲ್ಲಿ ಸುಮಾರು 12ಸಾವಿರ ಜನಸಂಖ್ಯೆ ಇದೆ. ಬಹುತೇಕ ಎಲ್ಲಾ ಕುಟುಂಬಗಳು ಶರಾವತಿ ಮುಳುಗಡೆಯಿಂದ ಪುನರ್ವಸತಿ ಪಡೆದವಾಗಿವೆ. ಆದರೂ ಕೂಡ ಈ ಕುಟುಂಬಗಳನ್ನು ಒಕ್ಕಲೆಬ್ಬಿಸುವ ರೀತಿಯಲ್ಲಿ ಕ್ರಿಮಿನಲ್‌ ಕೇಸು ಹಾಕಲಾಗುತ್ತಿದೆ. ಇದರಿಂದಾಗಿ ಇಡೀ ಪ್ರದೇಶದ ಜನರು ಆತಂಕ ಎದುರಿಸುವಂತಾಗಿದೆ. 

ಇವರನ್ನು ಒಕ್ಕಲೆಬ್ಬಿಸಿದರೆ 3ನೇ ಬಾರಿಗೆ ಸಂತ್ರಸ್ತರಾಗಲಿದ್ದಾರೆ ಎಂದರು. 1972 ರ ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ 431 ಚ. ಕಿಮೀ ಪ್ರದೇಶವನ್ನು ಶರಾವತಿ ಅಭಯಾರಣ್ಯವೆಂದು ಘೋಷಿಸಲು ಸರ್ಕಾರ ತೀರ್ಮಾನಿಸಿತ್ತು. ನಂತರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಸೆಕ್ಷನ್‌ 19 ರಿಂದ 26 ಎ ವರೆಗೆ ಇರುವಂತೆ ಜಿಲ್ಲಾಧಿಕಾರಿಗಳು ಈ ಪ್ರದೇಶದಲ್ಲಿ ಜನರೊಂದಿಗೆ ಮಾತುಕತೆ ನಡೆಸಬೇಕು. 

Advertisement

ನಂತರ ಗಡಿಯನ್ನು ಗುರುತಿಸಬೇಕು ಎಂದು ಒತ್ತಾಯಿಸಿದರು. 1972ರ ವನ್ಯಜೀವಿ ರಕ್ಷಣಾ ಕಾಯ್ದೆ  ಪ್ರಕಾರ ಸೆಕ್ಷನ್‌ 19 ರಿಂದ 25 ರವರೆಗೆ ಕಾಯ್ದೆ ವಿಧಿವಿಧಾನಗಳನ್ನು ಈಗಲಾದರೂ ಪಾಲಿಸಿ ಹಕ್ಕುದಾರರ ಅಹವಾಲುಗಳನ್ನು ಕೂಲಂಕಷವಾಗಿ ಪರಿಶೀಲಿಸಿ 26ಎ ಪ್ರಕಾರ ಅಂತಿಮ ಆದೇಶವನ್ನು ಜನಾಭಿಪ್ರಾಯದಂತೆ ರದ್ದುಗೊಳಿಸಲು ಡಿಸಿ ಸೂಕ್ತ ಶಿಫಾರಸ್ಸನ್ನು ಸರ್ಕಾರಕ್ಕೆ ಸಲ್ಲಿಸಬೇಕೆಂದು ಆಗ್ರಹಿಸಿದರು. 

ಶಾಸಕರಾದ ಮಧುಬಂಗಾರಪ್ಪ, ಕೆ.ಬಿ. ಪ್ರಸನ್ನಕುಮಾರ್‌, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಶರಾವತಿ ಕಣಿವೆ ಜನಹೋರಾಟ ಸಮಿತಿ ಅಧ್ಯಕ್ಷೆ ಪ್ರಭಾವತಿ ಚಂದ್ರಕಾಂತ ಆರೋಡಿ, ಕಾಂಗ್ರೆಸ್‌ ಅಧ್ಯಕ್ಷ ತೀ.ನಾ. ಶ್ರೀನಿವಾಸ್‌, ಜೆಡಿಎಸ್‌ ಜಿಲ್ಲಾಧ್ಯಕ್ಷ ನಿರಂಜನ್‌, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್‌.ಎಂ. ಮಂಜುನಾಥಗೌಡ, ತಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಜಿ.ಪಂ. ಸದಸ್ಯರಾದ ಕಾಗೋಡು ಅಣ್ಣಪ್ಪ, ರಾಜಶೇಖರ್‌ ಸೇರಿದಂತೆ ಸಾವಿರಾರು ರೈತರು ಪಾಲ್ಗೊಂಡಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next