ಹೊಸದಿಲ್ಲಿ: ಐರೋಪ್ಯ ಸಂಸತ್‌ನಲ್ಲಿ ಮಣಿಪುರ ಹಿಂಸಾಚಾರ ಮತ್ತು ಧಾರ್ಮಿಕ ಅಲ್ಪಸಂಖ್ಯಾಕರ ಹಕ್ಕುಗಳ ರಕ್ಷಣೆ ಬಗ್ಗೆ ನಿರ್ಣಯ ಕೈಗೊಂಡಿರುವುದರ ಬಗ್ಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಶನಿವಾರ ಐರೋಪ್ಯ ಒಕ್ಕೂಟದ ಸಂಸತ್‌ನ ಉಪಾಧ್ಯಕ್ಷ ನಿಕೋಲಾ ಬೀರ್ ಅವರನ್ನು ಭೇಟಿಯಾದ ವೇಳೆ ಅವರು ಈ ಪ್ರತಿಭಟನೆ ದಾಖಲಿಸಿದ್ದಾರೆ. “ಪ್ರತಿ ರಾಷ್ಟ್ರ ಮತ್ತು ಸಂಸತ್ ಸಾರ್ವಭೌಮವಾಗಿದೆ. ಇತರೆ ರಾಷ್ಟ್ರಗಳ ಆಂತರಿಕ ವಿಷಯವನ್ನು ಬೇರೆಯವರು ಚರ್ಚಿಸಬಾರದು’ ಎಂದು ಹೇಳಿದ್ದಾರೆ.
ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ನಿಲ್ಲಿಸಲು ಹಾಗೂ ಧಾರ್ಮಿಕ ಅಲ್ಪಸಂಖ್ಯಾಕರನ್ನು ರಕ್ಷಿಸಲು ಭಾರತ ಕೂಡಲೇ ಕಾರ್ಯ ಪ್ರವೃತ್ತರಾಗಬೇಕು ಎಂದು ಕರೆ ನೀಡುವ ನಿರ್ಣಯವನ್ನು ಜುಲೈಯಲ್ಲಿ ಯೂರೋಪ್ ಸಂಸತ್ ಅಂಗೀಕರಿಸಿತ್ತು.
ಇದೇ ವೇಳೆ ಜಿ20 ರಾಷ್ಟ್ರಗಳ ಸ್ಪೀಕರ್‌ಗಳ ಸಭೆಯಲ್ಲಿ ಮಾತನಾಡಿದ ಸ್ಪೀಕರ್ ಬಿರ್ಲಾ “ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಬೆಳವಣಿಗೆ ಕಳವಳಕಾರಿ. ಪರಸ್ಪರ ಸಂಪರ್ಕ ಹೊಂದಿರುವ ಜಗತ್ತಿನಲ್ಲಿ ಯಾವುದೇ ವಿಷಯವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಜಿ20 ಶೃಂಗಸಭೆಯನ್ನು ಯಶಸ್ವಿಯಾಗಿ ನಡೆಸಿದಕ್ಕೆ ಭಾರತವನ್ನು ಯೂರೋಪ್ ಸಂಸತ್‌ನ ಉಪಾಧ್ಯಕ್ಷ ನಿಕೋಲಾ ಬೀರ್ ಅಭಿನಂದಿಸಿದರು.