Advertisement

ಕಾರ್ಮಿಕ ವಿರೋಧಿ ನೀತಿಗೆ ಖಂಡನೆ

06:07 PM Sep 06, 2020 | Suhan S |

ಸಿರುಗುಪ್ಪ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಮತ್ತು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ತಾಲೂಕು ಸಿಐಟಿಯು ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ತಾಲೂಕಿನ ಕೆಂಚನಗುಡ್ಡ ಗ್ರಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಗ್ರಾಪಂ ಪಿಡಿಒ ಆದೆಪ್ಪರ ಮೂಲಕ ರಾಷ್ಟ್ರಪತಿಗಳಿಗೆ ಶನಿವಾರ ಮನವಿ ಸಲ್ಲಿಸಿದರು.

Advertisement

ಸಿಐಟಿಯು ಕಾರ್ಯದರ್ಶಿ ಬಿ. ಸುರೇಶ್‌ ಮಾತನಾಡಿ, ಕೇಂದ್ರ ಸರ್ಕಾರವು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿರುವವಿಮಾನಯಾನ, ಬಿಎಸ್‌ಎನ್‌ಎಲ್‌, ರೈಲ್ವೆಯಂತಹ ಹಲವಾರು ಇಲಾಖೆಗಳನ್ನು ಖಾಸಗೀಕರಣಗೊಳಿಸಿ ಬಂಡವಾಳಶಾಹಿಗಳ ಕೈಗೆ ನೀಡುತ್ತಿರುವುದರಿಂದ ದೇಶದಲ್ಲಿರುವ ಕಾರ್ಮಿಕರಿಗೆ ಅನಾನುಕೂಲವಾಗಲಿದೆ. ಅನೇಕರು ಉದ್ಯೋಗವನ್ನು ಕಳೆದುಕೊಂಡು ನಿರುದ್ಯೋಗಿಗಳ ಸಮಸ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಬಿಎಸ್‌ಎನ್‌ಎಲ್‌, ವಿಮಾನಯಾನ, ರೈಲ್ವೆ ಇಲಾಖೆಗಳನ್ನು ಖಾಸಗೀಕರಣಗೊಳಿಸಬಾರದು.

ಆದಾಯ ತೆರಿಗೆ ವ್ಯಾಪ್ತಿಗೆ ಬರದ ಎಲ್ಲ ಬಡ ಕುಟುಂಬಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಆರು ತಿಂಗಳವರೆಗೆ ರೂ.7500 ನಗದು ವರ್ಗಾವಣೆ ಮಾಡಬೇಕು, ಪ್ರತಿಯೊಬ್ಬ ವ್ಯಕ್ತಿಗೆ 10 ಕೆಜಿಯಂತೆ ಉಚಿತ ಆಹಾರಧಾನ್ಯ ವಿತರಣೆ, ನರೇಗಾ ಯೋಜನೆಯನ್ನು ವಿಸ್ತರಿಸಿ ಕೂಲಿದರವನ್ನು ಹೆಚ್ಚಿಸಬೇಕು. ನಗರದಲ್ಲಿ ಉದ್ಯೋಗ ಖಾತ್ರಿ ಕಾಯ್ದೆಯನ್ನು ಜಾರಿಗೆ ತರಬೇಕು, ಅಂತಾರಾಜ್ಯ ವಲಸೆ ಕಾರ್ಮಿಕರ ಕಾಯ್ದೆ 1979ರನ್ನು ತೆಗೆದುಹಾಕುವ ಪ್ರಸ್ತಾವನೆಯನ್ನು ರದ್ದುಮಾಡಬೇಕು, ಬದಲಿಗೆ ಈ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಬೇಕು, ಸಾರ್ವಜನಿಕ ಆರೋಗ್ಯಕ್ಕೆ ಕೇಂದ್ರಿಯ ವೆಚ್ಚವನ್ನು ಕನಿಷ್ಟ ಜಿಡಿಪಿಯ ಶೇ.3ಕ್ಕೆ ಹೆಚ್ಚಿಸಬೇಕು, ಕೋವಿಡ್ ಸೋಂಕನ್ನು ಎದುರಿಸಲು ವಿಪತ್ತು ನಿರ್ವಹಣಾ ಕಾಯ್ದೆಯನ್ನು ಬಳಸುತ್ತಿರುವುದರಿಂದ ಸೋಂಕಿಗೆ ಒಳಗಾಗಿರುವ ಕುಟುಂಬಗಳಿಗೆ ರಾಷ್ಟ್ರಿಯ ವಿಪತ್ತು ಪರಿಹಾರ ನಿಧಿ ನಿಯಮಗಳ ಪ್ರಕಾರ ಹಣಕಾಸು ನೆರವು ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಪದಾಧಿಕಾರಿಗಳಾದ ಜಲಾಲಿ, ದ್ರಾಕ್ಷಾಯಿಣಿ, ಆಲಂಬಾಷ, ಬಿ. ರಾಮಪ್ಪ, ರಾಮನಾಯಕ, ಗಂಗಮ್ಮ, ಬಿ. ನರಸಮ್ಮ, ಹುಸೇನಪ್ಪ, ನಾಗಪ್ಪ, ಶೇಕಣ್ಣ, ಬಿ. ರಾಮಪ್ಪ, ಕೆ. ವೀರೇಶ, ಭೀಮಾನಾಯಕ, ವಿ.ಭುವನೇಶ್ವರಿ, ಹನುಮಂತಪ್ಪ, ಹನುಮಂತಮ್ಮ ಮತ್ತು ಕಾರ್ಯಕರ್ತರು ಇದ್ದರು

 

Advertisement
Advertisement

Udayavani is now on Telegram. Click here to join our channel and stay updated with the latest news.

Next