Advertisement

ಉದ್ಘಾಟನೆಯಾಗಿ 1 ತಿಂಗಳಲ್ಲಿ ಕಾಂಕ್ರೀಟ್‌ ರಸ್ತೆ ಅಗೆತ: ಹಣ ಪೋಲು

11:02 PM Mar 03, 2021 | Team Udayavani |

ಮಹಾನಗರ: ನಗರದಲ್ಲಿ ಜನರ ತೆರಿಗೆ ಹಣ ಖರ್ಚು ಮಾಡಿ ನಿರ್ಮಿಸಿದ ನೂತನ ಕಾಂಕ್ರೀಟ್‌ ರಸ್ತೆಯನ್ನು ಉದ್ಘಾಟನೆ ಗೊಂಡ ಕೆಲವೇ ದಿನಗಳಲ್ಲಿ ಅಗೆದು ಹಾಕುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದೆ.

Advertisement

ಅಸಮರ್ಪಕ ಕಾಮಗಾರಿ ಪರಿಣಾಮ ಇದೀಗ ಕಾಂಕ್ರೀಟ್‌ ರಸ್ತೆ ಅಗೆದು ಕಾಮಗಾರಿ ಆರಂಭಿಸಲಾಗಿದ್ದು, ಈ ರೀತಿ ಹಣ ಪೋಲು ಮಾಡುತ್ತಿರುವ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಮೇಲೆ ಕಠಿನ ಕ್ರಮ ಜರಗಿಸ ಬೇಕು ಎಂಬ ಅಭಿಪ್ರಾಯ ಸಾರ್ವ ಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಇದಕ್ಕೆ ಮತ್ತೂಂದು ನಿದರ್ಶನ ನಗರದ ರಥಬೀದಿಯಲ್ಲಿ ನಿರ್ಮಾಣಗೊಂಡಿರುವ ಈ ಕಾಂಕ್ರೀಟ್‌ ರಸ್ತೆ. ರಥಬೀದಿಯಿಂದ ಶರವು ಕ್ಷೇತ್ರ ಸಂಪರ್ಕ ರಸ್ತೆ ಡಾಮರು ಕಿತ್ತು ಹೋಗಿತ್ತು. ಇದೇ ಕಾರಣಕ್ಕೆ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ನೂತನವಾಗಿ ಕಾಂಕ್ರೀಟ್‌ ರಸ್ತೆ ಕಾಮಗಾರಿ ನಡೆಸಲು ತೀರ್ಮಾನಿಸಲಾಗಿತ್ತು.

ಒಂದು ತಿಂಗಳ ಹಿಂದೆ ನೂತನ ರಸ್ತೆ ಉದ್ಘಾಟನೆಗೊಂಡಿತ್ತು. ಅದೇ ರಸ್ತೆಯನ್ನು ಇದೀಗ ಮತ್ತೆ ಅಗೆಯಲಾಗುತ್ತಿದೆ.

ಮಲೀನ ನೀರು ರಸ್ತೆಗೆ
ಕಾಂಕ್ರೀಟ್‌ ಕಾಮಗಾರಿ ನಡೆಸುವ ವೇಳೆ ಅಧಿಕಾರಿಗಳ ಅಜಾಗರೂ ಕತೆಯಿಂದ ಕಾಂಕ್ರೀಟ್‌ ತುಂಡುಗಳನ್ನು ಇದೇ ರಸ್ತೆಯಲ್ಲಿರುವ ಮ್ಯಾನ್‌ಹೋಲ್‌ಗೆ ಬೀಳಿಸಲಾಗಿತ್ತು. ಕಾಮಗಾರಿಯ ವೇಳೆ ಈ ವಿಚಾರ ಗಮನಕ್ಕೆ ಬರಲಿಲ್ಲ. ಇದೀಗ ರಸ್ತೆ ಉದ್ಘಾಟನೆಗೊಂಡು ತಿಂಗಳಾಗಿದ್ದು, ಈ ರಸ್ತೆಯಲ್ಲಿರುವ ಮ್ಯಾನ್‌ಹೋಲ್‌ನಲ್ಲಿ ಗಲೀಜು ನೀರು ಸರಾಗವಾಗಿ ಹರಿಯದೆ, ಮ್ಯಾನ್‌ಹೋಲ್‌ ಮೇಲೆ ಚಿಮ್ಮುತ್ತಿತ್ತು. ಇದರಿಂದಾಗಿ ಈ ರಸ್ತೆಯ ಇಕ್ಕೆಲದಲ್ಲಿರುವ ಮಂದಿಗೆ ಸಮಸ್ಯೆ ಉಂಟಾಗುತ್ತಿತ್ತು.
ಇದೀಗ ಕಾಮಗಾರಿ ಉದ್ದೇಶದಿಂದ ಹೊಸ ಕಾಂಕ್ರೀಟ್‌ ರಸ್ತೆ ಅಗೆಯಲಾಗಿದ್ದು, ಪ್ರಗತಿಯಲ್ಲಿದೆ.

Advertisement

ಸ್ಪಂದಿಸಿಲ್ಲ
ಮಾಜಿ ಕಾರ್ಪೋರೆಟರ್‌ ಮಂಜುಳಾ ನಾಯಕ್‌ ಪ್ರತಿಕ್ರಿಯಿಸಿ, “ಈ ಪ್ರದೇಶದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಅಸಮರ್ಪಕ ಕಾಮಗಾರಿ ನಡೆದಿದೆ. ಕಾಮಗಾರಿ ವೇಳೆ ಬೇಜವಾಬ್ದಾರಿಯಿಂದ ಮ್ಯಾನ್‌ಹೋಲ್‌ನಲ್ಲಿ ನೀರು ಬ್ಲಾಕ್‌ ಸುತ್ತಮುತ್ತಲಿನ ಜನರಿಗೆ ತೊಂದರೆ ಉಂಟಾಗಿದೆ. ಈ ಬಗ್ಗೆ ಸ್ಥಳೀಯ ಕಾರ್ಪೋ ರೆಟರ್‌ ಗಮನಕ್ಕೆ ತರಲಾಗಿದ್ದರೂ ಅವರು ಸಮರ್ಪಕವಾಗಿ ಸ್ಪಂದಿಸಿಲ್ಲ’ ಎನ್ನುತ್ತಾರೆ.

ಕಳಪೆ ಕಾಮಗಾರಿ
ಸ್ಥಳೀಯರಾದ ನಾಮದೇವ ನಾಯಕ್‌ ಮಾತನಾಡಿ, “ಈ ಕಳಪೆ ಕಾಮಗಾರಿ ಯಿಂದಾಗಿ ಜನರ ತೆರಿಗೆ ಹಣ ಪೋಲಾಗಿದೆ. ಕಳೆದ ಒಂದು ತಿಂಗಳ ಹಿಂದೆ ಈ ರಸ್ತೆ ಉದ್ಘಾಟನೆಗೊಂಡಿದ್ದು, ಕೆಲವೇ ದಿನಗಳಲ್ಲಿ ಮ್ಯಾನ್‌ಹೋಲ್‌ನಿಂದ ಗಲೀಜು ನೀರು ಬರಲಾರಂಭಿಸಿತ್ತು. ಈ ರಸ್ತೆಯಲ್ಲಿ ಅನೇಕ ದೇವಸ್ಥಾನ, ಮನೆಗಳಿದ್ದು ಜನರು ಸಮಸ್ಯೆಗೆ ಒಳಗಾದರು’ ಎಂದು ಹೇಳುತ್ತಾರೆ.

ಶಾಸಕರ ಗಮನಕ್ಕೆ ತರಲಾಗಿದೆ
ಸ್ಥಳೀಯ ಕಾರ್ಪೋರೆಟರ್‌ ಪೂರ್ಣಿಮಾ ಈ ಬಗ್ಗೆ ಪ್ರತಿಕ್ರಿಯಿಸಿ, “ನೂತನ ಕಾಂಕ್ರೀಟ್‌ ಕಾಮಗಾರಿ ಮತ್ತು ಮ್ಯಾನ್‌ಹೋಲ್‌ ರಚಿಸುವ ವೇಳೆ ಅಧಿಕಾರಿಗಳ ಅಜಾಗರೂಕತೆಯಿಂದಾಗಿ ಕಾಂಕ್ರೀಟ್‌ನ ತುಂಡು ಮ್ಯಾನ್‌ಹೋಲ್‌ ಒಳಗೆ ಬಿದ್ದಿದೆ. ವಿಷಯ ತಿಳಿದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಇದೀಗ ಬ್ಲಾಕ್‌ ತೆಗೆಯುವ ಕೆಲಸ ನಡೆಯುತ್ತಿದೆ. ಇನ್ನೇನು ಮೂರು ದಿನಗಳ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ರೀತಿ ಅಸಡ್ಡೆ ತೋರಿದ ಅಧಿಕಾರಿಗಳ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿದೆ’ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next