Advertisement

500 ಮೀ. ರಸ್ತೆಗೆ 3 ವರ್ಷದಿಂದ ಕಾಂಕ್ರೀಟ್‌ ಆಗಿಲ್ಲ

02:25 AM Jun 27, 2018 | Karthik A |

ವಿಶೇಷ ವರದಿ – ಕುಂದಾಪುರ: ಪುರಸಭೆ ವ್ಯಾಪ್ತಿಯ ಬಹಾದ್ದೂರ್‌ ಷಾ ವಾರ್ಡ್‌ನ ಕೇವಲ 500 ಮೀ.  ರಸ್ತೆಗೆ ಕಳೆದ 3 ವರ್ಷಗಳಿಂದ ಕಾಂಕ್ರೀಟ್‌ ಆಗದೆ  15 ಕ್ಕೂ ಹೆಚ್ಚು ಮನೆಗಳ ನಿವಾಸಿಗಳು ಕಾಲುದಾರಿಯನ್ನೇ ಅವಲಂಬಿಸುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಬಹಾದ್ದೂರ್‌ ಷಾ ರಸ್ತೆಯಿಂದ ಚಿಕ್ಕನ್‌ 
ಸಾಲ್‌ ರಸ್ತೆಗೆ ಸಂಪರ್ಕ ಕಲ್ಪಿಸುವ 500 ಮೀ.  ರಸ್ತೆಗೆ ಹಲವು ವರ್ಷಗಳಿಂದ ಜಾಗದ ತಕರಾರಿನಿಂದ ರಸ್ತೆ ಸೌಲಭ್ಯ ಸಿಕ್ಕಿಲ್ಲ, ಈಗ ಆ ತಕರಾರು ಇತ್ಯರ್ಥವಾದರೂ ಅನುದಾನದ ಕೊರತೆ ನೆಪದಲ್ಲಿ ಕಾಂಕ್ರೀಟ್‌ ಭಾಗ್ಯ ಆಗಿಲ್ಲ. ಇನ್ನೊಂದು ಕಡೆ ಕೂಡ ಸುತ್ತ ರಸ್ತೆ  ಕಾಂಕ್ರೀಟ್‌ಗೊಂಡರೂ ಕೆಲವೇ ಕೆಲವು ಮೀಟರ್‌ನಷ್ಟು ದೂರ ಕಾಂಕ್ರೀಟ್‌ ಆಗಿಲ್ಲ. ಹೊಂಡ – ಗುಂಡಿಗಳ ಕೆಸರು ರಸ್ತೆಯಲ್ಲಿಯೇ ಜನ ಸಂಚರಿಸುತ್ತಿದ್ದಾರೆ. 


ಕಾಲುದಾರಿಯೇ ಗತಿ

ಬಹಾದ್ದೂರ್‌ ಷಾ ವಾರ್ಡ್‌ನ ಈ ಭಾಗದ ಸುಮಾರು 15ಕ್ಕೂ ಹೆಚ್ಚು ಮನೆಗಳಿಗೆ ನೇರವಾದ ರಸ್ತೆ ಸಂಪರ್ಕವಿಲ್ಲದೆ, ಬಹಳ ವರ್ಷಗಳಿಂದ ಕಾಲುದಾರಿಯನ್ನೇ ಅವಲಂಬಿಸಿದ್ದಾರೆ. ಇದಕ್ಕೆ ಜಾಗದ ತಕರಾರು ಕೂಡ ಕಾರಣವಾಗಿತ್ತು. ಆದರೆ ಜಾಗದ ತಕರಾರು ಸಮಸ್ಯೆ ಮುಗಿದಿದ್ದು, ಇಬ್ಬರು ಜಾಗವನ್ನು ರಸ್ತೆಗಾಗಿ ಬಿಟ್ಟುಕೊಟ್ಟಿದ್ದು, ಈಗ ಒಳಚರಂಡಿ ವ್ಯವಸ್ಥೆ ಹಾದು ಹೋಗುವ ಜಾಗದಲ್ಲೇ ರಸ್ತೆ ಮಾಡುವ ಯೋಜನೆ ಸಿದ್ಧವಾಗಿದ್ದರೂ, ಇನ್ನೂ ಅದು ಕೈಗೂಡುವ ಲಕ್ಷಣ ಮಾತ್ರ ಕಾಣುತ್ತಿಲ್ಲ. 

ತಿಂಗಳಿನಿಂದ ಬೀದಿ ದೀಪ ಸರಿಯಿಲ್ಲ 
ಕಳೆದ 1 ತಿಂಗಳಿನಿಂದ ಈ ವಾರ್ಡ್‌ನ ಹೆಚ್ಚಿನ ಬೀದಿದೀಪಗಳು ಉರಿಯುತ್ತಿಲ್ಲ. ರಾತ್ರಿ ಹೊತ್ತು ಕತ್ತಲಲ್ಲೇ ಈ ಭಾಗದ ಜನ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿಯಿದೆ. ಈ ಬಗ್ಗೆಯೂ ಅನೇಕ ಮಂದಿ ಸ್ಥಳೀಯಾಡಳಿತಕ್ಕೆ ದೂರು ನೀಡಿದರೂ ಯಾರು ಕೂಡ ಸಕರಾತ್ಮಕವಾಗಿ ಸ್ಪಂದಿಸಿಲ್ಲ ಎನ್ನುವುದು ಇಲ್ಲಿನ ನಿವಾಸಿಯಾದ ಮೋಹನದಾಸ್‌ ಆರೋಪ.

ಇಂಟರ್‌ ಲಾಕ್‌ ಹಾಕಿಲ್ಲ
ರಸ್ತೆ ಸಮಸ್ಯೆ ಮಾತ್ರವಲ್ಲದೆ, ಈ ವಾರ್ಡ್‌ನ ಅನೇಕ ಕಡೆಗಳಲ್ಲಿ ರಸ್ತೆ  ಕಾಂಕ್ರೀಟ್‌ ಆಗಿದ್ದರೂ, ಅದರ ಬದಿಗೆ ಇಂಟರ್‌ ಲಾಕ್‌ ಹಾಕದೇ ಇರುವ ಕಾರಣ ಹಲವು ಕಡೆಗಳಲ್ಲಿ ಹೊಂಡ – ಗುಂಡಿಗಳಾಗಿದ್ದು, ಇದರಿಂದ ಪಾದಚಾರಿಗಳಿಗೆ ದಿನನಿತ್ಯ ತುಂಬಾ ತೊಂದರೆಯಾಗುತ್ತಿದೆ ಎನ್ನುತ್ತಾರೆ ಸ್ಥಳೀಯರಾದ ಪ್ರಶಾಂತ್‌.

Advertisement

ಚರಂಡಿಗೆ ಚಪ್ಪಡಿ ಹಾಕಿ
ರಸ್ತೆ ಬದಿಯಿರುವ ಚರಂಡಿಗಳಿಗೆ ಚಪ್ಪಡಿ ಕಲ್ಲುಗಳನ್ನೇ ಹಾಕಿಲ್ಲ. ಈ ಬಗ್ಗೆ 4-5 ತಿಂಗಳ ಹಿಂದೆಯೇ ದೂರು ಕೊಟ್ಟರೂ ಪುರಸಭೆ ಯಾವುದೇ ರೀತಿಯಲ್ಲಿ  ಸ್ಪಂದಿಸಿಲ್ಲ. ಸ್ಥಳೀಯ ಸದಸ್ಯರಲ್ಲಿ ಹೇಳಿದರೆ ಅನುದಾನವಿಲ್ಲ ಎನ್ನುತ್ತಾರೆ. ಆದರೆ ಪ್ರತಿ ವಾರ್ಡ್‌ಗೆ 11 ಲಕ್ಷ ರೂ. ಅನುದಾನ ಬಂದಿದೆ. ಅದನ್ನು ಈ ಚರಂಡಿಗೆ ಚಪ್ಪಡಿ ಕಲ್ಲು ಹಾಕಲು, ರಸ್ತೆ ಬದಿ ಇಂಟರ್‌ ಲಾಕ್‌ ಅಳವಡಿಸಲು, ಬೀದಿದೀಪ ಸರಿಪಡಿಸಲು ಬಳಸಬಹುದಲ್ವಾ?
– ರಾಜೇಶ್‌, ಸ್ಥಳೀಯ ರಿಕ್ಷಾ ಚಾಲಕರು

ಕಾಂಕ್ರೀಟ್‌ ಆಗಲಿ
ನಾವು 30 ವರ್ಷದಿಂದ ಹಿಂದೆಯೇ ಇಲ್ಲಿ ಬಂದು ನೆಲೆಸಿದ್ದೇವೆ. ಆದರೆ ಈವರೆಗೆ ಸರಿಯಾದ ರಸ್ತೆ ಸಂಪರ್ಕವೇ ಇಲ್ಲ. ಕಳೆದ 3 ವರ್ಷದಿಂದ ರಸ್ತೆ ಭಾಗ್ಯ ಸಿಕ್ಕರೂ, ಅದಕ್ಕೆ ಕಾಂಕ್ರೀಟ್‌ ಭಾಗ್ಯ ಮಾತ್ರ ಇನ್ನೂ ಆಗಿಲ್ಲ. 
– ನಾಗರಾಜ್‌, ಸ್ಥಳೀಯರು

ಶೀಘ್ರ ಟೆಂಡರ್‌ 
ಜಾಗದ ತಕರಾರು ಇರುವುದರಿಂದ ರಸ್ತೆಗೆ ಇಂಟರ್‌ ಲಾಕ್‌ ಅಥವಾ ಕಾಂಕ್ರೀಟ್‌ ಹಾಕಲು ಸಾಧ್ಯವಾಗಿಲ್ಲ. ಈಗ ಜಾಗ ಬಿಟ್ಟುಕೊಟ್ಟಿದ್ದು, ಕಾಂಕ್ರೀಟ್‌ ಮಾಡಿಕೊಡುವಷ್ಟು ಅನುದಾನವಿಲ್ಲ. ಶೀಘ್ರ ಇಂಟರ್‌ ಲಾಕ್‌ ಹಾಕಿ ಕೊಡಲಾಗುವುದು. ಅದಕ್ಕೆ ಇನ್ನೊಂದೆರಡು ದಿನಗಳಲ್ಲಿ  ಟೆಂಡರ್‌ ಕರೆಯಲಾಗುವುದು. ಚರಂಡಿಗೆ 1.30 ಲ.ರೂ. ಬೇಡಿಕೆಯಿಟ್ಟಿದ್ದೇವೆ. ಬೀದಿ ದೀಪ ಸಿಡಿಲಿಗೆ ಹಾನಿಯಾಗಿದ್ದು, ಟೆಂಡರ್‌ ವಹಿಸಿಕೊಂಡವರೇ ದುರಸ್ತಿ ಮಾಡಿಕೊಡಬೇಕು. ಅವರಿಗೆ ಸೂಚಿಸಿದ್ದೇವೆ. ಇನ್ನೆರಡು ದಿನಗಳಲ್ಲಿ ಆಗುತ್ತೆ. 
– ಚಂದ್ರಶೇಖರ್‌ ಖಾರ್ವಿ, ಸ್ಥಳೀಯ ವಾರ್ಡ್‌ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next