Advertisement

 ವೆಲೆನ್ಸಿಯಾ  ವೃತ್ತ ಅಡ್ಡ ರಸ್ತೆಗೆ ಕಾಂಕ್ರೀಟ್‌ 

10:11 AM Oct 14, 2017 | Team Udayavani |

ಮಹಾನಗರ: ವೆಲೆನ್ಸಿಯಾ ವೃತ್ತದ ಬಳಿ ಎಸ್‌ಬಿಐ ಮತ್ತು ಮೋರ್‌ ಸೂಪರ್‌ ಮಾರ್ಕೆಟ್‌ ನಡುವೆ ಹಾದು ಹೋಗುವ ಅಡ್ಡ ರಸ್ತೆಗೆ ಕಾಂಕ್ರೀಟ್‌ ಕಾಮಗಾರಿ ಆರಂಭವಾಗಿದ್ದು, ಮುಖ್ಯ ರಸ್ತೆಗೆ ಸೇರುವ ತಾಣದ ಇಳಿಜಾರು ಪ್ರದೇಶದಲ್ಲಿ ಅದು ಅವೈಜ್ಞಾನಿಕವಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ಕಂಕನಾಡಿ ಫಾದರ್‌ ಮುಲ್ಲರ್‌ ವೃತ್ತದಿಂದ ನಂದಿಗುಡ್ಡೆ ವೃತ್ತ- ಮಾರ್ನಮಿಕಟ್ಟೆ ಮುಖ್ಯ ರಸ್ತೆಯನ್ನು ಅಗಲಗೊಳಿಸಿ ಕಾಂಕ್ರೀಟ್‌ ಹಾಕುವಾಗ ಎತ್ತರಗೊಂಡಿದ್ದು, ಇದರಿಂದಾಗಿ ಈ ರಸ್ತೆಗೆ ಸಂಪರ್ಕ ಕಲ್ಪಿಸುವ ಅಡ್ಡ ರಸ್ತೆಗಳು ಸಹಜವಾಗಿ ತಗ್ಗಾಗಿದ್ದು, ವಾಹನಗಳ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ.

ವೆಲೆನ್ಸಿಯಾದ ಈ ಅಡ್ಡ ರಸ್ತೆಯು ತಗ್ಗು ಪ್ರದೇಶದ ಕಡೆಗೆ ಸಾಗುತ್ತಿದ್ದು, ಇದರ ಮೂಲಕ ಕಾಂಕ್ರೀಟೀಕೃತ ಮುಖ್ಯ ರಸ್ತೆಗೆ ಬರಬೇಕಾದರೆ ವಾಹನ ಸವಾರರು ಬಹಳಷ್ಟು ಪ್ರಯಾಸ ಪಡಬೇಕಾಗಿದೆ.

ಈ ಅಡ್ಡ ರಸ್ತೆಗೆ ಕಾಂಕ್ರೀಟ್‌ ಕಾಮಗಾರಿ ಆರಂಭಗೊಂಡಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಕಾಮಗಾರಿ ನಡೆಯಬೇಕು ಎನ್ನುವುದು ಸ್ಥಳೀಯರ ಆಗ್ರಹ. ಈ ರಸ್ತೆ ಮುಂದೆ ಫಳ್ನೀರ್‌ ಮಾರ್ಗವಾಗಿ ಹಂಪನಕಟ್ಟೆಗೆ ಸಂಪರ್ಕ ಕಲ್ಪಿಸುತ್ತದೆ.

ಇಕ್ಕೆಲಗಳಲ್ಲಿ ಸುಮಾರು 300 ಮನೆಗಳಿದ್ದು, 1,200ಕ್ಕೂ ಅಧಿಕ ಜನಸಂಖ್ಯೆ ಇದೆ. ಫಾದರ್‌ ಮುಲ್ಲರ್‌ ಆಸ್ಪತ್ರೆ ರಸ್ತೆಗೆ ಹೋಗಲು ಈ ರಸ್ತೆ ಅತಿ ಅಗತ್ಯ. ಈ ರಸ್ತೆ ಇಳಿಜಾರು ಆಗಿರುವುದರಿಂದ ತಿಂಗಳಲ್ಲಿ 4- 5 ಅಪಘಾತಗಳು ಸಂಭವಿಸುತ್ತವೆ. ಹಿರಿಯ ನಾಗರಿಕರು ಮತ್ತು ಶಾಲಾ ಮಕ್ಕಳಿಗೆ ಇದನ್ನು ದಾಟುವುದೇ ಕಷ್ಟಸಾಧ್ಯವಾಗಿದೆ. 

Advertisement

ಮುಖ್ಯ ರಸ್ತೆಗೆ ಸೇರುವಲ್ಲಿರುವ ಇಳಿಜಾರನ್ನು ಸರಿಪಡಿಸುವಂತೆ ಸ್ಥಳೀಯರು 2015 ಅಕ್ಟೋಬರ್‌ ಮತ್ತು 2016 ಮಾರ್ಚ್‌ನಲ್ಲಿ ಸಭೆ ಸೇರಿ ಕಾರ್ಪೊರೇಟರ್‌ ಅಬ್ದುಲ್‌ ರವೂಫ್‌, ಮೇಯರ್‌ ಹಾಗೂ ಶಾಸಕ ಜೆ.ಆರ್‌. ಲೋಬೋ ಅವರಿಗೆ ಮನವಿ ಸಲ್ಲಿಸಿದ್ದರು. 2016 ಆಗಸ್ಟ್‌ – ಸೆಪ್ಟಂಬರ್‌ನಲ್ಲಿ ಕಾರ್ಪೊರೇಟರ್‌ ರವೂಫ್‌ ಪಾಲಿಕೆಯಿಂದ ಕಾಂಕ್ರೀಟ್‌ ಕಾಮಗಾರಿಗೆ ಅನುದಾನವನ್ನು ಮಂಜೂರು
ಮಾಡಿಸಿದ್ದರು. 2017 ಫೆಬ್ರವರಿಯಲ್ಲಿ ಕಾಮಗಾರಿಗೆ ಚಾಲನೆ ಸಿಗುತ್ತಿದ್ದಂತೆ ಒಂದಿಬ್ಬರು ವ್ಯಕ್ತಿಗಳ ಲಾಬಿಯಿಂದಾಗಿ ಕೆಲಸ ತಾತ್ಕಾಲಿಕವಾಗಿ ನಿಂತು ಹೋಗಿದ್ದು, ಈಗ ಆರಂಭಗೊಂಡಿದೆ. ಕಾಮಗಾರಿಯನ್ನು ವೈಜ್ಞಾನಿಕವಾಗಿ ನಡೆಸುವಂತೆ ಕಾರ್ಪೊರೇಟರ್‌ ಮತ್ತು ಶಾಸಕರಿಗೆ ಮನವಿ ಮಾಡಿದ್ದಾರೆ.

ತೊಂದರೆಯಾಗದಂತೆ ಕಾಮಗಾರಿ
ಸಾರ್ವಜನಿಕ ಹಿತ ದೃಷ್ಟಿಯಿಂದ ಯಾರಿಗೂ ತೊಂದರೆ ಆಗದ ರೀತಿಯಲ್ಲಿ ಕೆಲಸ ನಿರ್ವಹಿಸುವಂತೆ ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮುಖ್ಯರಸ್ತೆಗೆ ಕಾಂಕ್ರೀಟ್‌ ಹಾಕುವಾಗ ಅಪ್ರೋಚ್‌ ರೋಡ್‌ಗಳನ್ನು ಪರಿಗಣನೆಗೆ ತೆಗೆದುಕೊಳ್ಳದ ಕಾರಣ ಈ ಪರಿಸ್ಥಿತಿ ಬಂದಿದೆ.
 - ಅಬ್ದುಲ್‌ ರವೂಫ್‌, ಸ್ಥಳೀಯ ಕಾರ್ಪೊರೇಟರ್ 

ಕನ್ಸಲ್ಟೆನ್ಸಿ ಪ್ರಕಾರ ಕೆಲಸ
ಎಂಜಿನಿಯರುಗಳ ಕನ್ಸಲ್ಟೆನ್ಸಿ ಪ್ರಕಾರ ಕಾಮಗಾರಿ ಕೈಗೆತ್ತಿಕೊಂಡು ನಡೆಸಲಾಗುತ್ತಿದೆ. ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ವೈಜ್ಞಾನಿಕವಾಗಿ ಕೆಲಸ ಮಾಡುತ್ತಿದ್ದೇವೆ.
ಲಿಂಗೇಗೌಡ, ಎಕ್ಸಿಕ್ಯೂಟಿವ್‌ ಎಂಜಿನಿಯರ್‌, ಮ.ನ.ಪಾ

ಅಪಘಾತದ ತಾಣ ಆಗದಿರಲಿ
ಕಾಮಗಾರಿಯನ್ನು ವ್ಯವಸ್ಥಿತವಾಗಿ ಮಾಡದಿದ್ದರೆ ಜನರಿಗೆ ತೊಂದರೆಯೇ ಹೊರತು ಪ್ರಯೋಜನವಾಗದು. ಅದು ಅಪಘಾತದ ತಾಣವಾಗಿ ಬದಲಾಗುವ ಭೀತಿಯೂ ಇದೆ. ಅದಕ್ಕೆ ಅವಕಾಶ ಮಾಡಿಕೊಡಬಾರದು.
ಅನಿತಾ, ಸ್ಥಳೀಯರು

ವೈಜ್ಞಾನಿಕವಾಗಿ ಕೆಲಸ ನಡೆಯಲಿ
ಡಾಮರು ಕಾಮಗಾರಿಯಾಗಿದ್ದರೆ ಮುಂದಕ್ಕೆ ಸುಲಭವಾಗಿ ಸರಿಪಡಿಸಬಹುದು. ಆದರೆ ಕಾಂಕ್ರೀಟ್‌ ಕಾಮಗಾರಿಯನ್ನು ಸೂಕ್ತ ಮುನ್ನೆಚ್ಚರಿಕೆ ವಹಿಸಿ ವೈಜ್ಞಾನಿಕವಾಗಿಯೇ ನಿರ್ವಹಿಸುವುದು ಅಗತ್ಯ.
ರೋಶನ್‌ ಸಲ್ದಾನ್ಹಾ, ಸ್ಥಳೀಯರು

ಜನಪ್ರತಿನಿಧಿಗಳು ಸ್ಪಂದಿಸಲಿ
ರಸ್ತೆಗಳು ಜನರಿಗೆ ಜೀವನಾಡಿ ಇದ್ದಂತೆ. ಸಾರ್ವಜನಿಕ ರಸ್ತೆಗಳನ್ನು ಸುಸ್ಥಿತಿಯಲ್ಲಿಡುವುದು ಪಾಲಿಕೆಯ ಕರ್ತವ್ಯ. ತೆರಿಗೆ ಪಾವತಿಯಲ್ಲಿ ಒಂದಿಷ್ಟು ವಿಳಂಬವಾದರೂ ದಂಡ ಸಮೇತ ವಸೂಲಿ ಮಾಡುತ್ತದೆ. ಇಲ್ಲಿನ ಜನರು ಸೌಮ್ಯವಾಗಿದ್ದು, ಸಣ್ಣಪುಟ್ಟ ಸಮಸ್ಯೆಗಳನ್ನು ಸಹಿಸುತ್ತಾರೆ. ಆದರೆ ಜನ ಪ್ರತಿನಿಧಿಗಳು ಸಮಸ್ಯೆಗೆ ಸ್ಪಂದಿಸಿ ಜನರ ಮನಸ್ಸುಗಳನ್ನು ಅರಿತು ಕ್ರಮ ಕೈಗೊಳ್ಳಬೇಕು.
ಶರ್ಮಿಳಾ, ಸ್ಥಳೀಯರು

ಅವೈಜ್ಞಾನಿಕ ಕಾಮಗಾರಿ ಬೇಡ
ಇದು ಎಲ್ಲ ರಸ್ತೆಗಳಂತಲ್ಲ; ಇದು ಮುಖ್ಯ ರಸ್ತೆಗೆಕೂಡುವಲ್ಲಿ ಬಹಳಷ್ಟು ಇಳಿಜಾರು ಆಗಿದ್ದು, ವಾಹನ ಸವಾರರ ಪ್ರಾಣಕ್ಕೆ ಕುತ್ತು ತರುವಂತಿದೆ. ಮಕ್ಕಳು ಮತ್ತು ಹಿರಿಯ ನಾಗಕರೀಕರಿಗೆ ನಡೆದಾಡಲು ಕಷ್ಟವಾಗಿದೆ. ಕಾರ್ಪೊರೇಟರ್‌ ಇದನ್ನು ಅರಿತು ವೈಜ್ಞಾನಿಕವಾಗಿ ಕಾಂಕ್ರೀಟ್‌ ಕಾಮಗಾರಿ ಮಾಡಿಸಬೇಕಾಗಿದ್ದು, ಶಾಸಕರ ಮಾರ್ಗದರ್ಶನವೂ ಅಗತ್ಯ.
-ನೆಲ್ಸನ್‌ ಪಿರೇರಾ, ಸ್ಥಳೀಯರು

ಅನುಕೂಲಕರವಾದ ರಸ್ತೆ ಬೇಕು
ಈ ರಸ್ತೆ ಹದಗೆಟ್ಟಿದ್ದು, ಕಾಂಕ್ರೀಟೀಕರಣ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ ಜನರ ಮತ್ತು ವಾಹನಗಳ ಓಡಾಟಕ್ಕೆ
ಅನುಕೂಲವಾಗುವಂತೆ ಕಾಮಗಾರಿ ನಡೆಯಲಿ.
-ನೋಯೆಲ್‌ ಮಿನೇಜಸ್‌, ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next