Advertisement
ಉಡುಪಿ ಜಿಲ್ಲಾ ಉತ್ಸವಕ್ಕೆ ಹೊಸ ಸೊಬಗು ನೀಡಲೋಸುಗ ಮಣಿಪಾಲ ಪಳ್ಳದಲ್ಲಿ ರಾಷ್ಟ್ರೀಯ ಮಟ್ಟದ ಶಿಲ್ಪಕಲಾಕೃತಿಗಳ ರಚನಾ ಕಾರ್ಯಾಗಾರ ಜರಗಿತು. ಆಗಮಿಸಿದ ಎಂಟು ಕಲಾವಿದರು ಮಣಿಪಾಲ ಪಳ್ಳದ ಸುತ್ತಲು ಹೊಸ ಬಗೆಯ ಕಲಾಕೃತಿಗಳನ್ನು ರಚಿಸಿದರು. ಕಲಾವಿದರ ಕೈಗೆ ಕೇವಲ ಸಿಮೆಂಟ್ ಕಲ್ಲು ಮಾತ್ರವಲ್ಲ ಕಬ್ಬಿಣ, ಇಟ್ಟಿಗೆ ಮತ್ತಿತರ ಲಭ್ಯ ವಸ್ತುಗಳು ಅರ್ಥಪೂರ್ಣವಾಗಿ ಬಳಸಿದರೆ ಕಲಾಕೃತಿಗಳಾಗುತ್ತವೆ ಎಂಬುದಕ್ಕೆ ಸಾಕ್ಷಿಯಾದವು.
ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ನಿರ್ಮಿತಿ ಕೇಂದ್ರದ ಸಹಾಯಕ ನಿರ್ದೇಶಕ ಅರುಣ್ ಕುಮಾರ್ ಅವರ “ಶಿಲ್ಪ ಕಲಾ ಶಿಬಿರ’ದ ಪ್ರಸ್ತಾವನೆಗೆ ಹಸಿರು ನಿಶಾನೆ ತೋರಿಸಿದ್ದೇ ತಡ ಪ್ರಸಿದ್ಧ ಕಲಾವಿದ ಪುರುಷೋತ್ತಮ ಅಡ್ವೆ ಈ ಸಂಪೂರ್ಣ ಯೋಜನೆಗೆ ಬೆನ್ನೆಲಬಾಗಿ ನಿಂತರು. ಕಾರ್ಯಗತವಾಗುವಂತೆ ಮಾಡಿದರು. ಕಲಾವಿದರ ಆಹ್ವಾನ, ಅವರ ಊಟೋಪಾಚಾರ ಮತ್ತು ಅಗತ್ಯ ಸಲಕರಣೆಗಳ ವಿತರಣೆ ನಿಜವಾಗಿಯೂ ಸವಾಲಾಗಿತ್ತು. ಆದರೆ ಕಲಾಶಿಬಿರಕ್ಕೆ ಯಾವುದೇ ಚ್ಯುತಿ ಬಾರದಂತೆ ಇದು ನಡೆದುಹೋಗಿದೆ. ಪ್ರಶಾಂತ ಪರಿಸರಕ್ಕೆ ಹಪಹಪಿಸುವ ಮಣಿಪಾಲ ಜನರಿಗೆ ಮಣಿಪಾಲ ಪಳ್ಳ ಕಲಾವಂತಿಕೆಯಿಂದಲೂ ಆಶ್ರಯನೀಡುತ್ತಿದೆ.