Advertisement

ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಲು ತೀರ್ಮಾನ

06:55 AM Sep 02, 2018 | |

ಬೆಂಗಳೂರು : ರಾಜ್ಯದಲ್ಲಿ 1987ರಿಂದ 1994-95ರಲ್ಲಿ ಆರಂಭವಾಗಿ ತಾಂತ್ರಿಕ ಕಾರಣಗಳಿಂದ ವೇತನಾನುದಾನಕ್ಕೆ ಒಳಪಡದ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸಲು ವಿಧಾನ ಪರಿಷತ್‌ ಸದಸ್ಯರ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆ ನಿರ್ಧರಿಸಿದೆ.

Advertisement

ವಿಧಾನಸೌಧದಲ್ಲಿ ಶನಿವಾರ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆಯಲ್ಲಿ ಹಾಗೂ ಶಿಕ್ಷಣ ಸಚಿವ ಎನ್‌. ಮಹೇಶ್‌ ಉಪಸ್ಥಿತಿಯಲ್ಲಿ ನಡೆದ ವಿಧಾನ ಪರಿಷತ್‌ ಸದಸ್ಯರ ಹಾಗೂ ಶಿಕ್ಷಣ, ಹಣಕಾಸು ಮತ್ತು ಕಾನೂನು ಇಲಾಖೆಯ ಉನ್ನತಾಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಂಬಂಧ ಯಾವುದೇ ಆದೇಶವಾದೆ ಇರುವುದರಿಂದ ಸ್ವಾತಂತ್ರ್ಯ ಉದ್ಯಾನವದಲ್ಲಿ ಅಹೋರಾತ್ರಿ ಹೋರಾಟ ನಡೆಸುತ್ತಿರುವ ಶಿಕ್ಷಕರು ಹೋರಾಟ ಮುಂದುವರಿಸಲು ನಿರ್ಧರಿಸಿದ್ದಾರೆ.

ಶನಿವಾರ ಶಿಕ್ಷಣ ಸಚಿವ ಎನ್‌. ಮಹೇಶ್‌ ಹಾಗೂ ವಿಧಾನ ಪರಿಷತ್‌ ಸದಸ್ಯ ಬೋಜೇಗೌಡ ಮೊದಲಾದವರು ಪ್ರತ್ಯೇಕವಾಗಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಶಿಕ್ಷಕರನ್ನು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದೇಶ ಪ್ರತಿ ಕೈಗೆ ಸಿಗುವವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದು ರಾಜ್ಯ ಅನುದಾನಕ್ಕೆ ಒಳಪಡುತ್ತಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಒಕ್ಕೂಟ ಸ್ಪಷ್ಟಪಡಿಸಿದೆ.

ರಾಜ್ಯದಲ್ಲಿ 1987ರಿಂದ 1994-95ರಲ್ಲಿ ಆರಂಭವಾದ  ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ 1600 ಶಾಲೆಗಳನ್ನು ಈಗಾಗಲೇ ವೇತನಾನುದಾನಕ್ಕೆ ಒಳಪಡಿಸಲಾಗಿದೆ. ಎಸ್ಸೆಸ್ಸೆಲ್ಸಿ ಜಿಲ್ಲಾ ಸರಾಸರಿ ಫ‌ಲಿತಾಂಶ ಪಡೆಯಲು ಸಾಧ್ಯವಾಗದ ಸುಮಾರು 150 ಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸಿಲ್ಲ. ಆರ್ಥಿಕ ಇಲಾಖೆ ಈ ಶಾಲೆಗಳ ಕಡತ ವಾಪಾಸ್‌ ಸರ್ಕಾರಕ್ಕೆ  ಕಳುಹಿಸಿತ್ತು. ಹೀಗಾಗಿ ಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸುವಂತೆ ಅಲ್ಲಿನ ಶಿಕ್ಷಕರು 47 ದಿನದಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಶನಿವಾರ ನಡೆದ ಸಭೆಯಲ್ಲಿ ಈ ಎಲ್ಲ ಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ, ಆರ್ಥಿಕ ಇಲಾಖೆಯಿಂದ ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ಆರ್ಥಿಕ ಇಲಾಖೆ ಹಸಿರು ನಿಶಾನೆ ತೋರಿದ ನಂತರವಷ್ಟೆ ಈ ಕುರಿತು ಆದೇಶ ಹೊರಡಿಸಲು ಸಾಧ್ಯ ಎಂದು ಮೂಲಗಳು ಖಚಿತಪಡಿಸಿವೆ.

Advertisement

ಶಾಲಾ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಜಿಲ್ಲಾ ಉಪನಿರ್ದೇಶಕರು ವೇತನ ವಿಳಂಬ ಮಾಡುತ್ತಿರುವ ಬಗ್ಗೆ ವಿಧಾನ ಪರಿಷತ್‌ ಸದಸ್ಯರು ಸಭೆಯಲ್ಲಿ ಅಧಿಕಾರಿಗಳ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರ ನಿಗದಿ ಮಾಡಿದ ದಿನಾಂಕದೊಳಗೆ ಶಾಲಾ ಶಿಕ್ಷಕರಿಗೆ ವೇತನ ನೀಡಬೇಕು. ಯಾವುದೇ ಕಾರಣಕ್ಕೂ ವೇತನವನ್ನು ಅಧಿಕಾರಿಗಳು ತಮ್ಮ ಖಾತೆಯಲ್ಲಿ ಇಟ್ಟುಕೊಳ್ಳಬಾರದು. ವೇತನ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಅಥವಾ ಅಧಿಕಾರಿಗಳ ವೇತನದಿಂದ ವಿಳಂಬಕ್ಕೆ ಬಡ್ಡಿ ನೀಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಸಭೆಯಲ್ಲಿ ಆಗ್ರಹಿಸಿದ್ದಾರೆ.

ಮಾಹಿತಿ ಸಿಂಧು ಶಿಕ್ಷಕರನ್ನು ವಿಶೇಷ ನೇಮಕಾತಿ ಅಡಿಯಲ್ಲಿ ಕಾಯಂ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಂಡಿಲ್ಲ, ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸುವ ಬಗ್ಗೆ ಗಂಭೀರ ಚರ್ಚೆ ನಡೆಸಲಾಗಿದೆ.

ಅನುದಾನ ಪಡೆಯಲು ಖಾಸಗಿ ಶಾಲೆಗಳಿಗೆ ಎಸ್ಸೆಸ್ಸೆಲ್ಸಿ ಫ‌ಲಿತಾಂಶ ಮಾನದಂಡ ವಿನಾಯ್ತಿ ನೀಡಬೇಕು, ಪದವಿ ಪೂರ್ವ ಶಿಕ್ಷಣ  ಇಲಾಖೆಯ ಉಪನ್ಯಾಸಕರ ವೇತನ ತಾರತಮ್ಯ ಸರಿಪಡಿಸಿ, ಸರ್ಕಾರ 2016ರಂದು ಹೊರಡಿಸಿದ್ದ ಆದೇಶದಂತೆ ವೇತ ನೀಡಬೇಕು, ಶಾಲಾ ಶಿಕ್ಷಕರ ವರ್ಗಾವಣೆ, ಹೊಸ ನೇಮಕಾತಿ, ಹೆಚ್ಚುವರಿ ಶಿಕ್ಷಕರ ನಿಯೋಜನೆ ಇತ್ಯಾದಿ ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಸುದೀರ್ಘ‌ ಚರ್ಚೆ ನಡೆದೆ.ವಿಧಾನ ಪರಿಷತ್‌ ಸದಸ್ಯರಾದ ಶ್ರೀಕಂಠೇಗೌಡ, ಭೋಜೇಗೌಡ, ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಶಾಲಿನಿ ರಜನೀಶ್‌, ಡಾ.ಜಾಫ‌ರ್‌, ಸಿ.ಶಿಖಾ ಮೊದಲಾದವರು ಸಭೆಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next