ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶ ಹೊರಬೀಳಲು ಒಂದು ದಿನ ಬಾಕಿ ಇರುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖೀಲ್, ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್, ಮಾಜಿ ಸಿಎಂ ಎಸ್.ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಭವಿಷ್ಯದ ಬಗ್ಗೆ ಜೆಡಿಎಸ್‌ನಲ್ಲಿ ತಲೆಬಿಸಿಯುಂಟಾಗಿದೆ.
ತುಮಕೂರು, ಹಾಸನ, ಮಂಡ್ಯ ಹಾಗೂ ಶಿವಮೊಗ್ಗ ಕ್ಷೇತ್ರಗಳಲ್ಲಿ ಗೆಲ್ಲುವ ಭರವಸೆ ಹೊಂದಿದ್ದ ಜೆಡಿಎಸ್‌ಗೆ ಮತದಾನೋತ್ತರ ಸಮೀಕ್ಷೆಗಳಲ್ಲಿ ಎರಡು ಸ್ಥಾನಗಳು ಮಾತ್ರ ಗೆಲ್ಲುವುದಾಗಿ ತಿಳಿಸಿರುವುದು ಆತಂಕಕ್ಕೆ ಕಾರಣ ವಾಗಿದೆ. ಜತೆಗೆ, ಪಕ್ಷದ ಮುಂದಿನ ಭವಿಷ್ಯ, ಸಮ್ಮಿಶ್ರ ಸರ್ಕಾರದ ಸ್ಥಿರತೆಯೂ ಫಲಿತಾಂಶದ ಮೇಲೆಯೇ ಅವಲಂಬಿತವಾಗಿದೆ.
ಎರಡು ಕ್ಷೇತ್ರ ಮಾತ್ರ ಗೆಲ್ಲುವುದಾದರೆ ಆ ಕ್ಷೇತ್ರಗಳು ಯಾವುವು? ಅದರಲ್ಲಿ ಮಂಡ್ಯ ಅಥವಾ ತುಮಕೂರು ಇಲ್ಲವಾ? ಶಿವಮೊಗ್ಗ-ಹಾಸನ ಇಲ್ಲವಾ ಎಂಬ ಅನುಮಾನ ಪ್ರಾರಂಭವಾಗಿದೆ. ಕಾಂಗ್ರೆಸ್ ಮೈತ್ರಿಯಿಂದ ಜೆಡಿಎಸ್‌ಗೆ ಲಾಭವಾಗುತ್ತಾ, ನಷ್ಟವಾಗುತ್ತಾ ಎಂಬ ಲೆಕ್ಕಾಚಾರವೂ ನಡೆಯುತ್ತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯದಲ್ಲಿ ನಿಖೀಲ್ ಸುಮಾರು ಒಂದೂವರೆ ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ. ಆದರೆ, ಮತದಾನೋತ್ತರ ಸಮೀಕ್ಷೆಗಳಲ್ಲಿ 50:50 ಸಾಧ್ಯತೆಯಿದೆ ಎಂದು ಹೇಳಿರುವುದು ಕುಮಾರಸ್ವಾಮಿ ಅವರಲ್ಲಿ ಗೊಂದಲ ಮೂಡಿಸಿದ್ದು, ಮಂಡ್ಯದ ಶಾಸಕರ ಬಳಿ ಚರ್ಚಿಸಿದ್ದಾರೆ. ಜತೆಗೆ ತಮ್ಮದೇ ಮೂಲಗಳಿಂದಲೂ ಮಾಹಿತಿ ಸಂಗ್ರಹಿಸಿದ್ದಾರೆಂದು ಹೇಳಲಾಗಿದೆ.
ತುಮಕೂರು ಕ್ಷೇತ್ರದ ಬಗ್ಗೆಯೂ ಜೆಡಿಎಸ್‌ನಲ್ಲಿ ಸಾಕಷ್ಟು ನಿರೀಕ್ಷೆಯಿದೆ. ದೇವೇಗೌಡರು ಅಲ್ಲಿ ಸ್ಪರ್ಧಿಸಿರುವುದರಿಂದ ಅಲ್ಲಿನ ಗೆಲುವು ಪಕ್ಷದ ಪ್ರತಿಷ್ಠೆ ಪ್ರಶ್ನೆ. ಮತದಾನದ ನಂತರ ಕಾಂಗ್ರೆಸ್‌ನಲ್ಲಿನ ಆಂತರಿಕ ಜಗಳ ಬಯಲಾಗುತ್ತಿದ್ದು ಕಾಂಗ್ರೆಸ್‌ನವರು ನಿಜಕ್ಕೂ ಜೆಡಿಎಸ್ ಪರ ಕೆಲಸ ಮಾಡಿದ್ದಾರಾ ಎಂಬ ಅನುಮಾನ ಉಂಟಾಗಲು ಕಾರಣವಾಗಿದೆ.
ಮಂಡ್ಯದಲ್ಲಿ ಕಾಂಗ್ರೆಸ್ ನಾಯಕರು ಬಹಿರಂಗ ವಾಗಿಯೇ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಕೆಲಸ ಮಾಡಿದ್ದು ಜಗಜ್ಜಾಹೀರಾಗಿತ್ತು. ಇದೀಗ ತುಮಕೂರಿನ ಬಗ್ಗೆಯೂ ಜೆಡಿಎಸ್‌ನಲ್ಲಿ ಅಂತದ್ದೇ ಅನುಮಾನ ಉಂಟಾಗಿದೆ. ಹಾಸನದ ವಿಚಾರದಲ್ಲಿ ಒಳ ಏಟು ಬಹಿರಂಗವಾಗಿಲ್ಲ, ಆದರೂ ಒಳಗೊಳಗೇ ಏನಾದರೂ ‘ಆಟ’ ನಡೆದಿದೆಯಾ ಎಂಬ ಆತಂಕವೂ ಇದೆ.
ಮಂಡ್ಯ ಹಾಗೂ ತುಮಕೂರು ಕ್ಷೇತ್ರಗಳು ಜೆಡಿಎಸ್ ಪಾಲಿಗಂತೂ ತೀವ್ರ ಪ್ರತಿಷ್ಠೆ ಹಾಗೂ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ. ತುಮಕೂರಿನಲ್ಲಿ ಬಂಡಾಯ ಶಮನವಾಗಿದ್ದರೂ ಕ್ಷೇತ್ರವಾರು ಮತದಾನ ಹಾಗೂ ಕಾಂಗ್ರೆಸ್ ನಾಯಕರ ‘ಸೈಲಂಟ್’ ನಿಂದ ಕೆಲವೆಡೆ ಲೀಡ್ ಕೈಕೊಡುವ ಸಾಧ್ಯತೆಯ ಬಗ್ಗೆಯೂ ನಾಯಕರಿಗೆ ಅನುಮಾನವಿದೆ.
ಕುಮಾರಸ್ವಾಮಿಯವರ ಪುತ್ರನ ರಾಜಕೀಯ ಭವಿಷ್ಯ ಮಂಡ್ಯದಲ್ಲಿ ಅಡಗಿದ್ದರೆ, ದೇವೇಗೌಡರ ಭವಿಷ್ಯ ತುಮಕೂರಿನಲ್ಲಿದೆ. ಹಾಸನದಲ್ಲಿ ಸಚಿವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ಭವಿಷ್ಯ ಅಡಗಿದೆ. ಮೂರೂ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಿದರೆ ಒಂದೇ ಕುಟುಂಬದಿಂದ ಮೂವರು ಸಂಸತ್ ಪ್ರವೇಶಿಸಿದರೆ ಅದು ರಾಜ್ಯ ರಾಜ ಕೀಯ ಇತಿಹಾಸದಲ್ಲಿ ದಾಖಲೆಯೇ ಸರಿ. ಅದೇ ರೀತಿ ಫಲಿತಾಂಶದಲ್ಲಿ ವ್ಯತ್ಯಾಸವಾದರೆ ಗೌಡರ ಕುಟುಂಬದ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ.
ಹೀಗಾಗಿ, ಮೂರೂ ಕ್ಷೇತ್ರಗಳ ಫಲಿತಾಂಶ ಜೆಡಿಎಸ್‌ನಲ್ಲಿ ಕುತೂಹಲದ ಜತೆ ಏನಾಗುವುದೋ ಎಂಬ ಆತಂ ಕವನ್ನೂ ಮೂಡಿಸಿದೆ. ಜತೆಗೆ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಉತ್ತರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸದಿದ್ದರೂ ಮೈತ್ರಿ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆಯಾಗುವ ಭಯವೂ ಆವರಿಸಿದೆ.
● ಎಸ್. ಲಕ್ಷ್ಮಿನಾರಾಯಣ