ಹಾಸನ: ಕೋವಿಡ್ 19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೂವು, ಹಣ್ಣು ಬೆಳೆದ ರೈತರಿಗೆ 100 ಕೋಟಿಗೂ ಹೆಚ್ಚು ನಷ್ಟವಾಗಿದ್ದು, ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಪರಿಹಾರ ನೀಡುವ ಕುರಿತು ಸಿಎಂ ಯಡಿಯೂರಪ್ಪ ಅವರನ್ನು ಖುದ್ದಾಗಿ ಭೇಟಿಯಾಗಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು. ಕಳೆದ ಒಂದು ತಿಂಗಳಿನಿಂದ ಸರ್ಕಾರ ಪಡಿತರ ಅಕ್ಕಿ ಕೊಟ್ಟಿರುವುದನ್ನು ಬಿಟ್ಟರೆ ಬಡವರ ಸಂಕಷ್ಟಕ್ಕೆ ಸ್ಪಂದಿಸಿಲ್ಲ. ಅಸಂಘಟಿತ ವಲಯದ ಕಾರ್ಮಿಕರು ಬೀದಿ ಪಾಲಾಗಿದ್ದಾರೆ ಎಂದರು.
ಮೆಕ್ಕೆಜೋಳ ಖರೀದಿಸಿ: ಹಾಸನ ಜಿಲ್ಲೆಯಲ್ಲಿ 82ಸಾವಿರ ಹೆಕ್ಟೇರ್‌ನಲ್ಲಿ ಮೆಕ್ಕಜೋಳ ಬೆಳೆದಿದ್ದಾರೆ. ಮೆಕ್ಕೆ ಜೋಳದ ದರ ಈಗ ಕ್ವಿಂಟಾಲ್‌ಗೆ 1,200 ರೂ.ಗೆ ಕುಸಿದ್ದು, ನಷ್ಟ ಅನುಭವಿಸುವಂತಾಗಿದೆ. ಸರ್ಕಾರ ಕೇಂದ್ರ ಘೋಷಣೆ ಮಾಡಿರುವ ಬೆಂಬಲ ಬೆಲೆ 1,760 ರೂ. ದರದಲ್ಲಿ ಖರೀದಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಸಚಿವ ಮಾಧುಸ್ವಾಮಿಗೆ ತರಾಟೆ: ಹೇಮಾವತಿ ಜಲಾಶಯದಿಂದ ಹಾಸನ ಜಿಲ್ಲೆಗೆ ನೀರು ಹರಿಸುವುದಿಲ್ಲ. ತುಮಕೂರು ಜಿಲ್ಲೆಗೆ ಮಾತ್ರ ನೀರು ಹರಿಸಲಾಗುವುದುಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ. ಹೇಮಾವತಿ ಜಲಾಶಯ ನಿರ್ಮಾಣವಾಗಿರುವುದು ತುಮಕೂರು ಜಿಲ್ಲೆಗೆ ಮಾತ್ರ ಅಲ್ಲ. ಹಾಸನ, ಮಂಡ್ಯ, ಮೈಸೂರು ಜಿಲ್ಲೆಗೂ ನೀರು ಒದಗಿಸುವ ಉದ್ದೇಶದಿಂದ ಜಲಾಶಯ ನಿರ್ಮಾಣವಾಗಿದೆ. ಈ ಯೋಜನೆಯ ಒಟ್ಟು ಅಚ್ಚುಕಟ್ಟು ಪ್ರದೇಶ 6.65 ಲಕ್ಷ ಎಕರೆ ಪೈಕಿ ತುಮಕೂರು ಜಿಲ್ಲೆಯಲ್ಲಿ 3.14 ಲಕ್ಷ ಎಕರೆ, ಮಂಡ್ಯ ಜಿಲ್ಲೆಯ 2.27 ಲ್ಕಷ ಎಕರೆ, ಹಾಸನ ಜಿಲ್ಲೆಯ 1.7 ಲಕ್ಷ ಎಕರೆ ಹಾಗೂ ಮೈಸೂರುಜಿಲ್ಲೆಯ 5,600 ಎಕರೆಗೆ ನೀರು ಹರಿಸಬೇಕು. ಕಾವೇರಿ ನ್ಯಾಮಂಡಳಿ ಆದೇಶವನ್ನು ಅರ್ಥ ಮಾಡಿಕೊಂಡು ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಬೇಕು ಎಂದು ರೇವಣ್ಣ ತರಾಟೆಗೆ ತೆಗೆದುಕೊಂಡರು.
ಸಿಎಂ ಪರಿಹಾರ ನಿಧಿ-ಮಾಹಿತಿ ನೀಡಿ: ಕೋವಿಡ್ 19 ನಿಯಂತ್ರಣ ಕ್ರಮಗಳಿಗಾಗಿ ಸಾರ್ವಜನಿಕರು, ಸಂಘ ಸಂಸ್ಥೆಗಳು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ನೀಡಿರುವ ದೇಣಿಗೆಯ ಹಾಗೂ ವೆಚ್ಚದ ವಿವರ ಬಹಿರಂಗಪಡಿಸಬೇಕು ಎಂದು ಸಿಎಂ ಕಾರ್ಯದರ್ಶಿಗೆ ಗುರುವಾರ ಪತ್ರ ಬರೆದಿರುವುದಾಗಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿದರು.
ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಇದುವರೆಗೂ ಸಂಗ್ರಹವಾಗಿರುವ ದೇಣಿಗೆ ಎಷ್ಟು? ಇದುವರೆಗೂ ಮಾಡಿರುವ ಖರ್ಚಿನ ವಿವರ ಸಂಪೂರ್ಣ ವಿವರ, ಆರೋಗ್ಯ ಕಾರ್ಯಕರ್ತರ ಸುರಕ್ಷತಾ ಪರಿಕರ ಖರೀದಿಗೆ ಮಾಡಿರುವ ವೆಚ್ಚದ ವಿವರ, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಐಸಿಯು ಮತ್ತು ವೆಂಟಿ ಲೇಟರ್ ಖರೀದಿಗೆ ಖರ್ಚು ಮಾಡಿರುವ ವಿವರದ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯಗೆ ಪತ್ರ… : ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಕ್ಷಣವೇ ಎಲ್ಲ ವಿರೋಧ ಪಕ್ಷಗಳ ನಾಯಕರ ಸಭೆ ಕರೆದು ಕೋವಿಡ್ 19 ಲಾಕ್‌ಡೌನ್‌ನ ಅವಧಿಯಲ್ಲಿ ರೈತರು, ಬಡವರು, ಕಾರ್ಮಿಕರಿಗೆ ಅಗಿರುವ ತೊಂದರೆ ಹಾಗೂ ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಿ ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಾಗಬೇಕು. ಈ ಸಂಬಂಧ ತಾವು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದಾಗಿಯೂ ರೇವಣ್ಣ ಹೇಳಿದರು.