ನವದೆಹಲಿ: ತೀರ್ಥಕ್ಷೇತ್ರಕ್ಕೆ ಪ್ರಸಿದ್ಧವಾಗಿರುವ ಉತ್ತರಾಖಂಡದ ಜೋಶಿಮಠದಲ್ಲಿ ಶೇ.65ರಷ್ಟು ಮನೆಗಳು ಭೂಕುಸಿತದ ಪ್ರಭಾವಕ್ಕೆ ಒಳಗಾಗಿವೆ. ಹೀಗೆಂದು ಕೇಂದ್ರ ಸರ್ಕಾರವೇ ಖಚಿತಪಡಿಸಿದೆ. ಜ.2ರಿಂದ ಈಚೆಗೆ ಜೋಶಿಮಠ-ಔಲಿ ರಸ್ತೆ ಭಾಗದಲ್ಲಿ ಪ್ರಧಾನವಾಗಿ ಮನೆಗಳಲ್ಲಿ ಭಾರೀ ಪ್ರಮಾಣದಲ್ಲಿ ಬಿರುಕು ಉಂಟಾಗಿತ್ತು. ಜತೆಗೆ ನೆಲದೊಳಗಿನಿಂದ ನೀರಿನ ಬುಗ್ಗೆಗಳು ಏಳುತ್ತಿದ್ದವು. ಹೀಗಾಗಿ, ತಾತ್ಕಾಲಿಕ ನೆಲೆಯಲ್ಲಿ 355 ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು.
ಈ ಬಗ್ಗೆ ಅಧ್ಯಯನ ನಡೆಸುವ ನಿಟ್ಟಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆ (ಸಿಬಿಆರ್‌ಐ), ವಿಶಸಂಸ್ಥೆಯ ತಜ್ಞರ ತಂಡ ಏ.25ರಿಂದ ಏ.28ರ ವರೆಗೆ ಅಲ್ಲಿ ಅಧ್ಯಯನ ನಡೆಸಿದ್ದವು.
ಜೋಶಿಮಠದ ವ್ಯಾಪ್ತಿಯಲ್ಲಿ ಇರುವ 2,152 ಮನೆಗಳ ಪೈಕಿ 1,403 ಮನೆಗಳಿಗೆ ಭೂಕುಸಿತದಿಂದಾಗಿ ಹಾನಿ ಉಂಟಾಗಿದೆ. ಈ ಪೈಕಿ 472 ಮನೆಗಳನ್ನು ಹೊಸತಾಗಿಯೇ ನಿರ್ಮಾಣ ಮಾಡಬೇಕಾಗಿದೆ. 931 ಮನೆಗಳನ್ನು ದುರಸ್ತಿ ಮಾಡಬೇಕಾಗಿದೆ. ಇನ್ನುಳಿದ ಮನೆಗಳನ್ನು ಭೂಕುಸಿತ ಮಾತ್ರವಲ್ಲ ಇತರ ಪ್ರಾಕೃತಿಕ ವಿಪತ್ತುಗಳನ್ನು ತಡೆಯಲು ಸಿದ್ಧವಾಗಿರುವಂತೆ ನಿರ್ಮಿಸಬೇಕಾಗಿದೆ ಎಂದು 35 ಮಂದಿ ತಜ್ಞರ ಸಮಿತಿಯ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.
ಕಾರಣಗಳೇನು?
– ನಿರ್ಮಾಣಕ್ಕೆ ಗುಣಮಟ್ಟ ಹೊಂದಿಲ್ಲದ ಕಟ್ಟಡ ಸಾಮಗ್ರಿಗಳ ಬಳಕೆ
– ಕಡಿದಾದ ಇಳಿಜಾರಿನಲ್ಲಿ ನಿರ್ಮಾಣ
– ನಗರ ಯೋಜನೆಗೆ ಅನುಗುಣವಾಗಿ ನಿರ್ಮಾಣವಾಗದ ಕಟ್ಟಡಗಳು