Advertisement

ನರೇಗಾ ವೇತನ ತಾರತಮ್ಯ: ಕಂಪ್ಯೂಟರ್ ಆಪರೇಟರ್ ಮೇಲೆ ಹಲ್ಲೆ

02:06 PM May 06, 2021 | Team Udayavani |

ರೋಣ (ಗದಗ): ನರೇಗಾ ಕಾಮಗಾರಿ ವೇತನ ಬಿಡುಗಡೆಯಲ್ಲಿ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾ.ಪಂ. ಕಂಪ್ಯೂ ಟರ್ ಆಪರೇಟರ್, ಸದಸ್ಯ ಸೇರಿ ನಾಲ್ಕೈದು ಜನರನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ತಾಲೂಕಿನ ಕುರಹಟ್ಟಿ ಗ್ರಾಮದಲ್ಲಿ ನಡೆದಿದೆ.

Advertisement

ಗ್ರಾ.ಪಂ. ಕಂಪ್ಯೂಟರ್ ಆಪರೇಟರ್ ಭೀಮ್ಸಿ ಹಡಪದ, ಗ್ರಾ.ಪಂ. ಸದಸ್ಯ ತಮ್ಮನಗೌಡ ಪಾಟೀಲ ಸೇರಿದಂತೆ ನಾಲ್ಕೈದು ಜನರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಕುರಹಟ್ಟಿ ಗ್ರಾ.ಪಂ. ವ್ಯಾಪ್ತಿಯ ಮುದೇನಗುಡಿ ಗ್ರಾಮಸ್ಥರು ಗುಂಪು ಕಟ್ಟಿಕೊಂಡು ಬಂದು ಗ್ರಾ.ಪಂ.ನಲ್ಲಿ ಗಲಾಟೆ ಮಾಡಿದ್ದಾರೆ. ನರೇಗಾ ಯೋಜನೆಯಡಿ ಕೆಲಸ ಮಾಡಿದವರಿಗೆ ವೇತನ ಬಿಡುಗಡೆಯಾಗಿಲ್ಲ. ನರೇಗಾ ಕೆಲಸಕ್ಕೆ ಬಾರದೇ ಇದ್ದರೂ, ಕಂಪ್ಯೂಟರ್ ಆಪರೇಟರ್ ತಮ್ಮ ಕುಟುಂಬಸ್ಥರು ಹಾಗೂ ಬೇಕಾದವರಿಗೆ ಕೂಲಿ ಹಣ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಿದೆ: ಸದಾನಂದ ಗೌಡ

ಈ ಕುರಿತು ಕಚೇರಿಯಲ್ಲಿದ್ದ ಇನ್ನಿತರೆ ಸಿಬ್ಬಂದಿಗಳು ವಿಚಾರಿಸುವ ಹೊತ್ತಿಗೆ ಉದ್ರಿಕ್ತ ಜನರು ಏಕಾಏಕಿ ಕಂಪ್ಯೂಟರ್ ಆಪರೇಟರ್ ಹಾಗೂ ಸದಸ್ಯನನ್ನು ಗ್ರಾ.ಪಂ. ಆವರಣಕ್ಕೆ ಎಳೆದು ತಂದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕಚೇರಿಯಲ್ಲಿ ಒಂದೆರಡು ಕುರ್ಚಿಗಳನ್ನು ತೂರಾಡಿ, ಧ್ವಂಸಗೊಳಿಸಿದ್ದಾರೆ.

Advertisement

ಅಲ್ಲದೇ, ಪಿಡಿಓ ಹಾಗೂ ಮತ್ತಿತರರನ್ನು ಎಳೆದಾಡಿ, ಕೊಠಡಿಯೊಂದರಲ್ಲಿ ಕೂಡಿಹಾಕಿದ್ದರು ಎನ್ನಲಾಗಿದೆ. ಘಟನೆಯಲ್ಲಿ ಗ್ರಾ.ಪಂ. ಕಚೇರಿಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ರೋಣ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿ ತಿಳಿಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next