Advertisement
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ನ್ಯಾಯಾಧೀಶರು, ಸರ್ಕಾರಿ ಅಭಿಯೋಜಕರು ಹಾಗೂ ವಕೀಲರುಗಳಿಗೆ 2017 18 ಮತ್ತು 18 19ನೇ ಸಾಲಿನ “ನ್ಯಾಯಾಂಗದಲ್ಲಿ ಕನ್ನಡ’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಆಂಗ್ಲ ಭಾಷೆಯಲ್ಲಿ ತೀರ್ಪು ಹೊರಬಿದ್ದಾಗ ಅದನ್ನು ಅರ್ಥೈಸಿಕೊಳ್ಳುವುದು ಕಷ್ಟ, ನ್ಯಾಯದಾನ ಪ್ರಕ್ರಿಯೆ ಯಾವ ರೀತಿ ನಡೆಯುತ್ತದೆ ಎನ್ನುವುದನ್ನು ಜನಸಾಮಾನ್ಯ ತಿಳಿದುಕೊಳ್ಳಲು ಸುಲಭವಾಗುವುದಿಲ್ಲ. ಜನ ಸಾಮಾನ್ಯರು ಆಡುವ ಭಾಷೆಯಾದ ಕನ್ನಡದಲ್ಲೇ ತೀರ್ಪು ನೀಡಿದರೆ ಜನರು ನ್ಯಾಯದಾನವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನ್ಯಾಯಾಧೀಶರು ಕನ್ನಡ ಕಲಿಯುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದು ತಿಳಿಸಿದರು.
Related Articles
Advertisement
ಸುಪ್ರೀಂಕೋರ್ಟ್ ಆಂಗ್ಲ ಭಾಷೆಯನ್ನು ಅಧಿಕೃತ ಭಾಷೆಯಂದು ಒಪ್ಪಿಕೊಂಡಿರುವುದರಿಂದ ಕೆಲವು ಸಂದರ್ಭದಲ್ಲಿ ಇಂಗ್ಲಿಷ್‌ನಲ್ಲಿಯೇ ತೀರ್ಪು ನೀಡುವುದು ಅನಿವಾರ್ಯವಾಗಿದೆ. ಎಷ್ಟೋ ಬಾರಿ ನಾವು ನೀಡಿದ ತೀರ್ಪುಗಳು ಕಕ್ಷಿದಾರರಿಗೂ ತಿಳಿಯುವುದಿಲ್ಲ. ಅದನ್ನು ವಕೀಲರು ಅರ್ಥೈಸಿಕೊಂಡು ವಿವರಿಸಲು ಸಾಕಷ್ಟು ಸಮಯಬೇಕು. ಅರ್ಥವಾಗುವ ಭಾಷೆಯಲ್ಲಿ ತೀರ್ಪು ನೀಡಿದರೆ ಇಂತಹ ತಾಪತ್ರಯ ಉಂಟಾಗುವುದಿಲ್ಲ ಎಂದರು.
ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕನ್ನಡಿಗರಿಗಿಂತ ಅನ್ಯ ರಾಜ್ಯದವರೇ ಉದ್ಯೋಗ ಗಿಟ್ಟಿಸಿಕೊಳ್ಳುತ್ತಿದ್ದು, ಗ್ರಾಮೀಣ ಭಾಗದ ರೈತರು ಮತ್ತು ಸಾರ್ವಜನಿಕರಿಗೆ ಕನ್ನಡದಲ್ಲಿ ವಿವರಿಸಿದೇ ಆಂಗ್ಲ ಭಾಷೆಯಲ್ಲಿ ತಿಳಿಸುತ್ತಿದ್ದು, ಸಾಲ ಸೇರಿದಂತೆ ಹಲವಾರು ಕಾರ್ಯಗಳಿಗೆ ಬೇರೆಯವರನ್ನು ಅವಲಂಬಿಸಬೇಕಾಗಿದೆ. ಬ್ಯಾಂಕುಗಳಲ್ಲಿ ಸ್ಥಳೀಯರಿಗೆ ಆದ್ಯತೆ ಎಂಬ ನಿಯಮ ರೂಪಿಸುವ ಅಗತ್ಯತೆ ಇದೆ ಎಂದು ಹೇಳಿದರು.
ಸಚಿವ ಸಿ.ಟಿ.ರವಿ ಮಾತನಾಡಿ, ಸ್ವಾತಂತ್ರ್ಯ ಬಂದು 7 ದಶಕಗಳೇ ಕಳೆದರೂ ಯಾವ ಕ್ಷೇತ್ರಗಳಲ್ಲಿಯೂ ಸ್ವಂತಿಕೆ ಇಲ್ಲದಂತಾಗಿದೆ. ಕನ್ನಡದಲ್ಲಿ ತೀರ್ಪು ನೀಡಿದ ನ್ಯಾಯಾಧೀಶರಿಗೆ ಇಂದು ಪ್ರಶಸ್ತಿ ನೀಡುತ್ತಿರುವುದು ಸಂತಸದ ವಿಚಾರವೇ ಆದರೂ, ನಮ್ಮದೇ ನಾಡಿನಲ್ಲಿ ಮಾತೃಭಾಷೆಯಲ್ಲಿ ತೀರ್ಪು ನೀಡಿದವರರಿಗೆ ಪ್ರಶಸ್ತಿ ನೀಡಬೇಕಾಗಿರುವುದು ದುರ್ದೈವದ ಸಂಗತಿ. ಮುಂದೊಂದು ದಿನ ಮನೆಯಲ್ಲಿ ಅಮ್ಮ ಎಂದು ಕರೆಯುವ ಮಕ್ಕಳನ್ನೂ ಸನ್ಮಾನಿಸಬೇಕಾದ ದಿನಗಳು ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಇದೇ ವೇಳೆ ಕನ್ನಡದಲ್ಲಿ ತೀರ್ಪು ನೀಡಿದ 72 ಮಂದಿ ನ್ಯಾಯಾಧೀಶರು, 10 ಮಂದಿ ಸರ್ಕಾರಿ ಅಭಿಯೋಜಕರು, 20 ಮಂದಿ ವಕೀಲರಿಗೆ “ನ್ಯಾಯಾಂಗದಲ್ಲಿ ಕನ್ನಡ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಯು 10 ಸಾವಿರ ರೂ. ನಗದು, ಪ್ರಶಸ್ತಿ ಫಲಕ, ಅಭಿನಂದನಾ ಪತ್ರ ಒಳಗೊಂಡಿದೆ.ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ. ಮುರಳಿಧರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕನ್ನಡದಲ್ಲಿಯೇ ತೀರ್ಪನ್ನು ಪ್ರಕಟಿಸಿದರೆ ತೀರ್ಪಿನ ಸಾಧಕ ಬಾಧಕಗಳ ಬಗ್ಗೆ ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ. ನ್ಯಾಯ ವ್ಯವಸ್ಥೆಯಲ್ಲೂ ಪಾರದರ್ಶಕತೆಯನ್ನು ತರುವ ಮೂಲಕ ಜನರಲ್ಲಿ ನ್ಯಾಯಾಂಗದ ಬಗೆಗೆ ವಿಶ್ವಾಸ ಮೂಡುತ್ತದೆ.- ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ. ಪ್ರಾಥಮಿಕ ಶಿಕ್ಷಣ ಭಾಷಾ ನೀತಿ ಪೋಷಕರ ವಿವೇಚನೆಗೆ ಬಿಟ್ಟ ಆಯ್ಕೆ ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಮರು ಪರಿಶೀಲನೆಗೆ ಅರ್ಜಿ ಹಾಕಬೇಕಿದೆ. ಈ ಕುರಿತಂತೆ ಸರ್ಕಾರ ಚಿಂತನೆ ನಡೆಸಲಿದೆ. ಸುಪ್ರೀಂಕೋರ್ಟ್‌ನ ಈ ತೀರ್ಪು ಎಲ್ಲ ಪ್ರಾದೇಶಿಕ ಭಾಷೆಗಳಿಗೆ ಭವಿಷ್ಯದಲ್ಲಿ ಮಾರಕವಾಗಲಿದೆ.
– ಸಿ.ಟಿ.ರವಿ, ಕನ್ನಡ ಮತ್ತು ಸಂಸ್ಕೃತಿ ಸಚಿವ.