ಮಂಗಳೂರು: ಸ್ಮಾರ್ಟ್‌ಸಿಟಿ ಹೆಸರಿಗೆ ತಕ್ಕಂತೆ ಮಂಗಳೂರು ಬೆಳೆದಿದ್ದು, ಶಾಸಕ ಡಿ. ವೇದವ್ಯಾಸ ಕಾಮತ್ ಅವರ ಮುತುವರ್ಜಿಯಿಂದ ಕಳೆದ ಐದು ವರ್ಷಗಳಲ್ಲಿ ನಗರದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳಾಗಿವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಬಡ್ಡಿ ಎಸೋಸಿಯೇಶನ್ ಜಿಲ್ಲಾ ಕಾರ್ಯದರ್ಶಿ ಹಾಗೂ ನಿವೃತ್ತ ದೈಹಿಕ ಶಿಕ್ಷಕ ಪುರುಷೋತ್ತಮ ಪೂಜಾರಿ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳಾ ಕ್ರೀಡಾಂಗಣ ಅಭಿವೃದ್ಧಿಯಾಗಿದ್ದು, ಕೇವಲ ಎರಡು ವರ್ಷಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಂಡು ಕ್ರೀಡಾಪಟುಗಳ ಮರು ಉಪಯೋಗಕ್ಕೆ ಲಭ್ಯವಾಗಿದೆ. ಅಲ್ಲೇ ಪಕ್ಕದಲ್ಲಿರುವ ಮಹಿಳಾ ಕ್ರೀಡಾ ವಸತಿ ನಿಲಯ ಮೇಲ್ದರ್ಜೆಗೇರಿಸಿದ್ದರಿಂದ ಹೆಣ್ಣುಮಕ್ಕಳಿಗೆ ಉಪಯೋಗವಾಗಲಿದೆ ಎಂದು ತಿಳಿಸಿದರು.
1.30 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಉರ್ವ ನ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕಬಡ್ಡಿ ಹಾಗೂ ಬ್ಯಾಡ್ಮಿಂಟನ್ ಕೋರ್ಟ್‌ನ ಸಂಪೂರ್ಣ ಜವಾಬ್ದಾರಿಯನ್ನು ವೇದವ್ಯಾಸ ಕಾಮತ್ ಅವರು ವಹಿಸಿಕೊಂಡಿದ್ದಾರೆ. ರಾಜ್ಯದಲ್ಲೇ ಮಾದರಿ ಒಳಾಂಗಣ ಕ್ರೀಡಾಂಗಣ ಮಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ. ಇದರಲ್ಲಿ ವಾಣಿಜ್ಯ ಮಳಿಗೆಗಳನ್ನು ತೆರೆದು ಆದಾಯಕ್ಕೂ ದಾರಿ ಮಾಡಿಕೊಡಲಾಗುತ್ತಿದೆ. ಇದು ಕರ್ನಾಟಕದಲ್ಲಿಯೇ ಅತ್ಯುತ್ತಮ ಯೋಜನೆಗಳಲ್ಲೊಂದು ಎಂಬ ಪ್ರಶಂಸೆಗೆ ಪಾತ್ರವಾಗಿದೆ ಎಂದು ಹೇಳಿದರು.
ಆಮೆಗತಿಯಲ್ಲಿ ಸಾಗುತ್ತಿದ್ದ ಮಂಗಳೂರಿನ ಮೂರು ದಶಕಗಳ ಅಂತಾರಾಷ್ಟ್ರೀಯ ಮಟ್ಟದ ಈಜು ಕೊಳದ ಕನಸು ಎಮ್ಮೆಕೆರೆಯ ಯೋಜನೆಯಿಂದ ಸಾಕಾರಗೊಳ್ಳುತ್ತಿದೆ. ಮಂಗಳೂರಿನ ಪುರಭವನ ಹಿಂದೆ ಕುಸ್ತಿ ಹಾಗೂ ಕಬಡ್ಡಿಗೆ ಅಂತಾರಾಷ್ಟ್ರೀಯ ಮಾದರಿಯಲ್ಲಿ ನೀಲನಕ್ಷೆ ತಯಾರಾಗಿದ್ದು, ಆಟದ ಮೈದಾನದ ಕೊರತೆ, ಸೂಕ್ತ ದೈಹಿಕ ಶಿಕ್ಷಕರ ಕೊರತೆ ಇರುವಲ್ಲಿನ ಕ್ರೀಡಾಸಕ್ತ ಅಭ್ಯರ್ಥಿಗಳಿಗೂ ಭವಿಷ್ಯದಲ್ಲಿ ಇದೊಂದು ಅದ್ಬುತ ವೇದಿಕೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದರು.
ಕ್ಷೇತ್ರದ ಕ್ರೀಡಾಪಟುಗಳಿಗೆ ರಾಜ್ಯ, ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ವೈಯಕ್ತಿಕ ನೆಲೆಯಲ್ಲಿ, ಮಹಾನಗರ ಪಾಲಿಕೆ ವ್ಯಾಪ್ತಿಯ ಅನುದಾನ ಕೊಡಿಸುವ ಮೂಲಕ ಹಾಗೂ ಇನ್ನಿತರ ಮೂಲಗಳಿಂದ ಪ್ರೋತ್ಸಾಹ ನೀಡುವ ಮೂಲಕ ಆರ್ಥಿಕವಾಗಿ ಹಿಂದುಳಿದ ಕ್ರೀಡಾಪಟುಗಳಿಗೆ ಕಾಮತ್ ಅವರು ಸಹಾಯ ಮಾಡಿದ್ದಾರೆ. ಶಾಸಕರು ಸ್ವತಃ ಕ್ರೀಡಾಪಟು ಆಗಿದ್ದರಿಂದಲೇ ಕ್ರೀಡೆಗೆ ಇಷ್ಟೆಲ್ಲಾ ಸಹಕಾರ ನೀಡಲು ಸಾಧ್ಯವಾಗಿದೆ ಎಂದು ವಿವರಿಸಿದರು.
ಭವಿಷ್ಯದಲ್ಲಿ ಸ್ಕೇಟಿಂಗ್ ಪಟುಗಳಿಗೆ ಸುಸಜ್ಜಿತ ವ್ಯವಸ್ಥೆ, ಫುಟ್ಬಾಲ್ ಕ್ಷೇತ್ರದ ಸಂತೋಷ್ ಟ್ರೋಫಿ, ಡುರಾಂಡ್ ಟ್ರೋಫಿಯಂತಹ ಪ್ರತಿಷ್ಠಿತ ಪಂದ್ಯಗಳು, ರಾಷ್ಟ್ರೀಯ, ಅಂತಾರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಹಾಗೂ ಕಬಡ್ಡಿ ಪಂದ್ಯಾವಳಿಗಳು ಮಂಗಳೂರಿನಲ್ಲಿ ನಡೆಯುವಂತಾಗಬೇಕು. ಅದಕ್ಕೆ ನಮ್ಮಲ್ಲಿನ ಸೌಲಭ್ಯಗಳು ಬೆಳೆಯಬೇಕು ಮತ್ತು ಕಾರ್ಯ ವೇಗ ಹೆಚ್ಚಬೇಕು. ಶಾಸಕ ವೇದವ್ಯಾಸ ಕಾಮತ್ ಅವರು ಆ ವೇಗಕ್ಕೆ ಸರಿಯಾಗಿ ಹೊಂದುವ ವ್ಯಕ್ತಿಯಾಗಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕುಸ್ತಿ ಎಸೋಸಿಯೇಶನ್ ಗೌರವಾಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ, ಅಂತಾರಾಷ್ಟ್ರೀಯ ತೀರ್ಪುಗಾರ ಪ್ರೇಮನಾಥ ಉಳ್ಳಾಲ್, ಬ್ಯಾಡ್ಮಿಂಟನ್ ಎಸೋಸಿಯೇಶನ್ ಕಾರ್ಯದರ್ಶಿ ಗಣೇಶ್ ರಾವ್ ಇದ್ದರು.