Advertisement

ಮೋದಿ ಆಡಳಿತದಲ್ಲಿ ಸಮಗ್ರ ಬದಲಾವಣೆ

05:10 PM Jun 01, 2022 | Team Udayavani |

ಚಿಕ್ಕಮಗಳೂರು: ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದು 8 ವರ್ಷ ಪೂರೈಸಿದೆ. ಮೋದಿ ಅವರ ಆಡಳಿತದಲ್ಲಿ ದೇಶದಲ್ಲಿ ಸಮಗ್ರ ಬದಲಾವಣೆ ಜೊತೆಗೆ ಜನರ ಚಿಂತನೆಗಳು ಬದಲಾಗಿವೆ ಎಂದು ಶಾಸಕ ಸಿ.ಟಿ. ರವಿ ತಿಳಿಸಿದರು.

Advertisement

ಮಂಗಳವಾರ ದೇಶಾದ್ಯಂತ ಪ್ರಧಾನಮಂತ್ರಿಗಳ 13 ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿ ಗಳೊಂದಿಗೆ ಸಂವಹನ ನಡೆಸುವ ಸಂಬಂಧ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಿಸಾನ್‌ ಸಮ್ಮಾನ್‌ ಯೋಜನೆಯಡಿ 12 ಕೋಟಿಗೂ ಹೆಚ್ಚು ಫಲಾನುಭವಿಗಳು ಪಡೆದಿದ್ದಾರೆ. ಜಿಲ್ಲೆಯಲ್ಲಿ 1,19,935 ರೈತರಿಗೆ 180.38 ಕೋಟಿ ರೂ. ಕೇಂದ್ರ ಸರ್ಕಾರದಿಂದ ನೀಡಲಾಗಿದೆ. ಪ್ರಧಾನಮಂತ್ರಿ ಅವಾಸ್‌ ಯೋಜನೆಯಡಿ ಜಿಲ್ಲೆಯ ನಗರ ಪ್ರದೇಶಗಳಲ್ಲಿ 3112 ಮನೆ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ 605 ಮನೆಗಳನ್ನು ನಿರ್ಮಿಸಲಾಗಿದೆ ಎಂದರು. 42 ಕೋಟಿ ರೂ. ಜನ್‌ಧನ್‌ ಖಾತೆಗಳಿಗೆ ಹಾಗೂ ಕಿಸಾನ್‌ ಸಮ್ಮಾನ್‌, ಮಾತೃವಂದನಾ ಮತ್ತು ಇತರೆ ಯೋಜನೆಗಳ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆಯಾಗಿದೆ. ಗರೀಬಿ ಕಲ್ಯಾಣ ಅನ್ನ ಯೋಜನೆ ಮೂಲಕ ದೇಶದ 84 ಕೋಟಿ ಬಡವರಿಗೆ 2.5 ವರ್ಷಗಳ ಕಾಲ ಒಬ್ಬ ವ್ಯಕ್ತಿಗೆ 5 ಕೆ.ಜಿ.ಯಂತೆ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡಿದೆ ಎಂದರು.

ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದ 22 ಸಾವಿರ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರಲಾಗಿದೆ. ಅಫ್ಘಾನಿಸ್ತಾನ, ಇರಾಕ್‌ ಹಾಗೂ ಸಿರಿಯಾ ದೇಶಗಳಲ್ಲಿ ಸಿಲುಕಿದ್ದ ಭಾರತೀಯ ಜೊತೆ ಇತರೆ ರಾಷ್ಟ್ರದವರಿಗೂ ಭಾರತ ಸಹಾಯಹಸ್ತ ನೀಡಿದೆ. ಜಗತ್ತಿನ ಹಿತ ಕಾಪಾಡುವ ರಾಷ್ಟ್ರ ಎಂಬುದನ್ನು ನಿರೂಪಿಸಿದೆ ಎಂದು ತಿಳಿಸಿದರು. ಜಿಪಂ ಸಿಇಒ ಜಿ.ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿ, ಜಲ ಜೀವನ್‌ ಮಿಷನ್‌ ಯೋಜನೆಯಡಿ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿರುವ 2.27ಲಕ್ಷ ಮನೆಗಳಲ್ಲಿ 1.29 ಲಕ್ಷ ಮನೆಗಳಿಗೆ ನೀರಿನ ಸೌಲಭ್ಯ ಒದಗಿಸಲಾಗಿದೆ. ಭಧ್ರಾ ನದಿಯಿಂದ 4 ತಾಲೂಕುಗಳಲ್ಲಿ ರೂ.1100 ಕೋಟಿ ವೆಚ್ಚದಲ್ಲಿ ಮನೆ- ಮನೆಗೆ ನೀರನ್ನು ಒದಗಿಸಲಾಗುತ್ತಿದೆ ಎಂದರು. ಆಯುಷ್ಮಾನ್‌ ಯೋಜನೆಯಡಿ ಜಿಲ್ಲೆಯಲ್ಲಿ 57,401 ಜನರ 26 ಕೋಟಿ ರೂ. ಆಸ್ಪತ್ರೆ ವೆಚ್ಚವನ್ನು ಪಾವತಿ ಮಾಡಲಾಗಿದೆ ಹಾಗೂ ಆಯುಷ್ಮಾನ್‌ ಕಾರ್ಡ್‌ ಹೊಂದಿರುವವರಿಗೆ ಪ್ರತಿ ವರ್ಷ 5ಲಕ್ಷ ಆರೋಗ್ಯ ವಿಮೆಯನ್ನು ನೀಡಲಾಗುತ್ತದೆ ಎಂದರು.

ಬೀದಿಬದಿ ವ್ಯಾಪಾರಿ ಮಂಜುನಾಥ್‌ ತಮ್ಮ ಅನಿಸಿಕೆ ವ್ಯಕ್ತಪಡಿಸಿ, ಹೀನಾಯ ಸ್ಥಿತಿಯಲ್ಲಿದ್ದ ಬೀದಿಬದಿ ವ್ಯಾಪಾರಿಗಳ ಬದುಕು ಸುಧಾರಿಸಿದ್ದು, ನಗರಸಭೆ ಎಲ್ಲ ವ್ಯಾಪಾರಿಗಳಿಗೂ ಗುರುತಿನ ಚೀಟಿ ನೀಡಲಾಗಿದೆ. ರೂ.10 ಸಾವಿರ ಸಹಾಯಧನವನ್ನು ನೀಡುತ್ತಿದೆ. ಜಿಲ್ಲೆಯಲ್ಲಿ ಫುಡ್‌ ಕೋರ್ಟ್‌ನ ಬೇಡಿಕೆ ಬಹಳ ಹಿಂದಿನಿಂದಲೂ ಇದ್ದು, ಅತಿ ಶೀಘ್ರದಲ್ಲಿ ಉತ್ತಮ ಸ್ಥಳದಲ್ಲಿ ನಾಗರಿಕರಿಗೆ ಅನುಕೂಲವಾಗುವಂತೆ ಸುಸಜ್ಜಿತ ಫುಡ್‌ಕೋರ್ಟ್‌ ನಿರ್ಮಿಸುವಂತೆ ಮನವಿ ಮಾಡಿದರು. ವಿಧಾನ ಪರಿಷತ್‌ ಸದಸ್ಯ ಎಂ.ಕೆ. ಪ್ರಾಣೇಶ್‌, ಜಿಲ್ಲಾಧಿಕಾರಿ ಕೆ.ಎನ್. ರಮೇಶ್‌ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next