Advertisement

ಅಂತರಗಂಗೆ ನಿಯಂತ್ರಣಕ್ಕೆ ಕಾಂಪೋಸ್ಟ್‌ ವಿಧಾನದ ಪರಿಹಾರ

10:06 PM Dec 01, 2019 | Sriram |

ವಿಶೇಷ ವರದಿ-ಕೋಟ: ಕರಾವಳಿಯಲ್ಲಿ ಕೃಷಿಭೂಮಿಗೆ ಪ್ರತಿ ವರ್ಷ ವಾಟರ್‌ಪರ್ನ್ ಎಂಬ ಅಂಗರಗಂಗೆ ಜಲಕಳೆ ಮಾರಕವಾಗಿ ಪರಿಣಮಿಸುತ್ತದೆ. ಆವಿ ಮಣ್ಣಿನ ಹೊಂಡ, ಕೆರೆ, ಹೊಳೆ, ತೋಡುಗಳಲ್ಲಿ ಹೇರಳವಾಗಿ ಕಂಡುಬರುವ ಈ ಕಳೆ ಮಳೆ ಬಿದ್ದಾಕ್ಷಣ ಹಿಗ್ಗಿ ಸಹಸ್ರ-ಸಹಸ್ರ ಸಂಖ್ಯೆಯಾಗಿ ನೆರೆ ನೀರಿನೊಂದಿಗೆ ಬೆರೆತು ಕೃಷಿ ಭೂಮಿಗೆ ಲಗ್ಗೆ ಇಟ್ಟು ಭತ್ತದ ಸಸಿಯನ್ನು ನಾಶಗೊಳಿಸುತ್ತದೆ ಹಾಗೂ ಜಲಸಸ್ಯ, ಜಲಚರಗಳಿಗೂ ಕಂಟಕವಾಗುತ್ತದೆ. ಹೀಗಾಗಿ ಇದನ್ನು ನಾಶಪಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಸಾಕಷ್ಟು ಹೋರಾಟ ನಡೆಸಿದ್ದರು ಮತ್ತು ಸರಕಾರದ ಮಟ್ಟದಲ್ಲೂ ಈ ಕುರಿತು ಚರ್ಚೆಯಾಗಿತ್ತು. ಆದರೆ ವಿಜ್ಞಾನಿಗಳು ಎಷ್ಟೇ ಪ್ರಯತ್ನಿಸಿದರೂ ರಾಸಾಯನಿಕ, ಜೈವಿಕ ವಿಧಾನದ ಮೂಲಕ ಇದನ್ನು ಸಮರ್ಪಕವಾಗಿ ನಿಯಂತ್ರಿಸಲು ಅಸಾಧ್ಯವಾಗಿತ್ತು. ಆದರೆ ಇದೀಗ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಭೌತಿಕ ವಿಧಾನದ ಮೂಲಕ ಇದನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಜೈವಿಕ ವಿಧಾನದಲ್ಲಿ ಯಶಸ್ವಿ
ಸರಕಾರದ ಸೂಚನೆಯಂತೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ| ನವೀನ್‌ ಅವರು ಸುಮಾರು ಎರಡು ವರ್ಷಗಳ ಅಂತರಗಂಗೆ ನಿಯಂತ್ರಣಕ್ಕೆ ರಾಸಾಯನಿಕ, ಜೈವಿಕ ವಿಧಾನವನ್ನು ಸಂಶೋಧನೆಗೊಳಪಡಿಸಿದ್ದರು. ಜೈವಿಕ ವಿಧಾನದಲ್ಲಿ ಸರೊràಬೇಗಸ್‌ ಸಾಲ್ವಿನಿಯಾ ಎಂಬ ದುಂಬಿಯನ್ನು ಬಳಸಿಕೊಂಡು ಪ್ರಯೋಗ ನಡೆಸಲಾಗಿತ್ತು. ಆದರೆ ಆ ವಿಧಾನ ವಿಫಲವಾಯಿತು. ಅನಂತರ ರಾಸಾಯನಿಕ ವಿಧಾನದಲ್ಲಿ ಸಸ್ಯನಾಶಕ ಗಳನ್ನು ಬಳಸಿ ಪ್ರಯೋಗ ಮಾಡಿದರೂ ಕೈಗೂಡಲಿಲ್ಲ. ಹೀಗಾಗಿ ಕೊನೆಯದಾಗಿ ಭೌತಿಕ ವಿಧಾನದಿಂದ ಎರೆಹುಳ ಕಾಂಪೋಸ್ಟ್‌ ಗೊಬ್ಬರ ತಯಾರಿಕೆಯ ಪ್ರಯೋಗ ನಡೆಸುತ್ತಿದೆ.

ಯಶಸ್ವಿಗೊಂಡ ಪ್ರಯೋಗ
ನೀರಿನಿಂದ ಅಂತರಗಂಗೆಯನ್ನು ಬೇರ್ಪಡಿಸಿ ಅಂತರಗಂಗೆ ಮತ್ತು ಸಗಣಿ ಗೊಬ್ಬರವನ್ನು ಮಿಶ್ರಣ ಮಾಡಿ ಆ ಮಿಶ್ರಣಕ್ಕೆ ಭಾರತೀಯ ಸಾವಯವ ಸಂಸ್ಥೆ ಬಿಡುಗಡೆ ಮಾಡಿರುವ ವೆಸ್ಟ್‌ ಡಿಕಂಪೋಸರ್‌ನ ದ್ರಾವಣವನ್ನು ಬೆರೆಸಿ 30 ದಿನಗಳವರೆಗೆ ಕೊಳೆಸಿ ಅನಂತರ ಎರೆಹುಳುಗಳನ್ನು ಬಿಟ್ಟಾಗ ಅಂತರಗಂಗೆ ಎರೆ ಕಾಂಪೋಸ್ಟ್‌ ಆಗಿ ಪರಿವರ್ತಿಸಲಾಗುತ್ತದೆ ಮತ್ತು ಈ ಕಂಪೋಸ್ಟ್‌ನಲ್ಲಿ ಸಾರಜನಕ, ರಂಜಕ, ಪೊಟ್ಯಾಶಿಯಂ ಅಂಶಗಳು ದೊರೆಯಲಿದ್ದು ಬೆಳೆ ಗಳಿಗೆ ಉತ್ತಮ ಸಾರವಾಗಲಿದೆ.

ಸಂಶೋಧನೆಗೆ ಸರಕಾರದ ಮೆಚ್ಚುಗೆ
ಪ್ರಸ್ತುತ ಮೀನುಗಾರಿಕೆ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ವಿಧಾನಪರಿಷತ್‌ ಸಭಾಪತಿ ಪ್ರತಾಪ್‌ ಚಂದ್ರ ಶೆಟ್ಟಿ ಅವರು ಅಂತರಗಂಗೆ ಸಮಸ್ಯೆಯನ್ನು ಈ ಹಿಂದೆ ವಿಧಾನಪರಿಷತ್‌ನಲ್ಲಿ ಪ್ರಸ್ತಾವಿಸಿದ್ದರು ಹಾಗೂ ಈ ವಿಚಾರ ಪರಿಷತ್‌ನ ಅರ್ಜಿ ಸಲಹಾ ಸಮಿತಿ ಸಭೆಯ ಮುಂದೆ ಚರ್ಚೆಗೊಳಪಟ್ಟು ನಿಯಂತ್ರಣಕ್ಕೆ ಸಂಶೋಧನೆ ನಡೆಸುವಂತೆ ತಿಳಿಸಲಾಗಿತ್ತು. ಅದರಂತೆ ನವೀನ್‌ ಅವರ ನೇತೃತ್ವದ ತಂಡ ಸಂಶೋಧನೆ ಕೈಗೊಂಡಿತ್ತು. ಪ್ರಸ್ತುತ ಪ್ರಕಟಗೊಂಡ ಫಲಿತಾಂಶವನ್ನು ಅರ್ಜಿ ಸಲಹಾ ಸಮಿತಿ ಹಾಗೂ ಕೃಷಿ ಇಲಾಖೆಯ ಗಮನಕ್ಕೆ ತಂದಿದ್ದು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರೈತ ಮಿತ್ರನಾಗಲಿದೆಯೇ
ರೈತ ಶತ್ರುವಾಗಿದ್ದ ಕಳೆ?
ಭೌತಿಕ ವಿಧಾನದ ಮೂಲಕ ಎರೆಕಾಂಪೋಸ್ಟ್‌ ಆಗಿ ಪರಿವರ್ತಿಸಿದಾಗ ಇದರಲ್ಲಿನ ಸಾರಜನಕ, ರಂಜಕ, ಪೊಟ್ಯಾಶಿಯಂ ಅಂಶಗಳು ಸೆಗಣಿ ಗೊಬ್ಬರಕ್ಕಿಂತ ಹೆಚ್ಚು ಪೋಷಕಾಂಶದಿಂದ ಕೂಡಿರಲಿವೆೆ. ಹೀಗಾಗಿ ಇದು ಬೆಳೆಗೆ ಉತ್ತಮ ಸಾರವಾಗುತ್ತದೆ. ಮುಂದಿನ ಒಂದು ವರ್ಷ ಬೆಳೆಗಳ ಮೇಲೆ ಇದರ ಪರಿಣಾಮವನ್ನು ಸಂಶೋಧನೆಗೊಳಪಡಿಸಲು ವಿಜ್ಞಾನಿಗಳು ತಯಾರಿ ನಡೆಸಿದ್ದು, ಒಂದು ವೇಳೆ ಎಲ್ಲಾ ಬೆಳೆಗಳಿಗೆ ಪರಿಣಾಮಕಾರಿ ಗೊಬ್ಬರವಾಗಿ ಬದಲಾದಲ್ಲಿ ರೈತ ಶತ್ರುವಾಗಿದ್ದ ಅಂತರಗಂಗೆ ಮುಂದೆ ರೈತಮಿತ್ರನಾಗಲಿದೆ.

Advertisement

ಪ್ರಯೋಗ ಕೈಗೂಡಿದೆ
ಅಂತರಗಂಗೆ ನಿರ್ವಹಣೆಗೆ ಇದುವರೆಗೆ ಸಮರ್ಪಕ ವಿಧಾನವಿರಲಿಲ್ಲ. ಆದರೆ ಇದೀಗ ನಾವು ನಡೆಸಿದ ಭೌತಿಕ ವಿಧಾನದಿಂದ ಇದರ ನಿಯಂತ್ರಣ ಸಾಧ್ಯವಾಗಿದೆ. ಮುಂದೆ ಹಲವು ಕಡೆಗಳಲ್ಲಿ ರೈತರೊಂದಿಗೆ ಮಾಹಿತಿ ಕಾರ್ಯಾಗಾರಗಳನ್ನು ನಡೆಸಿ ಅಂತರಗಂಗೆ ನಿಯಂತ್ರಣ ಕುರಿತು ತಿಳಿಸಿಕೊಡಲಿದ್ದೇವೆ.
-ಡಾ| ಎನ್‌.ನವೀನ್‌, ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ

Advertisement

Udayavani is now on Telegram. Click here to join our channel and stay updated with the latest news.

Next