Advertisement

ತ್ಯಾಜ್ಯ ಸಮಸ್ಯೆಗೆ ಜೈವಿಕ ಗೊಬ್ಬರ ಪರಿಹಾರ

09:25 AM Mar 21, 2018 | Team Udayavani |

ಕುಂದಾಪುರ: ಕಸ ಸಮಸ್ಯೆಯಲ್ಲಿ ಸ್ಥಳೀಯಾಡಳಿತಗಳು ಹೈರಾಣಾಗಿ ಹೋಗಿರುವ ಈ ಹೊತ್ತಿನಲ್ಲಿ ಕುಂದಾಪುರ ಪುರಸಭೆ ಕಸದಿಂದಲೇ ರಸ ತೆಗೆವ ಕೆಲಸಕ್ಕೆ ಕೈ ಹಾಕಿದೆ. ಇಲ್ಲಿ ವಿವಿಧ ಹೊಟೆಈಲ್‌, ಅಪಾರ್ಟ್‌ಮೆಂಟ್‌, ಕಲ್ಯಾಣಮಂಟಪ, ಮನೆಗಳಿಂದ ದಿನಕ್ಕೆ 10 ಟನ್‌ಗಿಂತಲೂ ಹೆಚ್ಚು ಕಸ ಸಂಗ್ರಹವಾಗುತ್ತಿದ್ದು, ಇದರಲ್ಲಿ ಹಸಿ ಕಸದಿಂದ 3 ಟನ್‌ ಜೈವಿಕ ಗೊಬ್ಬರ (ವಿಂಡ್ರೋ ಕಾಂಪೋಸ್ಟಿಂಗ್‌) ಉತ್ಪತ್ತಿಗೆ ಮುಂದಾಗಿದೆ.

Advertisement


ಕಸವನ್ನು ಗೊಬ್ಬರವಾಗಿ ಮಾಡುವ ಪೌಡರಿಂಗ್‌ ಯಂತ್ರ.

ಎಷ್ಟು ಕಸ ಸಂಗ್ರಹ?

ಪುರಸಭೆಯ ವ್ಯಾಪ್ತಿಯಲ್ಲಿ 10 ಅಪಾರ್ಟ್‌ಮೆಂಟ್‌ಗಳು, 60-70 ಹೊಟೇಲ್‌ಗ‌ಳು, 11 ಆಸ್ಪತ್ರೆಗಳು, 14 ಕಲ್ಯಾಣ ಮಂಟಪಗಳು (ಸಮಾರಂಭಗಳಿದ್ದಾಗ ಮಾತ್ರ), ತರಕಾರಿ ಮಾರುಕಟ್ಟೆಗಳು, ಈಗ ಶೇ.80 ರಷ್ಟು ಮನೆಗಳಿಂದ ಕಸ ಸಂಗ್ರಹಿಸಲಾಗುತ್ತಿದೆ. ಮುಂದೆ ಎಲ್ಲ ಮನೆಗಳಿಂದಲೂ ಕಸ ಸಂಗ್ರಹಿಸುವ ಯೋಜನೆಯಿದೆ. ಒಟ್ಟು ದಿನವೊಂದಕ್ಕೆ 13ರಿಂದ 14 ಟನ್‌ ಕಸ ಉತ್ಪತ್ತಿಯಾಗುತ್ತಿದೆ.

ಜೈವಿಕ ಗೊಬ್ಬರ ಉತ್ಪಾದನೆ 
ಎಲ್ಲ ಕಡೆಗಳಿಂದ ಟಿಪ್ಪರ್‌, ಟಾಟಾ ಏಸ್‌ ವಾಹನಗಳಲ್ಲಿ ಕಸಗಳನ್ನು ಸಂಗ್ರಹಿಸಿ, ಅದನ್ನು ಕಂದಾವರದ 15 ಎಕರೆ ಜಾಗದಲ್ಲಿ ನಿರ್ಮಿಸಿರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ರಾಶಿ ಮಾಡಲಾಗುತ್ತದೆ. ಬಳಿಕ ಅದನ್ನು ಹಸಿ ಕಸ ಹಾಗೂ ಒಣ ಕಸ ಎಂದು ವಿಂಗಡಿಸಿ, ಹಸಿ ಕಸದ ಮೇಲೆ 7 ದಿನ ನೀರು ಸಿಂಡಿಸುವುದರೊಂದಿಗೆ ಆವರ್ತಿಸಲಾಗುತ್ತದೆ. 35 ದಿನಗಳ ಬಳಿಕ ಅದನ್ನು ಕ್ಲೀನಿಂಗ್‌, ಶೆಡ್ಡಿಂಗ್‌, ಪೌಡರಿಂಗ್‌ ಯಂತ್ರಗಳಿಗೆ ಹಾಕಿದ ಅನಂತರ ಅದು ಗೊಬ್ಬರವಾಗಿ ಮಾರ್ಪಾಡಾಗುತ್ತದೆ. ಇಲ್ಲಿ 2 ವಿಧದ ಗೊಬ್ಬರ ಉತ್ಪತ್ತಿಯಾಗುತ್ತದೆ. ಗುಣಮಟ್ಟ 4 ಎಂಎಂಗಿಂತ ಮೇಲಿದ್ದರೆ ಗ್ರೇಡ್‌ ‘ಬಿ’ ಗೊಬ್ಬರ, ಅದಕ್ಕಿಂತ ಕೆಳಗಿದ್ದರೆ ಗ್ರೇಡ್‌ ‘ಎ’ ಗೊಬ್ಬರ ಸಿಗುತ್ತದೆ.

2.5 ಕೋ.ರೂ. ಖರ್ಚು
ಜಾಗದ ಸುತ್ತ ಆವರಣ, ಯಂತ್ರ, ಕಸ ಹಾಕಲು ಕಟ್ಟಡ, ಗೊಬ್ಬರ ಸಂಗ್ರಹಿಸಲು ಪ್ರತ್ಯೇಕ ರೂಂ, ಜೆಸಿಬಿ, ಯಂತ್ರಗಳ ಅಳವಡಿಕೆ ನೀರಿಗಾಗಿ ಬೋರ್‌ವೆಲ್‌ ವ್ಯವಸ್ಥೆ ಹೀಗೆ ಒಟ್ಟು 2.5 ಕೋ.ರೂ. ಖರ್ಚಾಗಿದೆ. ಈಗ ಜನರೇಟರ್‌ ಬಳಸಿ ಉಪಯೋಗಿಸಲಾಗುತ್ತಿದ್ದು, ಇನ್ನು ವಿದ್ಯುತ್‌ ಸಂಪರ್ಕ ಕಲ್ಪಿಸುವ ಕೆಲಸ ಪ್ರಗತಿಯಲ್ಲಿದೆ.

Advertisement


ಪ್ರಯೋಜನಗಳೇನು?

– ನಗರ ವ್ಯಾಪ್ತಿಯಲ್ಲಿ ಕಸ ಸಮರ್ಪಕ ವಿಲೇವಾರಿ ಸಾಧ್ಯ 
– ಕಡಿಮೆ ಕಾರ್ಮಿಕರ ಬಳಕೆ
– ಕಡಿಮೆ ಖರ್ಚಿನ ವಿಧಾನ 
– ಗುಣಮಟ್ಟ ಗೊಬ್ಬರ ಉತ್ಪತ್ತಿ

1 ಕೆ.ಜಿ.ಗೆ 2.50 ರೂ.
ಹೀಗೆ ದಿನಕ್ಕೆ ಎರಡೂವರೆ ಟನ್‌ನಿಂದ 3 ಟನ್‌ವರೆಗೆ ಜೈವಿಕ ಗೊಬ್ಬರ ಉತ್ಪತ್ತಿಯಾಗುತ್ತದೆ. ಇದು ಸಾವಯವ ಗೊಬ್ಬರ ಆಗಿರುವುದರಿಂದ ಎಲ್ಲ ತರಕಾರಿ ಗಿಡಗಳು, ಭತ್ತ ಅಥವಾ ಇನ್ನಿತರ ಯಾವುದೇ ಕೃಷಿ ಬೆಳೆಗಳಿಗೆ ಬಳಸಬಹುದು. ಈಗ 1 ಕೆ.ಜಿ. ಗ್ರೇಡ್‌ ‘ಎ” ಗೊಬ್ಬರಕ್ಕೆ 2.50 ರೂ. ಹಾಗೂ ಗ್ರೇಡ್‌ ‘ಬಿ” ಗೊಬ್ಬರಕ್ಕೆ 1.50 ರೂ. ನಂತೆ ಮಾರಾಟ ಮಾಡಲಾಗುತ್ತಿದೆ. ಪ್ರಾಥಮಿಕ ಹಂತದಲ್ಲಿ ಪ್ರಯೋಗಾರ್ಥವಾಗಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಕಳೆದ 4-5 ತಿಂಗಳಲ್ಲಿ 25 ಟನ್‌ಗೂ ಹೆಚ್ಚು ಗೊಬ್ಬರ ಮಾರಾಟ ಮಾಡಲಾಗಿದ್ದು, 50 ಸಾವಿರ ರೂ. ಸಂಗ್ರಹವಾಗಿದೆ.

ನಾಗರಿಕರ ಸಹಕಾರ ಅಗತ್ಯ
ಪುರಸಭೆಯಿಂದ ಕೋಟ್ಯಂತರ ಖರ್ಚು ಮಾಡಿ ಕಸ ವಿಲೇವಾರಿ ಎಲ್ಲ ಕೆಲಸ ಮಾಡಲಾಗುತ್ತಿದೆ. ನಾಗರಿಕರು ಸಹಕರಿಸಿದರೆ, ಈ ನಮ್ಮ ಪ್ರಯತ್ನ ಶೇ. 100 ಪ್ರತಶತ ಯಶಸ್ವಿಯಾದಂತೆ. ನಾಗರಿಕರು ಕಸ ಕೊಡುವಾಗ ಹಸಿ ಕಸ, ಒಣ ಕಸ ಪ್ರತ್ಯೇಕಿಸಿ ನೀಡಿದರೆ ಇಬ್ಬರು ಕಾರ್ಮಿಕರು ಹಾಗೂ 1 ಯಂತ್ರದ ಕೆಲಸ ಕಡಿಮೆಯಾಗುತ್ತದೆ. 
– ಕೆ. ಗೋಪಾಲಕೃಷ್ಣ ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ

— ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next