Advertisement

ಫ‌ಲಪುಷ್ಪ ಪೂರಕ ಕಲೆಗಳ ಪ್ರದರ್ಶನ

06:37 AM Jan 20, 2019 | Team Udayavani |

ಬೆಂಗಳೂರು: ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದ ಅಂಗವಾಗಿ ಲಾಲ್‌ಬಾಗ್‌ನ ಡಾ.ಎಂ.ಎಚ್‌.ಮರಿಗೌಡ ಸ್ಮಾರಕ ಸಭಾಂಗಣದಲ್ಲಿ ಎರಡು ದಿನಗಳ ಪೂರಕ ಕಲೆಗಳ ಪ್ರದರ್ಶನ ಹಮ್ಮಿಕೊಂಡಿದ್ದು, ಶಾಸಕಿ ಸೌಮ್ಯ ರೆಡ್ಡಿಯವರು ಶನಿವಾರ ಚಾಲನೆ ನೀಡಿದರು.

Advertisement

ಈ ಪ್ರದರ್ಶನಲ್ಲಿ ಬಿಡಿಎ, ಬಿಬಿಎಂಪಿ, ರಕ್ಷಣಾ ಇಲಾಖೆ ಸಂಸ್ಥೆಗಳು, ವಿವಿಧ ಬ್ಯಾಂಕ್‌ಗಳು, ಖಾಸಗಿ ಹೋಟೆಲ್‌ಗ‌ಳು, ಆಸ್ಪತ್ರೆಗಳು, ಶಾಲಾ ಕಾಲೇಜುಗಳು, ವಿಪ್ರೊ, ಸಿಸ್ಕೊ, ಇನ್ಫೋಸಿಸ್‌ನಂತಹ ಸಂಸ್ಥೆಗಳ ತೋಟಗಾರಿಕಾ ವಿಭಾಗಗಳು ಭಾಗವಹಿಸಿ ವಿವಿಧ ಹಣ್ಣುಗಳು, ತರಕಾರಿ ಹಾಗೂ ಹೂವುಗಳನ್ನು ಬಳಸಿ ವಿಶೇಷ ಕಲಾಕೃತಿಗಳನ್ನು ನಿರ್ಮಿಸಿದ್ದವು.

ಪೂರಕ ಕಲೆಗಳ ಪ್ರದರ್ಶನದಲ್ಲಿ 450 ಕಲಾಕೃತಿಗಳಿದ್ದು, ಪುಷ್ಪ ಜೋಡಣೆ, ತರಕಾರಿ ಕೆತ್ತನೆ, ಡಚ್‌ ಮಾದರಿ ವಿನ್ಯಾಸ ಹಾಗೂ ಒಣ ಹೂವಿನ ಜೋಡಣೆ, ಥಾಯ್‌ ಆರ್ಟ್‌ ಪ್ರಮುಖ ಆಕರ್ಷಣೆಯಾಗಿದ್ದವು. ಮುಖ್ಯವಾಗಿ ಸಿಹಿಕುಂಬಳ ಕಾಯಿಯಲ್ಲಿ ಚಿತ್ತಾರ ಬಿಡಿಸಿ ಗಣರಾಜ್ಯೋತ್ಸವ ಶುಭಾಶಯಗಳನ್ನು ಕೋರಲಾಗಿತ್ತು.

ಬದನೆಕಾಯಿ ಮತ್ತು ಸೋರೆಕಾಯಿಯಲ್ಲಿ ಹೆಣ್ಣು-ಗಂಡಿನ ಮೂರ್ತಿ, ಕ್ಯಾರೆಟ್‌ನಲ್ಲಿ ವಿವಿಧ ಹೂವು, ಪಕ್ಷಿಗಳು, ಕಲ್ಲಂಗಡಿ ಹಣ್ಣಿನಲ್ಲಿ ಹೂಬುಟ್ಟಿ, ತೆಂಗಿನ ಗರಿಗಳಲ್ಲಿ ಕಲ್ಯಾಣ ಮಂಟಪ, ಮೂಲಂಗಿಯಲ್ಲಿ ಶಂಕು ಹೀಗೆ ಬಗೆ ಬಗೆಯ ಹಣ್ಣು-ತರಕಾರಿಗಳಿಂದ ಹಲವು ಪ್ರಕಾರದ ಕಲೆಗಳು ನಿರ್ಮಿಸಲಾಗಿದೆ. ಇನ್ನು ಪ್ರದರ್ಶನದಲ್ಲಿ ಕಲಾವಿದರ ಕೈಚಳಕವನ್ನು ಕಂಡು ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ನಿರ್ದೇಶಕ ವೈ.ಎಸ್‌. ಪಾಟೀಲ್‌, ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್‌, ಉಪನಿರ್ದೇಶಕ ಎಂ.ಆರ್‌. ಚಂದ್ರಶೇಖರ್‌, ಮೈಸೂರು ಉದ್ಯಾನ ಕಲಾಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇನ್ನು ಈ ಪೂರಕ ಕಲೆಗಳ ಪ್ರದರ್ಶನ ಪ್ರದರ್ಶನವು ಭಾನುವಾರ ಸಹ ನಡೆಯಲಿದೆ.

Advertisement

ವಾರಾಂತ್ಯ ಹೆಚ್ಚು ಮಂದಿ ಭೇಟಿ: ವಾರಾಂತ್ಯ ಹಿನ್ನಲೆ ಲಾಲ್‌ಬಾಗ್‌ನ ಫಲಪುಷ್ಪ ಪ್ರದರ್ಶನಕ್ಕೆ 20 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದಾರೆ. ಅದರಲ್ಲಿ 5 ಸಾವಿರಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳಿದ್ದರು. ಈ ಬಾರಿ ಫ‌ಲಪುಷ್ಪ ಪ್ರದರ್ಶನವನ್ನು ಗಾಂಧಿಜೀ ಸಮರ್ಪಣೆ ಮಾಡಿರುವ ಹಿನ್ನೆಲೆ ಅವರ ಕುರಿತ ಸಾಕಷ್ಟು ಮಾಹಿತಿಯನ್ನು ಪ್ರದರ್ಶನದಲ್ಲಿ ತೋಟಗಾರಿಕೆ ಇಲಾಖೆ ನೀಡಿದೆ.

ಹೀಗಾಗಿ ಪ್ರದರ್ಶನಕ್ಕೆ ಬಂದ ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ರಾಜ್‌ಘಾಟ್‌, ಸಬರಮತಿ ಆಶ್ರಮ ಸೇರಿದಂತೆ ಐತಿಹಾಸಿಕ ಸ್ಥಳಗಳ ಕುರಿತ ಕಲಾ ಕೃತಿಗಳ ಮುಂದೆ ನಿಂತು ವಿವರಿಸುವ ದೃಶ್ಯ ಸಾಕಷ್ಟು ಕಡೆ ಕಂಡುಬಂದವು. ಮಕ್ಕಳು ಮೂರು ಕೋತಿಗಳ ಕಲಾಕೃತಿ ಹಾಗೂ ಗಾಂಧಿ ಕನ್ನಡಕ ಬಳಿ ನಿಂತು ಛಾಯಾಚಿತ್ರ ತೆಗೆಸಿಕೊಂಡು ಖುಷಿಪಟ್ಟರು.

ಖಾದಿ ವಸ್ತುಗಳು ಪ್ರದರ್ಶನ ಹಾಗೂ ಮಾರಟ ಮಳಿಗೆಗೆ ಹಲವಾರು ಮಂದಿ ಭೇಟಿ ನೀಡಿ ಖಾದಿ ಬಟ್ಟೆಗಳನ್ನು ಖರೀದಿಸಿದರು. ಇನ್ನು ಫ‌ಲಪುಪ್ಪ ಪ್ರದರ್ಶನ ಕಣ್ತುಂಬಿಕೊಂಡ ಬಳಿಕೆ ಪ್ರವಾಸಿಗರು ಉದ್ಯಾನದ ಕೆರೆಗೆ ಭೇಟಿ ನೀಡಿ ಅಲ್ಲಿ ಬಳಿ ನಿರ್ಮಿಸಿರುವ ಕೃತಕ ಜಲಪಾತದ ಹಾಗೂ ಬಹು ಎತ್ತರಕ್ಕೆ ಚಿಮ್ಮುವ ಕಾರಂಜಿ ವೀಕ್ಷಿಸುತ್ತಿದ್ದರು.

ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದ ಅಂಗಾವಗಿ ಎಎಸ್‌ಬಿ ಡೆವಲಪರ್  ಅಂಡ್‌ ಪ್ರಮೋಟರ್  ಜ.20ರಂದು ಮಕ್ಕಳಿಗೆ ಗಾಂಧಿ ಆತ್ಮಚರಿತ್ರೆಯನ್ನು ಬೆಳಗ್ಗೆ ಗಾಜಿನ ಮನೆಯಲ್ಲಿ  ಉಚಿತವಾಗಿ ವಿತರಿಸಲಿದ್ದಾರೆ ಎಂದು ಲಾಲ್‌ಬಾಗ್‌ ಅಧಿಕಾರಿಗಳು ಮಾಹಿತಿ ನೀಡಿದರು.

ಮೊದಲ ದಿನಕ್ಕಿಂತ ಎರಡನೇ ದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಪ್ರದರ್ಶನಕ್ಕೆ ಆಗಮಿಸಿದ್ದಾರೆ. 17,050 ವಯಸ್ಕರು, 5,780 ಮಕ್ಕಳು ಭಾಗವಹಿಸಿದ್ದು, ಒಟ್ಟು 10.6 ಲಕ್ಷ ರೂ.ಸಂಗ್ರಹವಾಗಿದೆ. ಭಾನುವಾರ ಇನ್ನು ನಿರೀಕ್ಷೆ ಹೆಚ್ಚಿದೆ.
-ಎಂ.ಆರ್‌.ಚಂದ್ರಶೇಖರ್‌, ಉಪನಿರ್ದೇಶಕರು ಲಾಲಾಬಾಗ್‌ ಉದ್ಯಾನ

Advertisement

Udayavani is now on Telegram. Click here to join our channel and stay updated with the latest news.

Next