Advertisement

ಭಾರತೀಯ ಆಹಾರ ಕ್ರಮದ ಅನುಸರಣೆ ಆರೋಗ್ಯಕ್ಕೆ ಅನಿವಾರ್ಯ

11:42 PM Jun 07, 2021 | Team Udayavani |

ಭಾರತೀಯ ಆಹಾರ ಪದ್ಧತಿಯನ್ನು ಗಾಳಿಗೆ ತೂರಿರುವುದರಿಂದಲೇ ಆರೋಗ್ಯ ಸಂಬಂಧಿ ಅನೇಕ ಸಮಸ್ಯೆಗಳು ಕಂಡು ಬರುತ್ತಿವೆ. ಆದ್ದರಿಂದ ಆಹಾರವನ್ನು ಸರಿಯಾದ ಕ್ರಮದಲ್ಲಿ ಸ್ವೀಕರಿಸಬೇಕಾದ ಅನಿವಾರ್ಯ ಸ್ಥಿತಿ ಇದೆ ಎಂದು ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಪ್ರಕಾಶ ನಾಯ್ಕ ಮತ್ತು ಉದ್ಯಾವರ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯ ಅಗದತಂತ್ರ ವಿಭಾಗ ಮುಖ್ಯಸ್ಥೆ ಡಾ| ಚೈತ್ರಾ ಹೆಬ್ಟಾರ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

“ಆರೋಗ್ಯ ವೃದ್ಧಿ- ಆಹಾರ ಕ್ರಮ’ ಕುರಿತು “ಉದಯವಾಣಿ’ ಸೋಮವಾರ ಆಯೋಜಿಸಿದ ಫೋನ್‌ ಇನ್‌ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ಹಿತ-ಮಿತ-ಋತುಭುಕ್‌
ಹಿತಭುಕ್‌-ಮಿತಭುಕ್‌-ಋತು ಭುಕ್‌ ಎಂಬ ಕಲ್ಪನೆ ಇತ್ತು. ಹಿತವಾಗಿ ತಿನ್ನ ಬೇಕು, ಮಿತವಾಗಿ ತಿನ್ನಬೇಕು, ಆಯಾ ಕಾಲಕ್ಕೆ ಸೂಕ್ತವಾದ (ಋತುಮಾನಕ್ಕೆ ತಕ್ಕಂತೆ ಪ್ರತೀ ಎರಡು ತಿಂಗಳಿಗೊಮ್ಮೆ ಆಹಾರವನ್ನು ಹವಾಮಾನಕ್ಕೆ ಸರಿಯಾಗಿ ಬದಲಿಸಬೇಕು) ಸೇವಿಸಬೇಕು. ಅಕ್ಕಿ, ಹೆಸರು, ತುಪ್ಪ, ಹಾಲು, ಅಶ್ವಗಂಧ, ಶತಾವರಿ, ಬೆಚ್ಚನೆಯ ನೀರನ್ನು ಹೆಚ್ಚು ಬಳಸಬೇಕು. ತಿಮರೆಯನ್ನು ಮಧ್ಯಾಹ್ನ ದೊಳಗೆ ಸೇವಿಸಬೇಕು. ಸಸ್ಯದ ಗುಣ ನಮ್ಮ ಶರೀರಕ್ಕೆ ಅಗತ್ಯವೆಂದೇ ಹಲಸು, ಕೇದಗೆ, ಗೋಳಿ ಎಲೆಯಲ್ಲಿ ಗುಂಡ ಮಾಡುವುದು, ಬಾಳೆ ಎಲೆಯಲ್ಲಿ ಊಟ ಮಾಡುವ ಕ್ರಮ ಬಂದಿದೆ ಎಂದರು.
ಮಾಂಸಾಹಾರವನ್ನು ಸ್ವೀಕರಿಸ ಬಹುದು. ಆದರೆ ಪ್ರಥಮ ಪ್ರಾಶಸ್ತ್ಯ ಸಸ್ಯಾ ಹಾರಕ್ಕೆ ಇರಲಿ. ಸಸ್ಯಾಹಾರ ಹೆಚ್ಚು ಸಂಪೂರ್ಣ

ಆಹಾರ. ಒಂದುವೇಳೆ ಮಾಂಸಾಹಾರ ಅನಿವಾರ್ಯವೆನಿಸಿದರೆ ಉತ್ತಮ ಗುಣಮಟ್ಟದ ಮಾಂಸ ಸೇವಿಸಿ. ಉದಾಹರಣೆಗೆ ನಾಟಿ ಕೋಳಿಯನ್ನು ಬಳಸಿ. ನಂಜಿನ, ಕಫ‌ ಹೆಚ್ಚಿಸುವ ಜಾರೆ, ಚಿಪ್ಪಿನ ಮೀನುಗಳನ್ನೂ ವರ್ಜಿಸಿ. ಮಾಂಸ ದಲ್ಲಿ ಆಡಿನ ಮಾಂಸ ಉತ್ತಮ ಎಂದರು.

ಮಾನಸಿಕ ಒತ್ತಡ- ಅನಾರೋಗ್ಯ
ರಕ್ತದೊತ್ತಡ, ಮಧುಮೇಹಕ್ಕೆ ಮಾನ ಸಿಕ ಒತ್ತಡವೂ ಒಂದು ಕಾರಣ ಎಂಬುದು ಸಾಬೀತಾಗಿದೆ. ಇದಕ್ಕೂ ಮೊದಲು ಬಿಳಿ ಬಣ್ಣದ ಸಕ್ಕರೆ, ಉಪ್ಪು, ವಿಶೇಷವಾಗಿ ಮೈದಾವನ್ನು ಬಿಡಿ. ಗೋಧಿಯಿಂದ ಮೈದಾವನ್ನು ತಯಾರಿಸುವಾಗ ಬ್ಲೀಚಿಂಗ್‌ ಪೌಡರ್‌ ಬಳಸುತ್ತಾರೆ. ಇದನ್ನು ವರ್ಜಿಸಬೇಕು. ಹಾಗೆಯೇ ರಸ್ತೆ ಬದಿ ಸಿಗುವ ಜಂಕ್‌ ಫ‌ುಡ್‌, ಕೃತಕ ಬಣ್ಣ ಬಳಸಿದ ಅಹಾರಗಳನ್ನು ತ್ಯಜಿಸಿ. ಹೀಗೆ ಹೇಳಿದರೆ ಲಾಬಿಗಳು ಸುಮ್ಮನಿರುವುದಿಲ್ಲ. ಸಾಮಾನ್ಯ ಉಪ್ಪಿನ ಬದಲು ಸೈಂಧವ ಲವಣ (ಸೈಂಧುಪ್ಪು) ಬಳಸಿ. ಥೈರಾಯ್ಡ ಸಮಸ್ಯೆಯವರು ಸೈಂಧುಪ್ಪು ಬಳಸಬೇಡಿ. ಯಾವುದನ್ನೇ ತಿಂದರೂ ಜೀರ್ಣ ಕ್ರಿಯೆ ಸರಿಯಾಗಿ ಆಗಬೇಕು. ಬೆಳಗ್ಗೆಯ ನಡಿಗೆ, ಹಸಿರು ತರಕಾರಿಗಳನ್ನು ಹೆಚ್ಚು ಬಳಸಿ. ಯೋಗಾಸನ, ಪ್ರಾಣಾಯಾಮ ಸೂಕ್ತ. ನೇರಳೆ, ಪೇರಳೆ, ದಾಳಿಂಬೆ, ಮಾವಿನ ಮರದ ಚಿಗುರನ್ನು ಸ್ವಲ್ಪ ಉಪ್ಪು, ತುಪ್ಪ, ಜೀರಿಗೆ ಜತೆ ಜಜ್ಜಿ ಜಗಿದು ನೀರು ನುಂಗಿದರೆ ವಾಂತಿ ಮತ್ತು ಭೇದಿ ನಿಯಂತ್ರಣಕ್ಕೆ ಬರುತ್ತದೆ. ಅರಳು, ಕಾಳುಮೆಣಸು, ಸೈಂಧುಪ್ಪು ಸಹಿತ ತಿಂದರೆ ವಾತಿ, ಭೇದಿ ನಿಲ್ಲುತ್ತದೆ. ಅಜೀರ್ಣ, ಅಸಿಡಿಟಿ, ಬಾಯಿ ವಾಸನೆಗೂ ಇದು ಪರಿಣಾಮಕಾರಿ. ಹಸಿ ತರಕಾರಿ, ಮೊಳಕೆ ಬರಿಸಿದ ಕಾಳು ಗಳ ಸೇವನೆ ಮಲಬದ್ಧತೆ, ಬೊಜ್ಜು, ಮಧುಮೇಹ ಗಳನ್ನು ನಿವಾರಿಸುತ್ತದೆ.

Advertisement

ಧಾನ್ಯ, ತರಕಾರಿ, ಹಾಲು, ತುಪ್ಪವನ್ನು ಮನೆ ಪರಿಸರದಲ್ಲಿ ಉತ್ಪಾದಿಸಿದ್ದನ್ನೇ ಸ್ವೀಕರಿಸಿ. ಇದರರ್ಥ ತಮ್ಮ ಜಮೀನಿನಲ್ಲಿ ಬೆಳೆಸಿ. ಬಣ್ಣಬಣ್ಣದ ತಿಂಡಿಗಳನ್ನು ತ್ಯಜಿಸಿ. ಕಹಿ, ಖಾರ, ಒಗರು, ಸಿಹಿ ಇತ್ಯಾದಿ ಷಡ್ರಸದ ಪರಿಪೂರ್ಣ ಆಹಾರ ವನ್ನು ಸ್ವೀಕರಿಸಿ. ಪೀಳಿಗೆ ಯಿಂದ ಪೀಳಿಗೆ ಯಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಯಾಗುತ್ತಿದೆ. ಹೀಗಾಗಿ ಅನಿವಾರ್ಯ ವಾಗಿ ವಿಟಮಿನ್‌ ಸಿ ಮಾತ್ರೆಯನ್ನು ಬಳಸುವಂತಾಗಿದೆ. ಸೀಬೆ ಹಣ್ಣು, ನೆಲ್ಲಿಕಾ ಯಿಯಲ್ಲಿ ವಿಟಮಿನ್‌ ಸಿ ಹೆಚ್ಚಿದೆ. ಮುಸುಂಬಿ ಹಣ್ಣು ತಿನ್ನುವಾಗ ಒಳಗಿನ ಸಿಪ್ಪೆ ಸಹಿತ ತಿನ್ನಬೇಕು.

ತಿಂಬಾಕತನ, ವಿಷಮಾಶನ, ವಿರುದ್ಧ ಆಹಾರ
ಅಧ್ಯಶನ (ಪದೇ ಪದೇ ಆಹಾರ ಸೇವಿಸುತ್ತಿರುವುದು), ವಿಷಮಾಶನ (ಸಮಯವಿಲ್ಲದೆ ಎಷ್ಟೆಷ್ಟೋ ಹೊತ್ತಿಗೆ ತಿನ್ನುವುದು) ಮತ್ತು ವಿರುದ್ಧ ಆಹಾರ (ಕೆಲವು ಆಹಾರ ಜತೆ ಸೇರಿಸಿದರೆ ವಿಷ) ಸೇವನೆ ನಮ್ಮ ಸಮಸ್ಯೆ. ಮಾಂಸದ (ಮೀನು ಸಹಿತ) ಊಟ ಮಾಡಿದ ಬಳಿಕ, ಸಿರಿಧಾನ್ಯದ ಸೇವನೆ ಬಳಿಕ ಹಾಲು ಸ್ವೀಕರಿಸುವುದು, ಚಪಾತಿ ಮೃದುವಾಗಿರಬೇಕೆಂದು ಗೋಧಿ ಹಿಟ್ಟಿನ ಜತೆ ಹಾಲು ಬಳಸುವುದು, ಹಾಲು ಮತ್ತು ಆಮ್ಲ ಪದಾರ್ಥ (ಹುಳಿಯುಕ್ತ ಹಣ್ಣು ಇತ್ಯಾದಿ) ಮಿಶ್ರಣ ಮಾಡುವುದು ಒಳ್ಳೆಯದಲ್ಲ. ಇವು ಜೀರ್ಣಕ್ರಿಯೆ ಹೊತ್ತಿಗೆ ವಿಷಾಂಶಗಳನ್ನು ಸೃಷ್ಟಿಸುತ್ತವೆ. ರಾತ್ರಿ ಲಘು ಆಹಾರ ಸೇವಿಸಬೇಕು. ಜೇನುತುಪ್ಪ ಮತ್ತು ತುಪ್ಪ ಸಮ ಪ್ರಮಾಣದಲ್ಲಿ ಸೇರಿಸಿ ಬಳಸಬಾರದು. ಹೆಸರು ಬೇಳೆ ಮತ್ತು ಹಾಲು ಕೂಡಬಹುದು, ಇಡೀ ಹೆಸರು ಕಾಳು (ಮೊಳಕೆ ಬರುವ ಎಲ್ಲ ಧಾನ್ಯ)- ಹಾಲು ಸೇರಿಸಬಾರದು. ನಾಟಿ ಕೋಳಿ ಪದ್ಧತಿ ಸೂಕ್ತ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಸಬಹುದು. ನವಣೆ, ಸಿರಿಧಾನ್ಯ ಉತ್ತಮ ಶಕ್ತಿವರ್ಧಕ. ಊಟದ ಬಳಿಕ ಐಸ್‌ಕ್ರೀಂ ಬಳಕೆ ಸರಿಯಲ್ಲ. ಊಟದ ಕೊನೆಯಲ್ಲಿ ಮಜ್ಜಿಗೆ ಉತ್ತಮ, ಮಜ್ಜಿಗೆ ಆಗದವರಿಗೆ ಹಾಲು ಉತ್ತಮ. ರಾತ್ರಿ ಮೊಸರು, ಮಜ್ಜಿಗೆ ಸೇವನೆ ಬೇಡ, ಬೇಸಗೆಯಲ್ಲಿ ಮಧ್ಯಾಹ್ನವೂ ಬೇಡ.

ಅಗದತಂತ್ರ
ಆಹಾರ ಧಾನ್ಯ ಉತ್ಪಾದನೆಯಿಂದ ಹಿಡಿದು ಅಡುಗೆ ತಯಾರಿವರೆಗೆ ವಿವಿಧ ಹಂತಗಳಲ್ಲಿ ವಿಷಾಂಶಗಳು ಸೇರುತ್ತವೆ. ಮಾಂಸ ಬಳಕೆಯಲ್ಲೂ ಪ್ರಾಣಿಗಳು ಆರೋಗ್ಯವಾಗಿರಬೇಕು. ಸಸ್ಯಾಹಾರದ ಉತ್ಪಾದನೆಯಲ್ಲಿ ರಾಸಾಯನಿಕ ಗೊಬ್ಬರದಿಂದ ಹಿಡಿದು ತೂಕಕ್ಕಾಗಿ ಚುಚ್ಚುಮದ್ದು ಕೊಟ್ಟು ಬೆಳೆಸುತ್ತಿರುವ ಪ್ರಾಣಿಗಳವರೆಗೆ ಮತ್ತು ನೀರು, ಗಾಳಿ ಸಹಿತ ವಾತಾವರಣದಲ್ಲಿ ವಿಷಾಂಶಗಳು ಸೇರುತ್ತವೆ. ರೋಗರಹಿತ ವ್ಯವಸ್ಥೆಯ ಅಭ್ಯಾಸ-ಅನ್ವಯ ಆಯುರ್ವೇದದಲ್ಲಿ ಇದೆ.

ರೋಹಿಣಿ ಬಾಲಚಂದ್ರ, ಕರಂಬಳ್ಳಿ
-  ಆಯುಷ್‌ ಆಸ್ಪತ್ರೆಗಳಲ್ಲಿ ಯುನಾನಿಗೆ ಚಿಕಿತ್ಸೆ ಸಿಗುತ್ತದೆಯೇ?
-ಆಯುಷ್‌ ಆಸ್ಪತ್ರೆಗಳಲ್ಲಿ ಪಂಚಕರ್ಮ, ಯುನಾನಿ ಚಿಕಿತ್ಸೆ, ಹೋಮಿಯೋಪತಿ ಚಿಕಿತ್ಸೆಗಳು ಲಭ್ಯವಿವೆ. ಆದರೆ ಕೋವಿಡ್‌ ಕಾರಣದಿಂದಾಗಿ ಸದ್ಯಕ್ಕೆ ಪಂಚಕರ್ಮ ಚಿಕಿತ್ಸೆ ಲಭ್ಯವಿಲ್ಲ.

ಮುಖ್ಯಪ್ರಾಣ ಆಚಾರ್ಯ, ಕಿನ್ನಿಗೋಳಿ
  ಮೂತ್ರದ ಕಾಯಿಲೆ ಸಮಸ್ಯೆಗೆ ಏನು ಪರಿಹಾರ?
– ನೀರಿನ ಅಂಶ ಅಧಿಕ ಇರುವ ಆಹಾರಗಳನ್ನು ಸೇವಿಸ ಬೇಕು. ಉಪ್ಪಿನ ಅಂಶ ಇರುವ ಆಹಾರ ಕಡಿಮೆ ಮಾಡಿ, ಹೆಚ್ಚು ಖಾರ, ಒಣಗಿದ ಆಹಾರ ಪದಾರ್ಥಗಳನ್ನು ತ್ಯಜಿಸಿ.

ಹಮೀದ್‌, ವಿಟ್ಲ
-  ಕೊರೊನಾ ಸೋಂಕಿತರು ಮಾಂಸಾಹಾರ ಸೇವಿಸಬಹುದೇ?
-ಸೇವಿಸಬಹುದು. ಕೋವಿಡ್‌ ಸಮಸ್ಯೆಗೆ ಆಯುರ್ವೇದದಲ್ಲಿ ಜ್ವರ ಅಂಶ ಎನ್ನಲಾಗುತ್ತದೆ. 7 ದಿನಗಳ ಕಾಲ ಲಘು ಆಹಾರ ಸೇವಿಸಿ. ಸೂಪ್‌,ಮೀನುಗಳನ್ನು ಸೇವಿಸಬಹುದು. 7 ದಿನದ ಬಳಿಕ ಸಾಮಾನ್ಯ ಆಹಾರ ಸ್ವೀಕರಿಸಬಹುದು.

ಪ್ರಕಾಶ್‌, ಮರವಂತೆ
- ಹಸಿ ತರಕಾರಿ ಮತ್ತು ಹಣ್ಣು, ಮೊಳಕೆ ಬಂದ ಧಾನ್ಯ ಶರೀರಕ್ಕೆ ಯಾವ ರೀತಿ ಉತ್ತಮ?
– ಇವುಗಳ ಸೇವನೆಯಿಂದ ಜೀರ್ಣಾಂಗವ್ಯೂಹ ಕಾರ್ಯ ನಿರ್ವಹಣೆ ಉತ್ತಮವಾಗುತ್ತದೆ. ಬೊಜ್ಜು ತಡೆಗೆ ಹಸಿ ತರಕಾರಿ ಉತ್ತಮ. ರೋಗಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್‌ ಪೂರೈಸುತ್ತದೆ. ಸಾತ್ವಿಕ ಆಹಾರ ಸೇವನೆಯಿಂದ ರೋಗನಿರೋಧಕ ಶಕ್ತಿಗೂ ಉತ್ತಮ.

ಜಯಪ್ರಕಾಶ್‌, ಎಕ್ಕೂರು
- ಜಂಕ್‌ಫ‌ುಡ್‌ಗಳು ಆರೋಗ್ಯಕ್ಕೆ ಹಾನಿಕಾರಕ ಎನ್ನಲಾ ಗುತ್ತಿದೆ. ಆದರೆ ರಸ್ತೆ ಬದಿ ಹೆಚ್ಚು ಜನರು ತಿನ್ನುತ್ತಾರೆ. ಇದರಿಂದ ಜನಸಾಮಾನ್ಯರಿಗೆ ತಪ್ಪು ಸಂದೇಶ ಹೋಗುವುದಿಲ್ಲವೇ?
-ಜನರೇಷನ್‌ ಗ್ಯಾಪ್‌ನ ಸಮಸ್ಯೆಯಿದು. ಹಿರಿಯರು ಸೂಚಿಸುವ ಆಹಾರಗಳನ್ನು ಯುವ ಸಮುದಾಯ ಸೇವಿಸಿ, ಜಂಕ್‌ ಫ‌ುಡ್‌ ವರ್ಜಿಸಬೇಕು. ಮೈದಾ ಬಳಕೆಯಿಂದ ಮಧು ಮೇಹ ಉಂಟಾಗುತ್ತದೆ. ಬ್ಲೀಚಿಂಗ್‌ಮೂಲಕ ಗೋಧಿಯನ್ನು ಬಿಳಿ ಮಾಡುವಾಗ ಬಳಸುವ ರಾಸಾಯನಿಕ ಹಾನಿಕರ. ಹಾಗಾಗಿ ಮೈದಾ ಬಳಸದಿರಲು ಪ್ರಯತ್ನಿಸಿ.

ಕೃಷ್ಣಾ ಶೆಟ್ಟಿ, ಐಕಳ
- ಯಾವ ಆಹಾರ ಸೇವನೆ ಉತ್ತಮ? ಅದರ ಸೇವನೆ ಹೇಗೆ?
-ಆಯುರ್ವೇದದ ಪ್ರಕಾರ ನಮ್ಮ ಶರೀರ ಸಸ್ಯಾಹಾರಕ್ಕೆ ಪೂರಕ. ಆದರೂ ಮಾಂಸಾಹಾರದ ಅಗತ್ಯ ಇರುವಾಗ ಸೇವಿಸಬೇಕು. ಚಳಿಗಾಲದಲ್ಲಿ ಮಾಂಸ ಸೇವನೆ ಪರವಾಗಿಲ್ಲ.

ಸರಿತಾ, ಉಡುಪಿ
-  ತಂದೆಯವರಿಗೆ ಕೊರೊನಾ ಪಾಸಿಟಿವ್‌ ಇದೆ. 8 ತಿಂಗಳಿನಿಂದ ಕೆಮ್ಮು ಇದೆ. ಹಣ್ಣುಹಂಪಲುಗಳನ್ನು ಸೇವಿಸಬಹುದೇ?
-ಅವರಿಗೆ ಆಗಾಗ ಶೀತ ಆಗುತ್ತಿದ್ದರೆ ಹೆಚ್ಚು ಹಣ್ಣು ಸೇವನೆ ಬೇಡ. ಕೆಮ್ಮು, ಕಫ‌ ಹೆಚ್ಚಿದ್ದರೆ ಸೇವಿಸಬೇಡಿ. ವಿಟಮಿನ್‌ ಸಿ ಹೆಚ್ಚಾಗಿರುವ ಪಪ್ಪಾಯ, ಮುಸುಂಬಿ ಸೂಕ್ತ.

ಕೃಷ್ಣಸ್ವಾಮಿ, ನಂತೂರು
-  ತೂಕ ಹೆಚ್ಚಳವಾಗಲು ಏನು ಮಾಡಬೇಕು?
– ಸಕ್ಕರೆ ಕಾಯಿಲೆಯ ಲಕ್ಷಣವೇ ತೂಕ ಹೆಚ್ಚಳವಾಗುವುದು. ಇದು ಹತೋಟಿಗೆ ಬರದಿದ್ದಾಗ ಒತ್ತಡಕ್ಕೆ ಒಳಗಾಗದೇ ಬೆಳಗ್ಗೆ ಎದ್ದ ಕೂಡಲೇ ವಾಕಿಂಗ್‌ ಹೋಗಿ. ಮೈದಾ, ಸಕ್ಕರೆ, ಉಪ್ಪು (ಪರ್ಯಾಯವಾಗಿ ಸೈಂಧವ ಲವಣ ಬಳಸಬಹುದು) ತ್ಯಜಿಸಿ. ಆಹಾರ ಜೀರ್ಣವಾಗುವಂತೆ ನೋಡಿಕೊಳ್ಳಿ. ಹಸಿ ತರಕಾರಿ ಹೆಚ್ಚು ಬಳಸಿ. ಯೋಗಾಸನ, ಪ್ರಾಣಾಯಾಮ ಮಾಡಿ. ಮಧು ಮೇಹ ಮಟ್ಟವನ್ನು ಪರೀಕ್ಷಿಸುತ್ತಿರಿ.

ಪ್ರಭಾಕರ, ಎರ್ಮಾಳು
-  17 ವರ್ಷದ ಹೆಣ್ಣುಮಗುವಿಗೆ ವಾಂತಿ ಭೇದಿ ಇದೆ. ನಿದ್ದೆ ಬರುತ್ತಿಲ್ಲ. ಏನು ಪರಿಹಾರ?
– ಮನೆಯಲ್ಲಿ ಪೇರಳೆ, ದಾಳಿಂಬೆ ಮರವಿದ್ದರೆ ಅದರ ಚಿಗು ರನ್ನು ದಿನಕ್ಕೆ 4-5 ಬಾರಿ ತುಪ್ಪದಲ್ಲಿ ಜಜ್ಜಿ ಜೀರಿಗೆ ಹಾಕಿ ಬಾಯಿಯಲ್ಲಿ ಜಗಿದು ರಸ ಕುಡಿಯಬೇಕು. ಅಥವಾ ಅಮೃತಬಳ್ಳಿಯ ಚಿಗುರೆಲೆಯನ್ನು ಬಿಸಿ ನೀರಿನಲ್ಲಿ ಹಿಚುಕಿ ಅರ್ಧಗಂಟೆಯಿಂದ 4 ಗಂಟೆ ಅವಧಿ ಬಿಟ್ಟು ಸೋಸಿ ಚಮಚ ಪ್ರಮಾಣದಲ್ಲಿ ಸೇವಿಸಲಿ.ಅಥವಾ ಪೇರಳೆ, ನೇರಳೆ, ಮಾವಿನ ಮರದ ಚಿಗುರನ್ನು ಜಜ್ಜಿ ಉಪ್ಪುಹಾಕಿ, ಎರಡು ಮೆಣಸು ಕಾಳು ಸೇರಿಸಿ ಜಗಿಯಲು ಕೊಡಿ. ರಸವನ್ನು ನುಂಗಲಿ. ದಾಳಿಂಬೆ ಮರದ ಚಕ್ಕೆ ಬಳಸಬಹುದು. ದಾಳಿಂಬೆಯ ಹೊರಪದರ ಹುಡಿಮಾಡಿ ಕಷಾಯ ಮಾಡಿ ನೀಡಬಹುದು.

ಕೃಷ್ಣ ಭಟ್‌, ಮುದರಂಗಡಿ
– ಆಹಾರಗಳಲ್ಲಿ ಬಣ್ಣ, ಕಲಬೆರಕೆ, ಕ್ರಿಮಿನಾಶಕ ಬಳಕೆಗೆ ಕಡಿವಾಣ ಹೇಗೆ?
– ಇಂದು ನಿಯಮಿತ ಆಹಾರ ಪದ್ಧತಿ ನಡೆಯುತ್ತಿಲ್ಲ. ಹಿಂದೆ ಆಹಾರವೇ ಔಷಧ. ಈಗ ಔಷಧವೇ ಆಹಾರ. ಆದಷ್ಟು ತರಕಾರಿ, ಧಾನ್ಯ, ತುಪ್ಪ, ಹಾಲು ಸೇವಿಸಿ. ಮನೆಯಲ್ಲಿಯೇ ತಯಾರಿಸಿದ ವಸ್ತುಗಳನ್ನು ಹೆಚ್ಚು ಬಳಸಿ. ಬಣ್ಣದ ಆಹಾರ ವಸ್ತುಗಳನ್ನು ತ್ಯಜಿಸಿ. ರೋಗನಿರೋಧಕ ಶಕ್ತಿ ವೃದ್ಧಿಗೆ ಗಂಜಿಗೆ ತುಪ್ಪ, ಹಾಲಿಗೆ ಅರಶಿನ, ಅಮೃತಬಳ್ಳಿ ಎಲೆಯ ರಸ ಸೇವಿಸಿ. 6 ರಸಗಳಿಂದ ಕೂಡಿದ ಆಹಾರ ರೋಗನಿರೋಧಕ ಶಕ್ತಿ ವೃದ್ಧಿಗೆ ಸಹಕಾರಿ.

ಇಸ್ಮಾಯಿಲ್‌, ವಿಟ್ಲ
– ಕೊರೊನಾ ಬರಲು ವಿಟಮಿನ್‌ ಸಿ ಕೊರತೆ ಕಾರಣವೇ?
– ರೋಗನಿರೋಧಕ ಶಕ್ತಿ ವೃದ್ಧಿಸಲು ವಿಟಮಿನ್‌ ಸಿ ಅಗತ್ಯ. ಉತ್ತಮ ಆಹಾರ ಕ್ರಮದಿಂದ ರೋಗನಿರೋಧಕ ಶಕ್ತಿ ವೃದ್ಧಿಸಬಹುದು. ವಿಟಮಿನ್‌ ಸಿಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಪೇರಳೆ, ಸೀಬೆ, ನೆಲ್ಲಿಕಾಯಿಯಲ್ಲಿ ವಿಟಮಿನ್‌ ಸಿ ಯಥೇತ್ಛವಾಗಿರುತ್ತದೆ.

ಅಬೂಬಕ್ಕರ್‌, ಮಾಣಿಲಕಟ್ಟೆ
– ರೋಗನಿರೋಧಕ ಶಕ್ತಿ ವೃದ್ಧಿಸುವುದು ಹೇಗೆ?
– ನಿತ್ಯ ಆಹಾರದಲ್ಲಿ ತುಪ್ಪ, ಹಾಲು, ಹೆಸರುಬೇಳೆ, ಶತಾವರಿ, ಅಶ್ವಗಂಧ, ದ್ರಾಕ್ಷಿ, ನೆಲ್ಲಿಕಾಯಿ, ತಿಮರೆ ಬಳಕೆ ಉತ್ತಮ. ತಿಮರೆಯನ್ನು ಬೆಳಗ್ಗಿನ ಹೊತ್ತು ಸೇವಿಸಿದರೆ ಹೆಚ್ಚು ಪರಿಣಾಮಕಾರಿ.

Advertisement

Udayavani is now on Telegram. Click here to join our channel and stay updated with the latest news.

Next