Advertisement

ಕಂಪ್ಲಿ: ಮೂರು ಸರ್ಕಾರಿ ಇಂಗ್ಲಿಷ್‌ ಶಾಲೆಗಳಿಗೆ ಅನುಮತಿ

04:17 PM May 25, 2019 | Naveen |

ಕಂಪ್ಲಿ: ರಾಜ್ಯ ಮೈತ್ರಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ತರಗತಿ ಆರಂಭಿಸುವ ಸರ್ಕಾರದ ಯೋಜನೆಯಂತೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ನಾಲ್ಕರಂತೆ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಅನುಮತಿ ದೊರಕಿದ್ದು, ಇದರಲ್ಲಿ ಕಂಪ್ಲಿ ತಾಲೂಕಿಗೆ 3 ಸೇರಿದಂತೆ ಕಂಪ್ಲಿ ವಿಧಾನಸಭಾ ಕ್ಷೇತ್ರಕ್ಕೆ 5 ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳು ಮಂಜೂರಾಗಿವೆ.

Advertisement

ಇದರಲ್ಲಿ ವಿಧಾನಸಭಾ ಕೇತ್ರದ ಕೇಂದ್ರ ಸ್ಥಾನದಲ್ಲಿ ಕಡ್ಡಾಯವಾಗಿ ಒಂದಿರಬೇಕೆನ್ನುವ ನಿಯಮದಂತೆ ಪಟ್ಟಣದ ಸತ್ಯನಾರಾಯಣ ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರಾಮಸಾಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಎಮ್ಮಿಗನೂರು ಸಹಿಪ್ರಾ ಶಾಲೆ ಮತ್ತು ಬಾದನಹಟ್ಟಿ, ವದ್ದಟ್ಟಿ ಸಹಿಪ್ರಾ ಶಾಲೆಗಳಲ್ಲಿ ಜೂ.1ರಿಂದ ಆಂಗ್ಲ ಮಾಧ್ಯಮ ಶಾಲೆಗಳು ಆರಂಭವಾಗಲಿವೆ.

ಈ ಮುಂಚಿನ ಪ್ರಕಟಣೆಯಂತೆ ಪಟ್ಟಣದ ಷಾಮಿಯಾಚಂದ್‌ ಸರ್ಕಾರಿ ಪಪೂ ಬಾಲಕರ ಕಾಲೇಜಿ(ಪ್ರೌಢಶಾಲಾ ವಿಭಾಗ)ಗೆ ಆಂಗ್ಲ ಮಾಧ್ಯಮ ಶಾಲೆ ತೆರೆಯಲು ಆದೇಶ ನೀಡಲಾಗಿತ್ತು. ಆದರೆ ಇಲ್ಲಿ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಲು ಸಾಧ್ಯವಿಲ್ಲದ ಕಾರಣ ಸಮೀಪದಲ್ಲಿರುವ ಸತ್ಯನಾರಾಯಣ ಪೇಟೆಯ ಸಹಿಪ್ರಾ ಶಾಲೆಗೆ ಆಂಗ್ಲ ಮಾಧ್ಯಮ ಶಾಲೆಗೆ ಅನುಮತಿ ಸಿಕ್ಕಿದೆ.

ಉಚಿತ ಆಂಗ್ಲ ಮಾಧ್ಯಮ ಶಾಲೆ: ತಾಲೂಕಿನ ಕಂಪ್ಲಿ ಮತ್ತು ರಾಮಸಾಗರ, ಎಮ್ಮಿಗನೂರು ಮತ್ತು ಕ್ಷೇತ್ರ ವ್ಯಾಪ್ತಿಯ ಬಾದನಹಟ್ಟಿ, ವದ್ದಟ್ಟಿ ಸಹಿಪ್ರಾ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ 1ನೇ ತರಗತಿ ಆರಂಭಗೊಳ್ಳಲಿವೆ. ಇದರಿಂದಾಗಿ ಬಡ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣದಡಿಯಲ್ಲಿ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ಉಚಿತವಾಗಿ ಆಂಗ್ಲ ಮಾಧ್ಯಮ ಶಿಕ್ಷಣ ಪಡೆಯಲು ಸಾಧ್ಯವಾಗಲಿವೆ.

ಶಿಕ್ಷಕರಿಗೆ ಸೂಕ್ತ ತರಬೇತಿ: ಆಂಗ್ಲ ಮಾಧ್ಯಮ ಆರಂಭಗೊಳ್ಳುವ ಸಹಿಪ್ರಾ ಶಾಲೆಗಳ ಆಯ್ದ ಶಿಕ್ಷಕರಿಗೆ ಸದ್ಯ ಡಯೆಟ್‌ನಲ್ಲಿ ತರಬೇತಿ ನೀಡಲಾಗುತ್ತಿದ್ದು, ಜೂ.1ರಿಂದ ಆಂಗ್ಲ ಮಾಧ್ಯಮದಲ್ಲಿ ತರಬೇತಿ ಪಡೆದ ಶಿಕ್ಷಕರು ಬೋಧಿಸಲಿದ್ದಾರೆ.

Advertisement

ಸರ್ಕಾರಿ ಶಾಲೆಗಳಲ್ಲಿನ ಕನ್ನಡ ಮಾಧ್ಯಮದ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸುವ ಪಾಲಕರ ಇಂಗಿತ ಅರಿತ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಉಳಿಸಿಕೊಳ್ಳಲೂ ಮುಂದಾಗಿದೆಯಲ್ಲದೆ, ಸರ್ಕಾರಿ ಇಂಗ್ಲಿಷ್‌ ಶಾಲೆಗಳ ಆರಂಭದಿಂದಾಗಿ ಆರ್ಥಿಕವಾಗಿ ಹಿಂದುಳಿದ ಪಾಲಕರಿಗೆ ವರದಾನವಾಗಿದೆ.

ಇಂಗ್ಲಿಷ್‌ ಶಾಲೆಗೆ ಬೇಕಾದ ಪಠ್ಯ ಪುಸ್ತಕಗಳ ಸಂಗ್ರಹವಿದ್ದು, ಈ ಶಾಲೆಗೆ ದಾಖಲಾಗುವ ಮಕ್ಕಳಿಗೆ ಸಕಾಲಕ್ಕೆ ಪಠ್ಯಪುಸ್ತಕ ಒದಗಿಸುವ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ಕೈಗೊಂಡಿದೆ.

ಶೀಘ್ರದಲ್ಲಿಯೇ ಮುಖ್ಯಗುರುಗಳ ಸಭೆ ಕರೆದು ಆಂಗ್ಲ ಮಾಧ್ಯಮ ಆರಂಭಿಸುವ ವಿಷಯವನ್ನು ಪಾಲಕ, ಪೋಷಕರಿಗೆ ತಿಳಿಸಿ ಹೆಚ್ಚಿನ ಸಂಖ್ಯೆಯಲ್ಲಿ ಆಂಗ್ಲ ಮಾಧ್ಯಮದ 1ನೇ ತರಗತಿಗೆ ಪ್ರವೇಶ ಪಡೆಯಲು ಕರಪತ್ರ ವಿತರಣೆ, ಬ್ಯಾನರ್‌ ಪ್ರದರ್ಶನ ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಆಂಗ್ಲ ಮಾಧ್ಯಮಕ್ಕೆ ಮಕ್ಕಳನ್ನು ಸೇರಿಸುವ ಪಾಲಕರು ಸರ್ಕಾರಿ ಶಾಲೆಯಲ್ಲಿ ಆರಂಭಗೊಂಡ ಆಂಗ್ಲ ಮಾಧ್ಯಮಕ್ಕೆ ಸೇರಿಸುವ ಮೂಲಕ ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕು.
ಎಲ್.ಡಿ.ಜೋಶಿ,
ಹೊಸಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next