ಬೆಂಗಳೂರು: ಹೆಬ್ಟಾಳ ವಿಧಾನಸಭಾ ಕ್ಷೇತ್ರದ ಮನೋರಾಯನಪಾಳ್ಯದಲ್ಲಿರುವ ಎಲ್ಲ ಬೃಹತ್ ನೀರುಗಾಲುವೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣ ಗೊಳಿಸಬೇಕು. ವಿನಾಕಾರಣ ವಿಳಂಬ ಮಾಡಿದರೆ, ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಆರ್. ಸಂಪತ್‌ರಾಜ್ ಎಚ್ಚರಿಸಿದರು.
ಬೃಹತ್ ನೀರುಗಾಲುವೆಯಿಂದ ದೊಡ್ಡಮ್ಮ ದೇವಸ್ಥಾನದ ಹತ್ತಿರದ ಕಾಂಪೌಂಡ್ ಗೋಡೆ ಕುಸಿದ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ ಅವರು, ಕೂಡಲೇ ನೀರುಗಾಲುವೆಯಲ್ಲಿರುವ ಹೂಳು ತೆಗೆದು ಪಕ್ಕದಲ್ಲಿರುವ ತಡೆಗೋಡೆಗಳನ್ನು ಎತ್ತರಿಸಿಸುವಂತೆ ಸೂಚಿಸಿದರು.
ಅಷ್ಟೇ ಅಲ್ಲ, ಸೀತಪ್ಪ ಬಡಾವಣೆ, ಚಾಮುಂಡಿನಗರ ಮುಖ್ಯರಸ್ತೆ, ಗಂಗಮ್ಮ ಲೇಔಟ್, ವಸಂತಪ್ಪ ಬ್ಲಾಕ್, ಎಸ್‌ಬಿಎಂ ಬಡಾವಣೆ, ಆನಂದನಗರ ಈ ಎಲ್ಲಾ ಬಡಾವಣೆಗಳಲ್ಲಿರುವ ಬೃಹತ್ ನೀರುಗಾಲುವೆ ಕಾಮಗಾರಿಯನ್ನು ಟಿಪ್ಪರ್‌ಗಳು ಹಾಗೂ ಜೆಸಿಬಿಗಳನ್ನು ಬಳಸಿಕೊಂಡು, ಕಾಮಗಾರಿ ಚುರುಕುಗೊಳಿಸಬೇಕು. ಈ ಎಲ್ಲಾ ಕಾಮಗಾರಿಗಳ ಮರುಪರಿಶೀಲನೆಯನ್ನು ನಾಲ್ಕು ದಿನಗಳ ನಂತರ ಮತ್ತೆ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಆದೇಶಿಸಿದರು.
ಇದಕ್ಕೂ ಮುನ್ನ ಗಂಗಾನಗರ ವಾರ್ಡ್‌ನ ಎಸ್‌ಬಿಎಂ ಬಡಾವಣೆಯಲ್ಲಿರುವ ಪ್ರಸಿಡೆನ್ಸಿ ಶಾಲೆ ಹತ್ತಿರ ಮಕ್ಕಳ ಆಟದ ಮೈದಾನದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸದೆ ಕ್ರೀಡಾಂಗಣ ಅಭಿವೃದ್ಧಿಪಡಿಸುವಂತೆ ಕೋರಿದರು. ಇದಕ್ಕೆ ಸ್ಪಂದಿಸಿದ ಮೇಯರ್, ಸಮಗ್ರ ಯೋಜನಾ ವರದಿ ಸಿದ್ಧಪಡಿಸಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಂತೆ ಕೋರಿದರು. ಕ್ರೀಡಾಂಗಣದ ಸುತ್ತ ಕಾಂಪೌಂಡ್ ಗೋಡೆ ಹಾಗೂ ಫೆನ್ಸಿಂಗ್ ಎತ್ತರಿಸುವಂತೆ ಸೂಚಿಸಿದರು.
ನಂತರ ಕುಂತಿ ಗ್ರಾಮ, ಚೋಳನಾಯಕನಹಳ್ಳಿ ಹತ್ತಿರ ಭೇಟಿ ನೀಡಿ ಪರಿಶೀಲಿಸಿದ್ದು ನಂತರ ಅನಂತ ಲಿಂಗೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಬ್ಟಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇರುವ ಎಲ್ಲ ರಸ್ತೆಗುಂಡಿಗಳನ್ನು ವಾರದಲ್ಲಿ ಮುಚ್ಚಬೇಕು. ಕ್ಷೇತ್ರದ ವಿವಿಧ ವಾರ್ಡ್‌ಗಳ ಬಹುತೇಕ ಪ್ರದೇಶಗಳಲ್ಲಿ ನಡೆಸಿದ ಕಾಮಗಾರಿಗಳ ತಪಾಸಣೆಯ ಖರ್ಚಿನ ಪ್ರತಿ ಅಂಶವನ್ನು ಡೈರಿಯಲ್ಲಿ ಗುರುತು ಮಾಡಿಕೊಳ್ಳಬೇಕು.
ಪ್ರತಿದಿನದ ಕಾಮಗಾರಿಗಳ ಪ್ರಗತಿಯ ಬಗ್ಗೆಯೂ ವಿವರ ನೀಡಬೇಕು. ಯಾವುದೇ ಸಂದರ್ಭದಲ್ಲಿ ತಪಾಸಣೆ ಬಂದ ವೇಳೆ ಡೈರಿ ಪರಿಶೀಲಿಸುತ್ತೇನೆ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಉಪ ಮಹಾಪೌರರಾದ ಪದ್ಮಾವತಿ ನರಸಿಂಹಮೂರ್ತಿ, ಸ್ಥಳೀಯ ಪಾಲಿಕೆ ಸದಸ್ಯರು, ವಲಯ ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳು ಮತ್ತಿತರರು ಉಪಸ್ಥಿತರಿದ್ದರು.