Advertisement

ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಿ

04:15 PM Apr 08, 2022 | Team Udayavani |

ಕೊಪ್ಪಳ: ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸದಿದ್ದರೆ ಎಲ್‌ ಆ್ಯಂಡ್‌ ಟಿ ಕಂಪನಿಯೊಂದಿಗಿನ ಒಪ್ಪಂದವನ್ನು ರದ್ದುಗೊಳಿಸುವುದಲ್ಲದೇ, ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಪಂ ಸಿಇಒ ಬಿ. ಫೌಜಿಯಾ ತರನ್ನುಮ್‌ ಎಚ್ಚರಿಕೆ ನೀಡಿದರು.

Advertisement

ನಗರದ ಜಿಪಂ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಬುಧವಾರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಡಿಬಿಒಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಐದು ವರ್ಷಗಳಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ನಡೆಯುತ್ತಲೇ ಇದೆ. ಈ ಕಾಮಗಾರಿ ಅನುಷ್ಠಾನದಲ್ಲಿ ಅನಗತ್ಯ ವಿಳಂಬ ಹಾಗೂ ಲೋಪದೋಷಗಳ ಕುರಿತು ಜಿಪಂಗೆ ಜನತೆ ದೂರು ಸಲ್ಲಿಸುತ್ತಿದ್ದಾರೆ. ಈ ಬಗ್ಗೆ ಪ್ರತಿ ಸಭೆಯಲ್ಲೂ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ನಿರ್ದೇಶನ ನೀಡುತ್ತಾ ಬರಲಾಗಿದೆ. ಆದರೂ ಎಲ್‌ ಆ್ಯಂಡ್‌ ಟಿ ಕಂಪನಿ ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ಹೊಂದಿರುವುದು ಕಂಡುಬರುತ್ತಿದೆ. ಆದ್ದರಿಂದ ಇದು ಅಂತಿಮ ಎಚ್ಚರಿಕೆಯಾಗಿದೆ. ಇದುವರೆಗೂ ವಿಳಂಬ ಕಾಮಗಾರಿ ನಡೆಸಿರುವ ಬಗ್ಗೆ ಪರಿಶೀಲಿಸಿ ದಂಡ ವಿಧಿ ಸಲಾಗುವುದಲ್ಲದೇ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಲ್‌ ಆ್ಯಂಡ್‌ ಟಿ ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥ ಶ್ರೀಧರ ಅವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕುಗಳಲ್ಲಿ ಕುಡಿಯುವ ನೀರಿನ ಯೋಜನೆಯಡಿ ಕೈಗೊಳ್ಳಬೇಕಾದ ವಿವಿಧ ಕಾಮಗಾರಿಗಳು ಇನ್ನೂ ಪೂರ್ಣವಾಗಿಲ್ಲ. ಓವರ್‌ ಹೆಡ್‌ ಟ್ಯಾಂಕ್‌ಗಳ ನಿರ್ಮಾಣ ಕಾಮಗಾರಿಗಳು ಅಪೂರ್ಣವಾಗಿವೆ. ಕೆಲವೆಡೆ ಪೂರ್ಣ ನಿರ್ಮಾಣಗೊಂಡ ಓಎಚ್‌ಟಿಗಳಿಂದ ನೀರಿನ ಸರಬರಾಜು ಸಮರ್ಪಕವಾಗಿ ಆಗುತ್ತಿಲ್ಲ. ಬೇಸಿಗೆಯಲ್ಲಿ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಬಂದಿದೆ. ಆದರೂ ಯೋಜನೆಯ ಅನುಷ್ಠಾನಾಧಿಕಾರಿಗಳು ಕಂಪನಿಯೊಂದಿಗೆ ಸಮನ್ವಯತೆ ಸಾಧಿಸಿ, ಕಾಮಗಾರಿ ಪೂರ್ಣಗೊಳಿಸದೇ ಇರುವುದರಿಂದ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ ಎಂದು ಅವರು ಅಧಿಕಾರಿಗಳ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು.

ನಿಯಮದಂತೆ ಪ್ರಮುಖ ಸಮತೋಲಿತ ಆಕರಗಳಲ್ಲಿ ನೀರನ್ನು ಸಂಗ್ರಹಿಸಿ ಅದನ್ನು ಪೈಪ್‌ಲೈನ್‌ ಮೂಲಕ ವಿವಿಧ ಗ್ರಾಮಗಳಿಗೆ ಸರಬರಾಜು ಮಾಡಬೇಕು. ಆದರೆ ತಾಲೂಕುಗಳಲ್ಲಿ ನೀರಿನ ಆಕರಗಳ ನಿರ್ಮಾಣವೇ ಅಪೂರ್ಣವಾಗಿದೆ. ಇನ್ನು ಅದರಿಂದ ಗ್ರಾಮಗಳಿಗೆ ನೀರು ಸರಬರಾಜು ಆಗುವುದು ಯಾವಾಗ ಎಂದು ಕಂಪನಿ ಹಾಗೂ ಅಧಿಕಾರಿಗಳನ್ನು ಪ್ರಶ್ನಿಸಿದ ಅವರು, ವಾರದೊಳಗೆ ಅಪೂರ್ಣ ಕಾಮಗಾರಿಗಳೆಲ್ಲ ಪೂರ್ಣಗೊಳ್ಳಬೇಕು. ಪೂರ್ಣಗೊಂಡ ಬಗ್ಗೆ ಪ್ರತಿ ಹಂತದಲ್ಲೂ ಮೈಕ್ರೋ ವರದಿ ತಯಾರಿಸಿ ದೈನಂದಿನ ಪ್ರಗತಿಯನ್ನು ಸಲ್ಲಿಸಬೇಕು. ಕಂಪನಿಯು ಈಗಾಗಲೇ ಹಲವು ದೂರು, ಆರೋಪ ಎದುರಿಸುತ್ತಿದ್ದು, ನಿಗದಿತ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಎಂದರು.

Advertisement

ಯಲಬುರ್ಗಾ ತಾಲೂಕಿನ ಎನ್‌ಎಚ್‌ ಹಾಗೂ ಎಸ್‌ಎಚ್‌ ರಸ್ತೆಗಳನ್ನು ಅಗೆದು ಪೈಪ್‌ಲೈನ್‌ ಅಳವಡಿಕೆ ಮಾಡಬೇಕಾಗುತ್ತದೆ. ಹಾಗೆ ಅಗೆದು ಹಾನಿ ಮಾಡಿದ ರಸ್ತೆಗಳನ್ನು ಕಂಪನಿಯವರೇ ಗುಣಮಟ್ಟಕ್ಕೆ ತಕ್ಕಂತೆ ದುರಸ್ತಿಗೊಳಿಸಬೇಕು ಹಾಗೂ ಜಿಲ್ಲೆಯಲ್ಲಿ ಓಎಚ್‌ಟಿ ನಿರ್ಮಾಣ ಅಗತ್ಯವಿದ್ದರೆ ಸರ್ಕಾರಿ ಜಾಗ ನೀಡಲಾಗಿದೆ. ಕೆಲ ಗ್ರಾಮಗಳಲ್ಲಿ ಸರ್ಕಾರಿ ಜಾಗ ಇಲ್ಲದಿದ್ದರೆ ಖಾಸಗಿ ಜಾಗ ಖರೀದಿಸಿ, ಆ ಸ್ಥಳದಲ್ಲಿ ಕಾಮಗಾರಿ ನಡೆಸುವ ಜವಾಬ್ದಾರಿ ಕಂಪನಿಯವರದ್ದಾಗಿದೆ. ಅಲ್ಲದೇ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಪ್ರಮಾಣದ ಮಾನವ ಸಂಪನ್ಮೂಲದ ಕೊರತೆಯಿದೆ. ಈ ಬಗ್ಗೆ ಹಿಂದೆಯೇ ಕೆಲಸಗಾರರ ಆಧಾರ್‌ ಕಾರ್ಡ್‌ ಸಂಖ್ಯೆ ಸಹಿತ ಮಾಹಿತಿ ನೀಡುವಂತೆ ಸೂಚಿಸಲಾಗಿತ್ತು. ಆದರೂ ಕಂಪನಿ ಈ ಬಗ್ಗೆ ಯಾವುದೇ ನಿಖರ ಮಾಹಿತಿ ನೀಡಿಲ್ಲ. ಆದ್ದರಿಂದ ಅಗತ್ಯ ಪ್ರಮಾಣದ ಕೆಲಸಗಾರರನ್ನು ನೇಮಿಸಿಕೊಂಡು ಕಾಮಗಾರಿ ಪೂರ್ಣಗೊಳಿಸಲು ಕೂಡಲೇ ಕ್ರಮ ಕೈಗೊಳ್ಳಿ ಎಂದರು.

ಡಿಬಿಒಟಿ, ಜೆಜೆಎಂ, ಆರ್‌ಒ ಪ್ಲಾಂಟ್‌ ಸೇರಿದಂತೆ ವಿವಿಧ ಕುಡಿಯುವ ನೀರಿನ ಯೋಜನೆಗಳ ಬಗ್ಗೆ ಪ್ರಗತಿ ಪರಿಶೀಲಿಸಿದ ಅವರು ಯಾವುದೇ ಯೋಜನೆಯಲ್ಲಿ ಅನಗತ್ಯ ವಿಳಂಬ, ಕಳಪೆ ಕಾಮಗಾರಿ ಹಾಗೂ ನಿರ್ಲಕ್ಷ್ಯ ಕಂಡುಬಂದರೆ ಸಂಬಂಧಿಸಿದ ಎಲ್ಲ ಅಧಿಕಾರಿ, ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಜಿಪಂ ಉಪಕಾರ್ಯದರ್ಶಿ ಶರಣಬಸವರಾಜ, ಅಭಿಯಂತರ ರಂಗಯ್ಯ ಬಡಿಗೇರ, ಎಂಪಿಸಿಯ ಅತುಲ್‌ ಸೇರಿದಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಸೆಕ್ಷನ್‌ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next