ಬೆಳಗಾವಿ: ನಗರದಲ್ಲಿ ರೈಲ್ವೆ ನಿಲ್ದಾಣ ಕಾಮಗಾರಿಯನ್ನು ಮುಂದಿನ ವರ್ಷ ಮಾರ್ಚ್ ವೇಳೆಗೆ ಪೂರ್ಣಗೊಳಿಸಬೇಕು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುರುವಾರ ರೈಲು ನಿಲ್ದಾಣ ಕಾಮಗಾರಿ ನಡೆದಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಈ ಕಾಮಗಾರಿ ಇದೇ ವರ್ಷ ನವಂಬರ್‌ದಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ ಕೋವಿಡ್ ವೈರಸ್ ಹಾವಳಿ ತಡೆಗಟ್ಟಲು ಲಾಕ್‌ಡೌನ್ ಜಾರಿ ಮಾಡಿದ್ದರಿಂದ ವಿಳಂಬವಾಗಿದೆ ಎಂದರು.
ಈಗ ಎಲ್ಲ ಕಡೆ ಲಾಕ್‌ಡೌನ್ ಸಡಿಲಿಕೆ ಮಾಡಿ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಅವಕಾಶ ನೀಡಲಾಗಿದೆ. ಆದ್ದರಿಂದ ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು 2021ರ ಮಾರ್ಚ್ ವೇಳೆಗೆ ಇದನ್ನು ಪೂರ್ಣಗೊಳಿಸಬೇಕು ಎಂದು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಳೆಯುತ್ತಿರುವ ಜನಸಂಖ್ಯೆ ಮತ್ತು ತಂತ್ರಜ್ಞಾನವನ್ನು ಗಮನದಲ್ಲಿಟ್ಟುಕೊಂಡು ಬೆಳಗಾವಿ ರೈಲ್ವೆ ನಿಲ್ದಾಣ ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಲಾಗಿದೆ. ಈ ನಿಲ್ದಾಣವು ಇತಿಹಾಸದ ನೆನಪುಗಳಿಗೆ ಜೀವ ತುಂಬುವ ನಿಲ್ದಾಣವಾಗಿದೆ. ಇದು ಸಮಗ್ರ ಅಭಿವೃದ್ಧಿ ಹೊಂದಬೇಕು ಎಂಬುದು ಬಹಳ ದಿನಗಳ ಕನಸಾಗಿತ್ತು. ಅದು ಈಗ ಸಾಕಾರಗೊಳ್ಳುತ್ತಿದೆ ಎಂದು ಹೇಳಿದರು.
ಮಹಾತ್ಮಾಗಾಂಧಿ ಅವರು 1924 ರ ಕಾಂಗ್ರೆಸ್ ಅಧಿವೇಶನದ ಸಮಯದಲ್ಲಿ ಬೆಳಗಾವಿಯಲ್ಲಿ ನಡೆದಾಡಿದ ಇತಿಹಾಸವನ್ನು ನೆನಪಿಸುವಂತೆ ನಿಲ್ದಾಣದ ಮುಂಭಾಗವನ್ನು ವಿನ್ಯಾಸಗೊಳಿಸಲು ತಜ್ಞರು ಯೋಜನೆಯ ರೂಪರೇಷೆ ಸಿದ್ಧಪಡಿಸಿದ್ದಾರೆ. ಮುಂದಿನ ಮಾರ್ಚ್ ವೇಳೆಗೆ ಇದಕ್ಕೆ ಸ್ಪಷ್ಟರೂಪ ಸಿಗಲಿದೆ ಎಂದರು.
ಈ ಸಂದರ್ಭದಲ್ಲಿ ರೈಲ್ವೆ ವಿಕಾಸ ನಿಗಮ ಹಾಗೂ ನೈಋತ್ಯ ರೈಲ್ವೆ ಇಲಾಖೆ ಸ್ಥಳೀಯ ಅಧಿಕಾರಿಗಳು ಉಪಸ್ಥಿತರಿದ್ದು ಕಾಮಗಾರಿಯ ಮಾಹಿತಿ ನೀಡಿದರು.