ಮೈಸೂರು: ಶಾಸಕರ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಹಾಗೂ ತ್ವರಿತವಾಗಿ ಮುಗಿಸಬೇಕೆಂದು ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ತಿಳಿಸಿದರು.
ಶನಿವಾರ ವರುಣಾ ಕ್ಷೇತ್ರದ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ದೇವಸ್ಥಾನಗಳು, ಅಂಗನವಾಡಿ ಕಟ್ಟಡಗಳು, ಸಮುದಾಯ ಭವನಗಳು, ಕುಡಿಯುವ ನೀರು, ರಸ್ತೆ ಮತ್ತು ಚರಂಡಿ ಕಾಮಗಾರಿಗಳು ಯಾವ ಹಂತದಲ್ಲಿ ನಡೆಯುತ್ತಿವೆ, ಹಣ ಬಿಡುಗಡೆಯಾಗಿದೆಯಾ?
ಆಗಿಲ್ಲವೆ, ಎಷ್ಟು ಸಮಯಬೇಕು, ಮುಂದುವರಿದ ಕಾಮಗಾರಿಗಳೆಷ್ಟು? ಹೊಸ ಕಾಮಗಾರಿಗಳು ಎಲ್ಲೆಲ್ಲಿ ಆಗಬೇಕು ಎಂಬುದರ ಬಗ್ಗೆ ಮಾಹಿತಿ ಪಡೆದ ಅವರು, ಯಾವುದೇ ಕಾಮಗಾರಿಗೆ ಹಣದ ಅವಶ್ಯಕತೆ ಇದ್ದರೆ ನಮ್ಮ ಗಮನಕ್ಕೆ ತರಬೇಕು. ಸಾರ್ವಜನಿಕರ ತೆರಿಗೆ ಹಣ ಪೋಲಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದರು.
ಯಾವುದೇ ಕಾಮಗಾರಿ ನಿಂತು ಹೋಗಬಾರದು. ನಿರ್ಮಿತಿ ಕೇಂದ್ರ ಮತ್ತು ಲ್ಯಾಂಡ್ ಆರ್ಮಿ ವತಿಯಿಂದ ನಡೆಯುತ್ತಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಸಾರ್ವಜನಿಕರಿಗೆ ತೊಂದರೆ ಆಗದಂತೆ ಗುಣಮಟ್ಟದ ಕಾಮಗಾರಿಗಳನ್ನು ಮಾಡಬೇಕು.
ಹೊಸ ಕಾಮಗಾರಿಗಳ ಅಂದಾಜು ಪಟ್ಟಿಯನ್ನು ತಯಾರಿಸಿ ಕೊಡಬೇಕು. ಯಾವುದೇ ಸಮಸ್ಯೆ ಇದ್ದರೂ ಸಹ ನಮ್ಮ ಗಮನಕ್ಕೆ ತರಬೇಕು ಎಂದರು. ಸಭೆಯಲ್ಲಿ ನಿರ್ಮಿತಿ ಕೇಂದ್ರದ ನಿರ್ದೇಶಕ ಮಂಜುನಾಥ್, ಎಇಇ ಜಗದೀಶ್ ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಜರಿದ್ದರು.